ಅರುಣಾಚಲ ಪ್ರದೇಶ ಗಡಿ ಬಳಿ ಕಾಣೆಯಾಗಿದ್ದ ಐವರು ಭಾರತೀಯರ ಹಸ್ತಾಂತರಿಸಿದ ಚೀನಾ!
ಅರುಣಾಚಲ ಪ್ರದೇಶದ ಚೀನಾ ಗಡಿ ಬಳಿ ಭಾರತದ ಐವರು ನಾಗರೀಕರು ಕಾಣೆಯಾದ ಘಟನೆಯಿಂದ ಉಭಯ ದೇಶದ ನಡುವೆ ಉದ್ವಿಘ್ನವಾತಾವರಣ ಸೃಷ್ಟಿಯಾಗಿತ್ತು. ಚೀನಾ ಸೇನೆ ಐವರು ಭಾರತೀಯರನ್ನು ವಶಕ್ಕೆ ಪಡೆದಿದೆ ಎಂದು ಭಾರತೀ ಸೇನೆ ಹೇಳಿತ್ತು. ಬಿಡುಗಡೆಗಾಗಿ ತೀವ್ರ ಒತ್ತಡ ಹಾಕಲಾಗಿತ್ತು. ಇದೀಗ ಚೀನಾ ಸೇನೆ ಕಾಣೆಯಾಗಿದ್ದ ಐವರನ್ನು ಭಾರತಕ್ಕೆ ಹಸ್ತಾಂತರಿಸಿದೆ.
ಅರುಣಾಚಲ ಪ್ರದೇಶ(ಸೆ.12): ಲಡಾಖ್ ಗಡಿ ಸಂಘರ್ಷದ ಬೆನ್ನಲ್ಲೇ ಅರುಣಾಚಲ ಪ್ರದೇಶದ ಅಪ್ಪರ್ ಸುಬಾನ್ಸಿರಿ ಗಡಿಭಾಗದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ಸೆಪ್ಟೆಂಬರ್ 2 ರಂದು ಐವರು ಭಾರತೀಯರು ಅರಿವಿಲ್ಲದೆ ಚೀನಾ ಗಡಿ ಪ್ರವೇಶಿಸಿ ಕಾಣೆಯಾಗಿದ್ದರು. ಈ ಕುರಿತು ಭಾರತೀಯ ಸೇನೆ ಐವರು ಭಾರತೀಯರನ್ನು ಬಿಡುಗಡೆ ಮಾಡುವಂತೆ ಚೀನಾ ಸೇನೆಗೆ ಒತ್ತಾಯ ಮಾಡಿತ್ತು. ಭಾರತದ ಸತತ ಪ್ರಯತ್ನದ ಫಲವಾಗಿ ಇದೀಗ ಐವರು ಭಾರತೀಯನ್ನು ಚೀನಾ ಸೇನೆ ಹಸ್ತಾಂತರಿಸಿದೆ.
ಲಡಾಖ್ ಬೆನ್ನಲ್ಲೇ ಅರುಣಾಚಲ ಪ್ರದೇಶ ನಮ್ಮದು ಎಂದು ಚೀನಾ; ಮತ್ತೆ ಶುರುವಾಯ್ತು ಕಿರಿಕ್!...
"
ಚೀನಾ ಸೇನೆ ಐವರು ಭಾರತೀಯರನ್ನು ವಶಕ್ಕೆ ಪಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ತಕ್ಷಣವೇ ಭಾರತೀಯ ಸೇನೆ ಉನ್ನತ ಮಟ್ಟದಲ್ಲಿ ಚೀನಾ ಸೇನೆ ಮೇಲೆ ಒತ್ತಾಯ ಹಾಕಿತ್ತು. ಇನ್ನು ಸೆಪ್ಟೆಂಬರ್ 8 ರಂದು ಚೀನಾ ಸೇನೆ ಐವರು ಭಾರತೀಯರು ಚೀನಾ ಗಡಿ ಪ್ರವೇಶಿಸಿದ ಕಾರಣ ತಮ್ಮ ವಶದಲ್ಲಿರುವುದಾಗಿ ಹಾಟ್‌ಲೈನ್ ಸಂದೇಶ ಕಳುಹಿಸಿತ್ತು.
ಇಂದು(ಸೆ.12) ಚೀನಾ ಸೇನೆ ಕಿಬಿತ್ತು ಗಡಿ ಮೂಲಕ ಐವರು ಭಾರತೀಯರನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ಸದ್ಯ ಭಾರತಕ್ಕೆ ಮರಳಿರುವ ಐವರು ಭಾರತೀಯರನ್ನು 14 ದಿನ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. 14 ದಿನದ ಬಳಿಕ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಸೇನೆ ಹೇಳಿದೆ.
ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪ್ರೇಮಾ ಖಂಡು ಈ ಕುರಿತು ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಭಾರತೀಯ ಸೇನೆಗೆ ಹಾಗೂ ಅಧಿಕಾರಿಗಳ ಧನ್ಯವಾದ ಹೇಳಿದ್ದಾರೆ.