Asianet Suvarna News Asianet Suvarna News

Chief of Defence Staff: ಅನಿಲ್‌ ಚೌಹಾಣ್‌ ದೇಶದ ನೂತನ ಸಿಡಿಎಸ್‌!

ಬಿಪಿನ್‌ ರಾವತ್‌ ಅಕಾಲಿಕ ಸಾವಿನ ಬಳಿಕ ತೆರವಾಗಿದ್ದ ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ ಅಥವಾ ಸಿಡಿಎಸ್‌ ಹುದ್ದೆಗೆ ಕೇಂದ್ರ ಸರ್ಕಾರ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಅನಿಲ್‌ ಚೌಹಾಣ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಅವರು ದೇಶದ 2ನೇ ಸಿಡಿಎಸ್‌ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
 

Chief of Defence Staff Government appoints Lt General Anil Chauhan as CDS san
Author
First Published Sep 28, 2022, 6:56 PM IST

ನವದೆಹಲಿ (ಸೆ. 28): ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಅನಿಲ್‌ ಚೌಹಾಣ್‌ ಅವರು ದೇಶದ ಮುಂದಿನ ಚೀಫ್‌ ಆಫ್‌ ಡಿಫೆನ್ಸ್‌ ಅಥವಾ ಸಿಡಿಎಸ್‌ ಆಗಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅದರೊಂದಿಗೆ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಮಿಲಿಟರಿ ವ್ಯವಹಾರಗಳ ಇಲಾಖೆಯ ಕೇಂದ್ರ ಸರ್ಕಾರದ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಣೆ ಮಾಡಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಮುಂದಿನ ಆದೇಶದವರೆಗೂ ಅವರು ಈ ಎರಡು ಸ್ಥಾನಗಳಲ್ಲಿ ಇರಲಿದ್ದಾರೆ ಎಂದು ತಿಳಿಸಿದ್ದಾರೆ.  ಸುಮಾರು 40 ವರ್ಷಗಳ ವೃತ್ತಿಜೀವನದಲ್ಲಿ, ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು ಹಲವಾರು ಕಮಾಂಡ್, ಸಿಬ್ಬಂದಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಅದಲ್ಲದೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾರತದಲ್ಲಿ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯನ್ನೂ ನಡೆಸುವ ಮೂಲಕ ಈ ಭಾಗದ ಗರಿಷ್ಠ ಅನುಭವವನ್ನು ಹೊಂದಿದ್ದಾರೆ. ಪರಮ ವಿಶಿಷ್ಟ ಸೇವಾ ಮೆಡಲ್‌, ಉತ್ತಮ್‌ ಯುದ್ಧ ಸೇವಾ ಮೆಡಲ್‌, ಅತಿ ವಿಶಿಷ್ಟ ಸೇವಾ ಮೆಡಲ್‌, ಸೇವಾ ಮೆಡಲ್‌, ವಿಶಿಷ್ಟ ಸೇವಾ ಮೆಡಲ್‌ ಗೌರವವನ್ನೂ ಪಡೆದುಕೊಂಡ ವ್ಯಕ್ತಿಯಾಗಿದ್ದಾರೆ.

1961 ಮೇ 18 ರಂದು ಜನಿಸಿದ್ದ ಅನಿಲ್‌ ಚೌಹಾಣ್‌ (Anil Chauhan), 1981ರಲ್ಲಿ ಭಾರತೀಯ ಸೇನೆಯ (Indian Army) 11 ಗೂರ್ಖಾ ರೈಫಲ್ಸ್‌ನಲ್ಲಿ ಸೇವೆಗೆ ನಿಯೋಜನೆಯಾಗಿದ್ದರು. ಅವರು ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿ. ಮೇಜರ್‌ ಜನರಲ್‌ ಶ್ರೇಣಿಯಲ್ಲಿ, ಅನಿಲ್‌ ನೌಹಾಣ್‌ ನಾರ್ಥರ್ನ್‌ ಕಮಾಂಡ್‌ನಲ್ಲಿ ಪ್ರಮುಖವಾಗಿದ್ದ ಬಾರಾಮುಲಾ ವಲಯದಲ್ಲಿ ಇನ್‌ಫ್ಯಾಂಟ್ರಿ  ವಿಭಾಗದ ನೇತೃತ್ವ ವಹಿಸಿದ್ದರು. ನಂತರ ಲೆಫ್ಟಿನೆಂಟ್ ಜನರಲ್ ಆಗಿ, ಅವರು ಈಶಾನ್ಯದಲ್ಲಿ ಕಾರ್ಪ್ಸ್‌ಗೆ ನೇತೃತ್ವ ವಹಿಸಿಕೊಂಡಿದ್ದರು. ಆ ಬಳಿಕ, ಸೆಪ್ಟೆಂಬರ್ 2019 ರಿಂದ ಪೂರ್ವ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದ್ದರು.  ಅನಿಲ್‌ ಚೌಹಾಣ್‌, ಮೇ 2021 ರಲ್ಲಿ ಸೇವೆಯಿಂದ ನಿವೃತ್ತರಾಗುವವರೆಗೆ ಅಧಿಕಾರವನ್ನು ಹೊಂದಿದ್ದರು. 

Final Salute to Bipin Rawat: ಮಧ್ಯಾಹ್ನ ಸಾರ್ವಜನಿಕರ ವೀಕ್ಷಣೆಗೆ ಅವಕಾಶ: ಸೇನಾ ಗೌರವದೊಂದಿಗೆ ಇಂದು ಅಂತ್ಯಕ್ರಿಯೆ

Chief of Defence Staff Government appoints Lt General Anil Chauhan as CDS san

ಪ್ರಮುಖ ಕಮಾಂಡ್‌ಗಳ ನಾಯಕರಾದ ಅನುಭವದೊಂದಿಗೆ,  ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕನ ಉಸ್ತುವಾರಿ ಸೇರಿದಂತೆ ಪ್ರಮುಖ ಸಿಬ್ಬಂದಿ ನೇಮಕಾತಿಗಳ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು. ಇದಕ್ಕೂ ಮೊದಲು, ಅನಿಲ್‌ ಚೌಹಾಣ್‌ (Chief of Defence Staff) ಅಂಗೋಲಾಕ್ಕೆ ವಿಶ್ವಸಂಸ್ಥೆಯ ಮಿಷನ್ ಅಡಿಯಲ್ಲಿ ಸೇವೆ ಸಲ್ಲಿಸಿದ್ದರು.2021ರ ಮೇ  31 ರಂದು ಅಧಿಕಾರಿ (CDS) ಭಾರತೀಯ ಸೇನೆಯಿಂದ ನಿವೃತ್ತರಾದರು. ಸೇನೆಯಿಂದ ನಿವೃತ್ತರಾದ ನಂತರವೂ ಅವರು ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರದ ವಿಷಯಗಳಿಗೆ ತನ್ನ ಸೇವೆ ಸಲ್ಲಿಸುವುದನ್ನುಮುಂದುವರಿಸಿದ್ದರು. ಸೇನೆಯಲ್ಲಿನ ಅವರ ವಿಶಿಷ್ಟ ಮತ್ತು ಶ್ರೇಷ್ಠ ಸೇವೆಗಾಗಿ, ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳನ್ನು ನಿಡಲಾಗಿದೆ.

RIP Gen Bipin Rawat : ದೇಶದ ಮೊದಲ ಸರ್ಜಿಕಲ್‌ ಸ್ಟ್ರೈಕ್‌ ಸ್ಪೆಷಲಿಸ್ಟ್ ರಾವತ್

ಬಿಪಿನ್‌ ರಾವತ್‌ ನಿಧನರಾದ ಬಳಿಕ ತೆರವಾಗಿದ್ದ ಸ್ಥಾನ: ಚೀಫ್‌ ಆಫ್‌ ಡಿಫೆನ್ಸ್‌ (Bipin Rawat)ಎನ್ನುವುದು ಕೇಂದ್ರ ಸರ್ಕಾರ ಸೃಷ್ಟಿಸಿದ ಹೊಸ ಹುದ್ದೆ. ಈ ಹುದ್ದೆಯ ಮೂಲಕವೇ ದೇಶದ ಮೂರೂ ರಕ್ಷಣಾ ಪಡೆಗಳ ಮಾಹಿತಿಯನ್ನು ಸರ್ಕಾರ ಪಡೆದುಕೊಳ್ಳುತ್ತದೆ. ಸಿಡಿಎಸ್‌ ನಂತರದ ಸ್ಥಾನದಲ್ಲಿ ಆಯಾ ಸೇನೆಗಳ ಮುಖ್ಯಸ್ಥರ ಹುದ್ದೆ ಬರುತ್ತದೆ. ಭಾರತೀಯ ಭೂಸೇನೆಯ ಮುಖ್ಯಸ್ಥರಾಗಿದ್ದ ಜನರಲ್‌ ಬಿಪಿನ್‌ ರಾವತ್‌ ಅವರನ್ನೇ ಸರ್ಕಾರ ದೇಶದ ಮೊದಲ ಸಿಡಿಎಸ್‌ ಆಗಿ 2020ರ ಜನವರಿ 1 ರಂದು ನೇಮಕವಾಗಿದ್ದರು. 2021ರ ಡಿಸೆಂಬರ್‌ 8 ರಂದು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕನೂರಿನಲ್ಲಿ ಬಿಪಿನ್‌ ರಾವತ್‌ ಹಾಗೂ ಅವರ ಪತ್ನಿ ಸೇರಿದಂತೆ ವಿವಿಧ ಸೇನಾಧಿಕಾರಿಗಳಿದ್ದ ಸೇನಾ ಹೆಲಿಕಾಪ್ಟರ್‌ ಭಾರೀ ದುರಂತಕ್ಕೀಡಾಗಿತ್ತು. ಈ ಅಪಘಾತದಲ್ಲಿ ಬಿಪಿನ್‌ ರಾವತ್‌ ಸಾವು ಕಂಡಿದ್ದರು. ಬಿಪಿನ್‌ ರಾವತ್‌ ಸಾವಿನ ಬಳಿಕ, ಜನರಲ್‌ ಮನೋಜ್‌ ಮುಖುಂದ್‌ ನರ್ವಾನೆ ಅವರನ್ನು ಚೇರ್ಮನ್‌ ಆಫ್‌ ದ ಚೀಫ್‌ ಆಫ್‌ ಸ್ಟಾಫ್ಸ್‌ ಕಮಿಟಿಗೆ ನೇಮಕ ಮಾಡಿದ್ದರೂ, ಸಿಡಿಎಸ್‌ ಸ್ಥಾನ ತೆರವಾಗಿಯೇ ಇತ್ತು.

Follow Us:
Download App:
  • android
  • ios