ಸೆಕ್ಯುರಿಟಿಯನ್ನು ಕರೆಯಿರಿ, ಇವ್ರನ್ನ ಹೊರಗೆ ಹಾಕಿ; ನೀಟ್ ವಿಚಾರಣೆ ವೇಳೆ ಹಿರಿಯ ವಕೀಲರಿಗೆ ಎಚ್ಚರಿಸಿದ ಸಿಜೆಐ
ಸಾಮಾನ್ಯವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅದೆಷ್ಟೇ ಹಿರಿಯ ವಕೀಲರಾಗಿರಲಿ ಮುಖ್ಯ ನ್ಯಾಯಮೂರ್ತಿಯ ಎದುರು ಮಾತನಾಡೋದಿಲ್ಲ. ಆದರೆ, ಮಂಗಳವಾರ ಇದಕ್ಕೆ ಅಪವಾದ ಎನ್ನುವಂಥ ಘಟನೆ ಸಿಜೆಐ ಕೋರ್ಟ್‌ನಲ್ಲಿ ನಡೆದಿದೆ.
ನವದೆಹಲಿ (ಜು.23): ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ನೀಟ್-ಯುಜಿ ಸಂಬಂಧಿತ ಅರ್ಜಿಗಳ ವಿಚಾರಣೆಗೆ ಅಡ್ಡಿಪಡಿಸಿದ್ದಕ್ಕಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹಿರಿಯ ವಕೀಲ ಮ್ಯಾಥ್ಯೂಸ್ ನೆಡುಂಪಾರ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಪ್ರಕರಣದಲ್ಲಿ ಅರ್ಜಿದಾರರೊಬ್ಬರನ್ನು ಪ್ರತಿನಿಧಿಸುತ್ತಿರುವ ಮತ್ತೊಬ್ಬ ಹಿರಿಯ ವಕೀಲ ನರೇಂದ್ರ ಹೂಡಾ ಅವರು ಮಂಡಿಸುತ್ತಿದ್ದ ವಾದಕ್ಕೆ ನೆಡುಂಪಾರ ಅಡ್ಡಿಪಡಿಸಿದ ನಂತರ ಮುಖ್ಯ ನ್ಯಾಯಮೂರ್ತಿಗಳು ಮಧ್ಯಪ್ರವೇಶಿಸಿ ನೆಡುಂಪಾರರನ್ನು ತಡೆದಿದ್ದರು. ಹೂಡಾ ಅವರ ವಾದವನ್ನು ಅರ್ಧಕ್ಕೆ ನಿಲ್ಲಿಸಿದ ನೆಡುಂಪಾರಾ, ನನಗೆ ಏನೋ ಹೇಳೋದಿದೆ ಎಂದು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಜೆಐ ಡಿವೈ ಚಂದ್ರಚೂಡ್, ಹೂಡಾ ಅವರ ವಾದ ಮುಕ್ತಾಯವಾದ ಬಳಿಕ ನೀವು ಮಾತನಾಡಿ ಎಂದರು. ಈ ವೇಳೆ ನೆಡುಂಪಾರಾ ಸಿಜೆಐಗೆ ಸವಾಲ್ ಎಸೆದು ನಾನು ಇಲ್ಲಿನ ಅತ್ಯಂತ ಹಿರಿಯ ವಕೀಲ ಎಂದು ಹೇಳಿದರು.
ಮ್ಯಾಥ್ಯೂಸ್ ನೆಡುಂಪಾರಾ ಹೇಳಿದ ಈ ಮಾತು ಸಿಜೆಐಗೆ ಹಿಡಿಸಲಿಲ್ಲ. ಪೀಠದಲ್ಲಿಯೇ ಕುಳಿತು ಎಚ್ಚರಿಕೆ ನೀಡಿದ ಅವರು, 'ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ. ಪೀಠಕ್ಕೆ ನೀವು ಎದುರು ಮಾತನಾಡುವಂತಿಲ್ಲ. ಈ ಕೋರ್ಟ್‌ಗೆ ನಾನು ಮುಖ್ಯಸ್ಥ. ಸೆಕ್ಯುರಿಟಿಯನ್ನ ಕರೆಯಿರಿ. ಇವರನ್ನು ಕೋರ್ಟ್‌ನಿಂದ ಹೊರಹಾಕಿ..' ಎಂದು ಹೇಳಿದರು. ನಾನು ಈಗಾಗಲೇ ಹೊರಗೆ ಹೋಗುತ್ತಿದ್ದೇನೆ. ಇದನ್ನು ನೀವು ಮತ್ತೆ ಹೇಳುವ ಅಗತ್ಯವಿಲ್ಲ ಎಂದು ತಿಳಿಸಿದರು.
ಇದಕ್ಕೆ ಮತ್ತಷ್ಟು ಸಿಟ್ಟಾದ ಸಿಜೆಐ, 'ನೀವು ಹೀಗೆ ಮಾತನಾಡುವ ಅಗತ್ಯವಿಲ್ಲ. ನೀವೀಗ ಇಲ್ಲಿಂದ ಹೊರಡಬಹುದು. ಕಳೆದ 24 ವರ್ಷಗಳಿಂದ ನಾನು ನ್ಯಾಯಾಂಗ ವ್ಯವಸ್ಥೆಯಲ್ಲಿದ್ದೇನೆ. ವಕೀಲರು ಈ ಕೋರ್ಟ್ ಹೇಗೆ ನಡೆಯಬೇಕು ಎಂದು ತಿಳಿಸೋದಕ್ಕೆ ನಾನು ಬಿಡೋದಿಲ್ಲ' ಎಂದರು. ಇದಕ್ಕೆ ನೆಡುಂಪಾರಾ, ನಾನು 1979ರಿಂದಲೂ ಈ ಕೋರ್ಟ್‌ಅನ್ನು ನೋಡುತ್ತಿದ್ದೇನೆ ಎಂದು ಎದುರು ಉತ್ತರಿಸಿದರು.
ನೆಡುಂಪಾರ ಅವರು ತಮ್ಮ ನಡವಳಿಕೆಯನ್ನು ಮುಂದುವರಿಸಿದರೆ, ನಾನು ಸೂಚನೆ ನೀಡಬೇಕಾದ ಪರಿಸ್ಥಿತಿ ಬರಬಹುದು ಎಂದು ಮುಖ್ಯ ನ್ಯಾಯಮೂರ್ತಿ ಮತ್ತೊಮ್ಮೆ ಎಚ್ಚರಿಸಿದರು. ವಿಚಾರಣೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯನ್ನು (ಎನ್‌ಟಿಎ) ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನೆಡುಂಪಾರ ಅವರ ನಡವಳಿಕೆಯನ್ನು ಸಹ ಟೀಕೆ ಮಾಡಿದರು. ಇದು ನ್ಯಾಯಾಂಗಕ್ಕೆ ಅವಹೇಳನಕಾರಿ ಎಂದು ಅವರು ಹೇಳಿದರು.
ಹಾಲಿ ವರ್ಷ ದೇಶದ ಅತ್ಯಂತ ಪವರ್‌ಫುಲ್ ವ್ಯಕ್ತಿ ಯಾರು, ಇಲ್ಲಿದೆ ಟಾಪ್ 10 ಲಿಸ್ಟ್!
ನೆಡುಂಪಾರ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರೊಂದಿಗೆ ವಾಗ್ವಾದ ನಡೆಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಮಾರ್ಚ್‌ನಲ್ಲಿ ಚುನಾವಣಾ ಬಾಂಡ್‌ಗಳ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಮುಖ್ಯ ನ್ಯಾಯಾಧೀಶರು ಅದರ ವಿರುದ್ಧ ಎಚ್ಚರಿಕೆ ನೀಡಿದ್ದರೂ, ನೆಡುಂಪಾರ ಅವರು ವಿಚಾರಣೆಗೆ ಅಡ್ಡಿಪಡಿಸಿದರು.
'ನನ್ನ ಮೇಲೆ ಕೂಗಾಡಬೇಡಿ’ ಎಂದು ಮುಖ್ಯ ನ್ಯಾಯಮೂರ್ತಿ ನೆಡುಂಪಾರ ಅವರಿಗೆ ಹೇಳಿದ್ದರು. “ಇದು ಹೈಡ್ ಪಾರ್ಕ್ ಕಾರ್ನರ್ ಮೀಟಿಂಗ್ ಅಲ್ಲ, ನೀವು ನ್ಯಾಯಾಲಯದಲ್ಲಿದ್ದೀರಿ, ನೀವು ಅರ್ಜಿಯನ್ನು ಸ್ಥಳಾಂತರಿಸಲು, ಅರ್ಜಿ ಸಲ್ಲಿಸಲು ಬಯಸುತ್ತೀರಿ, ನೀವು ಮುಖ್ಯ ನ್ಯಾಯಮೂರ್ತಿಯಾಗಿ ನನ್ನ ನಿರ್ಧಾರವನ್ನು ಪಡೆದಿದ್ದೀರಿ, ನಾವು ನಿಮ್ಮ ಮಾತನ್ನು ಕೇಳುತ್ತಿಲ್ಲ, ನೀವು ಅರ್ಜಿ ಸಲ್ಲಿಸಲು ಬಯಸಿದರೆ, ಅದನ್ನು ಇಮೇಲ್‌ನಲ್ಲಿ ಸಲ್ಲಿಸಿ. ಅದು ಈ ನ್ಯಾಯಾಲಯದ ನಿಯಮವಾಗಿದೆ' ಎಂದು ಹೇಳಿದ್ದರು.
ವಿಚಾರಣೆ ವೇಳೆ ನಗೆಗಡಲಲ್ಲಿ ತೇಲಿದ ಸುಪ್ರೀಂ ಕೋರ್ಟ್, CJI ಪ್ರಶ್ನೆಗೆ ನಾನೊಬ್ಬ ವಿಸ್ಕಿ ಪ್ರೇಮಿ ಎಂದ ವಕೀಲ!