ಬೈಕ್‌ಗೆ ಅಡ್ಡ ಬಂದ ಬೀದಿನಾಯಿಯ ಜೀವ ಉಳಿಸಲು ಹೋಗಿ 17 ವರ್ಷದ ತರುಣ ಸಾವನ್ನಪ್ಪಿದ್ದ ಮನಕಲುಕುವ ಘಟನೆ ಛತ್ತೀಸ್‌ಗಢದ ಬಿಲಾಯಿಯಲ್ಲಿ ನಡೆದಿದ್ದು, ಘಟನೆಯ ವೀಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೈಕ್‌ಗೆ ಅಡ್ಡ ಬಂದ ಬೀದಿನಾಯಿಯ ಜೀವ ಉಳಿಸಲು ಹೋಗಿ 17 ವರ್ಷದ ತರುಣ ಸಾವನ್ನಪ್ಪಿದ್ದ ಮನಕಲುಕುವ ಘಟನೆ ಛತ್ತೀಸ್‌ಗಢದ ಬಿಲಾಯಿಯಲ್ಲಿ ನಡೆದಿದ್ದು, ಘಟನೆಯ ವೀಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಲಾಯಿಯ ಸುಪೇಲಾ ಪ್ರದೇಶದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆಗುತ್ತಿದೆ. ಮೃತ ತರುಣನನ್ನು 17 ವರ್ಷದ ರೌನಕ್ ದ್ವಿವೇದಿ ಎಂದು ಗುರುತಿಸಲಾಗಿದೆ.
ರೌನಕ್ ದ್ವಿವೇದಿ ತನ್ನ ಸ್ನೇಹಿತನ ಜೊತೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಬೀದಿ ನಾಯಿಯೊಂದು ಇವರು ಸಾಗುತ್ತಿದ್ದ ಸ್ಕೂಟರ್‌ಗೆ ಅಡ್ಡ ಬಂದಿದೆ. ಈ ವೇಳೆ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಬೈಕ್ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದ್ದು, ರೌನಕ್ ಸ್ಥಳದಲ್ಲೇ ಮೃತಪಟ್ಟರೇ ಆತನ ಸ್ನೇಹಿತನಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೃತ ರೌನಕ್ ದ್ವಿವೇದಿ ತನ್ನ ಸ್ನೇಹಿತನ ಜೊತೆ ಶ್ರೀರಾಮ್ ಚೌಕ್ ಕಡೆಗೆ ಹೋಗುತ್ತಿದ್ದರು. ಆದರೆ ನಾಯಿಯಿಂದ ಸಂಭವಿಸಿದ ಈ ಅಪಘಾತದಲ್ಲಿ ರೌನಕ್ ತಲೆಗೆ ಗಂಭೀರ ಗಾಯಗಳಾಗಿದ್ದು, ರೌನಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂದೆ ಕುಳಿತ ರೌನಕ್ ಸ್ನೇಹಿತ ಕೆಳಗೆ ಹಾರಿದ್ದು, ಅವರಿಗೂ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಓಡಿ ಬಂದು ಇವರನ್ನು ಅಲ್ಲಿಂದ ಎತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ರೌನಕ್ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ. ಘಟನೆ ಸಂಬಂಧ ಸುಪೇಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಲ ವರದಿಗಳ ಪ್ರಕಾರ ಈ ಬೀದಿ ನಾಯಿ ರೌನಕ್ ಅವರ ಬೈಕನ್ನು ಓಡಿಸಿಕೊಂಡು ಬಂದಿತ್ತು ಎಂಬ ಆರೋಪ ಕೇಳಿ ಬಂದಿದೆ. ಬೀದಿನಾಯಿಗಳಿಗೆ ಬೈಕ್ ಸವಾರರು ಬಲಿಯಾಗುತ್ತಿರುವುದು ಇದು ಮೊದಲೇನಲ್ಲ, ಈ ಹಿಂದೆಯೂ ಇಂತಹ ಹಲವು ಘಟನೆಗಳು ನಡೆದಿದೆ.
ಯುವತಿ ಮೇಲೆ ದಾಳಿ ಮಾಡಿದ ಬೀದಿ ನಾಯಿ
ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಘಟನೆಯೊಂದರಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಬೀದಿನಾಯಿಗಳ ಗುಂಪು ದಾಳಿ ಮಾಡಿದ ಘಟನೆ ಕೆಲ ದಿನಗಳ ಹಿಂದಷ್ಟೇ ನಡೆದಿತ್ತು. ಮೊದಲಿಗೆ ಒಂದು ಬೀದಿ ನಾಯಿ ಬಂದಾಗ ಯುವತಿ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಇತರ ನಾಲ್ಕು ನಾಯಿಗಳು ಬಂದು ಒಮ್ಮೆಲೆ ಯುವತಿಯ ಮೇಲೆ ದಾಳಿ ಮಾಡಿದ್ದು, ಈ ವೇಳೆ ನಾಯಿಗಳನ್ನು ಕಾಲಿನಲ್ಲಿ ಓದೆಯುವ ಮೂಲಕ ಯುವತಿ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾಳೆ. ಆದರೂ ಆಕೆಗೆ ನಾಯಿ ಕಡಿತದಿಂದ ಗಾಯಗಳಾಗಿವೆ.
ಹಾಗೆಯೇ ಕರ್ನಾಟಕದ ಹುಬ್ಬಳಿಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ದಾರಿಯಲ್ಲಿ ನಡೆದು ಹೋಗುತ್ತಿದ್ದ ಬಾಲಕಿಯನ್ನು ಬೀದಿನಾಯಿಗಳು ದಾಳಿ ಮಾಡಿ ಕಚ್ಚಿ ಕೆಳಗೆ ಬೀಳಿಸಿದ್ದು, ಆಕೆಯನ್ನು ಬಳಿಕ ನಾಯಿಗಳು ಎಳೆದುಕೊಂಡು ಹೋಗುತ್ತಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು.
