ಮಳೆಯಿಂದ ತುಂಬಿದ ನೀರಿನಲ್ಲಿ ಕುಡುಕನೋರ್ವ ಈಜಾಡಲು ಯತ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಚೆನ್ನೈ: ಕುಡಿದ ಮೇಲೆ ಕೆಲವರಿಗೆ ಏನು ಆಗುತ್ತಿದೆ ಎಂಬುದೇ ಗೊತ್ತಿರುವುದಿಲ್ಲ. ಒಂದು ಪೆಗ್ ಒಳಗೆ ಹೋಗುತ್ತಿದ್ದಂತೆ ಒಳಗಿದ್ದ ಸುಪ್ತ ಪ್ರತಿಭೆಗಳೆಲ್ಲಾ ಹೊರ ಬರುತ್ತವೆ. ಬೇರೆ ಬೇರೆ ಭಾಷೆಗಳು ನಾಲಗೆ ತುದಿಯಲ್ಲಿ ಹರಿದಾಡಲು ಆರಂಭಿಸುತ್ತವೆ. ಕುಡುಕರ ಕಿತಾಪತಿಯ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಈಗ ಕುಡುಕನೊರ್ವನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಚೆನ್ನೈನ (Chennai) ರಸ್ತೆಯೊಂದರಲ್ಲಿ ಸೆರೆಯಾದ ದೃಶ್ಯ ಇದಾಗಿದೆ. ಮಳೆಯಿಂದ ನೀರು ತುಂಬಿಕೊಂಡಿದ್ದ ರಸ್ತೆಯಲ್ಲಿ ಕುಡುಕನೋರ್ವ (drunk Man) ಈಜಾಡಲು ಯತ್ನಿಸುತ್ತಿದ್ದಾನೆ. ಉತ್ತರ ಚೆನ್ನೈನ ಪುಲಿಯತೊಪೆ (Pulianthope) ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಳೆ ಸುರಿಯುತ್ತಲೇ ಇದ್ದು ರಸ್ತೆಯಲ್ಲಿ ಈಗಾಗಲೇ ನೀರು ತುಂಬಿದೆ ಆ ಪ್ರದೇಶದಲ್ಲಿ ಅಪರಿಚಿತ ಕುಡುಕನೋರ್ವ ನೀರಲ್ಲೇ ಮಲಗಿದ್ದು, ಕೆಸರು ನೀರಲ್ಲಿ ಅತ್ತಿಂದಿತ್ತ ವಾಲಾಡುತ್ತಿದ್ದಾನೆ. ಈ ವಿಡಿಯೋವನ್ನು ಸಾಕಷ್ಟು ಜನ ವೀಕ್ಷಿಸಿದ್ದಾರೆ. 

ಕುಡಿತಕ್ಕೆ ಸಂಪೂರ್ಣ ದಾಸರಾದವರು ಕುಡಿಯುವುದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅನೇಕರ ಕುಡಿತದ ಚಟದಿಂದಾಗಿ ಹಲವು ಕುಟುಂಬಗಳು ಬೀದಿಗೆ ಬಂದಿವೆ. ಮಕ್ಕಳು ಸಂಸಾರ ಇಡೀ ಕುಟುಂಬವೇ ತಿನ್ನಲು ಅನ್ನವಿಲ್ಲದೇ ಕಡು ಬಡತನದಲ್ಲಿ ದಿನ ದೂಡುವ ಸ್ಥಿತಿ ಬಂದಿದೆ. ಕುಡಿತದ ಚಟದ ಘೋರ ಪರಿಣಾಮವಿದು. ಹೀಗೆ ಕುಡಿತದ ಚಟಕ್ಕೆ ಬಿದ್ದ ಸರ್ಕಾರಿ ಕಚೇರಿಯ ಪ್ಯೂನ್(ಜವಾನ) ಒಬ್ಬ ಕಚೇರಿಯ ಚರಾಸ್ತಿಯನ್ನೆಲ್ಲಾ ಮಾರಾಟಕ್ಕಿಟ್ಟು ಕುಡಿತಕ್ಕೆ ಕಾಸು ಮಾಡಿಕೊಂಡ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. 

ಕಳೆದ ಏಳು ವರ್ಷದಿಂದ ಭಾರತದಲ್ಲಿ ಕಡಿಮೆಯಾಗ್ತಿದೆ ಕುಡುಕರ ಸಂಖ್ಯೆ

ಒಡಿಶಾದ ಗಂಜಮ್ ಜಿಲ್ಲೆಯಲ್ಲಿ (Ganjam district) ಈ ಆಘಾತಕಾರಿ ಘಟನೆ ನಡೆದಿತ್ತು. ಎಂ. ಪಿತಾಂಬರ್ (M Pitambar) ಎಂಬಾತನೇ ಹೀಗೆ ಸರ್ಕಾರಿ ಕಚೇರಿಯ ಕುರ್ಚಿ, ಪಿಠೋಪಕರಣ ಫೈಲುಗಳು ಮುಂತಾದವನ್ನು ಮಾರಾಟ ಮಾಡಿದ ಕುಡುಕ. ಈತ ಗಂಜಮ್ ಜಿಲ್ಲಾ ಶಿಕ್ಷಣ ಇಲಾಖೆ ಕಚೇರಿಯಲ್ಲಿ (district education office) ಪ್ಯೂನ್(ಕಚೇರಿ ಜವಾನ) ಆಗಿ ಕೆಲಸ ಮಾಡುತ್ತಿದ್ದ. ತೀವ್ರವಾದ ಕುಡಿತದ ಗೀಳಿಗೆ ಬಿದ್ದ ಈತನಿಗೆ ಈತನ ಸಂಪಾದನೆ ಕುಡಿತಕ್ಕೆ ಸಾಲುತ್ತಿರಲಿಲ್ಲ. ಹೀಗಾಗಿ ಆತ ತಾನು ಕೆಲಸ ಮಾಡುತ್ತಿದ್ದ ಕಚೇರಿಯ ಪಿಠೋಪಕರಣ ಸೇರಿದಂತೆ ಕೆಲ ಫೈಲುಗಳನ್ನು ಕೂಡ ಮಾರಾಟ ಮಾಡಿ ಸಿಕ್ಕ ಹಣದಲ್ಲಿ ಕುಡಿದು ಮೋಜು ಮಾಡಿದ್ದಾನೆ. ಅಂದಹಾಗೆ ಈತ ಕಚೇರಿಯ ವಸ್ತುಗಳನ್ನೆಲ್ಲಾ ಗುಜುರಿಗೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ಕಳೆದ ಎರಡು ವರ್ಷಗಳಿಂದ ಈತ ಹೀಗೆ ಒಂದೊಂದಾಗಿ ಕಚೇರಿಯ ವಸ್ತುಗಳನ್ನು ಮಾರಾಟ ಮಾಡಲು ಶುರು ಮಾಡಿದ್ದಾನೆ. ಕಚೇರಿ ಬೇರೆಡೆ ಶಿಫ್ಟ್ ಆಗಿದ್ದರಿಂದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿರಲಿಲ್ಲ. ಈ ಹಳೆ ಕಚೇರಿಯನ್ನು ನೋಡಿಕೊಳ್ಳಲು ಅಧಿಕಾರಿಗಳು ಈ ಕುಡುಕ ಪಿತಾಂಬರನನ್ನು ಕಾವಲಿಗಿಟ್ಟಿದ್ದರು. ಆದರ ಈತ ಕಚೇರಿಯನ್ನು ಕಾಯುವ ಬದಲು ಅಲ್ಲಿದ್ದ ವಸ್ತುಗಳನ್ನೆಲ್ಲಾ ಒಂದೊಂದಾಗಿ ತಾನೇ ಗುಜುರಿಗೆ (scrap dealers) ಮಾರಿದ್ದಾನೆ. 

ತವರಿಗೆ ಹೋದ ಹೆಂಡ್ತಿನಾ ಕರೆಸಲು ಆಗ್ರಹ: ಟವರ್ ಏರಿ ಕುಡುಕನ ನಾಟಕ

ಇನ್ನು ವಿಪರ್ಯಾಸ ಎಂದರೆ ಶಿಕ್ಷಣ ಇಲಾಖೆಯ ಈ ಹಳೆ ಕಚೇರಿಯೂ ಬೆಹ್ರಾಂಪುರ (Berhampur city) ನಗರದ ಪೊಲೀಸ್ ಠಾಣೆ (Police station) ಪಕ್ಕದಲ್ಲಿಯೇ ಇತ್ತು. ಅನೇಕ ಅತ್ಯಮೂಲ್ಯವಾದ ದಾಖಲೆಗಳು ಹಾಗೂ ಪಿಠೋಪಕರಣಗಳು ಇಲ್ಲಿದ್ದರೂ ಕೂಡ ಕಳೆದ ಎರಡು ವರ್ಷಗಳಲ್ಲಿ ಶಿಕ್ಷಣ ಇಲಾಖೆಯ ಯಾವುದೇ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿರಲಿಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡ ಪಿತಾಂಬರ್‌ ಕಚೇರಿಯ ಒಂದೊಂದೇ ವಸ್ತುಗಳನ್ನು ಮಾರಿ, 'ನುಂಗಿ ಬೀರು ಕುಡಿದಿದ್ದಾನೆ'.