ತಿರುಪತಿ[ಫೆ.07]: ವಿಶ್ವವಿಖ್ಯಾತ ಶ್ರೀ ವೆಂಕಟೇಶ್ವರ ದೇವಾಲಯದ ಮೇಲೆ ಎರಡು ದಿನಗಳ ಹಿಂದೆ ಖಾಸಗಿ ವಿಮಾನವೊಂದು ಹಾರಾಟ ನಡೆಸಿದ್ದು, ಆತಂಕಕ್ಕೆ ಕಾರಣವಾಗಿತ್ತು. ಬಳಿಕ ಅದು ಸರ್ವೇ ಆಫ್‌ ಇಂಡಿಯಾಕ್ಕೆ ಸಂಬಂಧಿಸಿದ ವಿಮಾನ ಎಂಬುದು ತಿಳಿದುಬಂದಿದೆ.

ಭೌಗೋಳಿಕ ದತ್ತಾಂಶಗಳನ್ನು ಸಂಗ್ರಹಿಸುವ ನಿಟ್ಟಿನಿಂದ ಸೋಮವಾರ ಮತ್ತು ಭಾನುವಾರದಂದು ಸರ್ವೇ ಆಫ್‌ ಇಂಡಿಯಾ ವಿಮಾನದ ಮೂಲಕ ಸಮೀಕ್ಷೆ ಕೈಗೊಂಡಿತ್ತು. ಟಿಟಿಡಿ ಅಧಿಕಾರಿಗಳು ಚೆನ್ನೈ ವಿಮಾನ ನಿಲ್ದಾಣದ ಏರ್‌ ಟ್ರಾಫಿಕ್‌ ಕಂಟ್ರೋಲ್‌ ಅನ್ನು ಸಂಪರ್ಕಿಸಿ ಮಾಹಿತಿ ನೀಡಿದ ಬಳಿಕ ವಿಮಾನ ಹಾರಾಟ ಸ್ಥಗಿತಗೊಂಡಿದೆ. ಬುಧವಾರದ ಬಳಿಕ ತಿರುಮಲದಲ್ಲಿ ವಿಮಾನದ ಹಾರಾಟ ಕಂಡುಬಂದಿಲ್ಲ.

ವೈಖಾನಸ ಆಗಮ ಶಾಸ್ತ್ರದ ಪ್ರಕಾರ ವೆಂಕಟೇಶ್ವರ ದೇವಾಲಯದ ಮೇಲ್ಗಡೆ ವಿಮಾನ ಹಾರಿಸುವುದಕ್ಕೆ ಅವಕಾಶ ಇಲ್ಲ. ಕಳೆದ ಹಲವು ವರ್ಷಗಳಿಂದ ತಿರುಮಲವನ್ನು ಹಾರಾಟ ನಿಷೇಧ ವಲಯ ಎಂದು ಘೋಷಿಸುವಂತೆ ಬೇಡಿಕೆ ಇಡುತ್ತಲೇ ಬಂದಿದ್ದೇವೆ. ಅದರೂ ದೇವಾಲಯದ ಗರ್ಭಗುಡಿಯ ಮೇಲೆ ಕೆಲವು ವಿಮಾನಗಳು ಹಾರಾಟ ಕೈಗೊಳ್ಳುತ್ತಿವೆ ಎಂದು ತಿರುಮಲ ದೇವಾಲಯದ ಮುಖ್ಯ ಅರ್ಚಕ ವೇಣುಗೋಪಾಲ ದೀಕ್ಷಿತುಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ.