ಜೈಪುರ(ಆ.13): ರಾಜಸ್ಥಾನ ವಿಧಾನಸಭೆಯ ವಿಶೇಷ ಅಧಿವೇಶನ ಶುಕ್ರವಾರದಿಂದ ಆರಂಭವಾಗಲಿದೆ. ಇಲ್ಲಿನ ಮಾಜಿ ಮಖ್ಯಮಂತ್ರಿ ವಸುಂಧರಾ ರಾಜೆ ಹಾಗೂ ಹಿರಿಯ ನಾಯಕರು ಇಂದು ಗುರುವಾರ ಈ ಸಂಬಂಧ ಭೇಟಿಯಾಗಿ ಸಭೆ ನಡೆಸಿದ್ದಾರೆ. ಕಾಂಗ್ರೆಸ್‌ನ ಆಂತರಿಕ ಕಲಹದ ಬಳಿಕ ಇದು ಬಿಜೆಪಿ ನಾಯಕರ ಮೊದಲ ಭೇಟಿಯಾಗಿದೆ. ಇನ್ನು ಸೋಮವಾರವಷ್ಟೇ ಸಚಿನ್ ಪೈಲಟ್ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ಗೆ ಮರಳಿದ್ದು, ಈ ಮೂಲಕ ಸಿಎಂ ಗೆಹ್ಲೋಟ್‌ ಕುರ್ಚಿಗೆ ಎದುರಾಗಿದ್ದ ಕಂಟಕ ತಪ್ಪಿದೆ.

ಪೈಲಟ್‌ ಕಾಂಗ್ರೆಸ್‌ನಲ್ಲೇ ಉಳಿಸಿದ್ದು ಬಾಲ್ಯದ ಫ್ರೆಂಡ್‌ಶಿಪ್ ತಂತ್ರ!

ಜುಲೈ ತಿಂಗಳಿನಿಂದ ಸಚಿನ್ ಪೈಲಟ್ ಪಕ್ಷ ಬಿಡುವ ವರ್ತನೆ ತೋರಿಸಿದಾಗಿನಿಂದಲೂ ಬಿಜೆಪಿ ಸಭೆಯೊಂದನ್ನು ಕರೆದಿತ್ತು, ಆದರೆ ಅದನ್ನು ರದ್ದು ಪಡಿಸಿತ್ತು. ವಾಸ್ತವವಾಗಿ ಈ ಸಭೆಯಲ್ಲಿ ವಸುಂಧರಾ ರಾಜೆ ಗೈರಾಗುತ್ತಾರೆನ್ನಲಾಗಿತ್ತು ಹಾಗೂ ಅತ್ತ ಮಾಜಿ ಮುಖ್ಯಮಂತ್ರಿ ಸಹಕಾರವಿಲ್ಲದೇ ಬಿಜೆಪಿ ಏನೂ ಮಾಡಲು ಶಕ್ತವಾಗಿಲ್ಲ. ಇನ್ನು ಅತ್ತ ಪೈಲಟ್ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿದ್ದರೂ ಗೆಹ್ಲೋಟ್ ಬಳಿ 102 ಶಾಸಕರ ಬೆಂಬಲವಿತ್ತು. ಅಂದರೆ  ಬಹುಮತ ಸಾಬೀತುಪಡಿಸಲು ಬೇಕಾಗುವ ಮ್ಯಾಜಿಕ್‌ ನಂಬರ್‌ಗಿಂತ ಒಂದು ಸ್ಥಾನ ಹೆಚ್ಚು ಇತ್ತು. 

ಕಾಂಗ್ರೆಸ್ಸಿಗೆ ಮರಳಿದ್ದೇನೆ ಎನ್ನಲು ನಾನು ಪಕ್ಷ ತೊರೆದೇ ಇಲ್ಲ: ಪೈಲಟ್‌

ರಾಜಸ್ಥಾನ ಬಿಜೆಪಿ ಬಳಿ ಕೇವಲ 72 ಶಾಸಕರ ಬೆಂಬಲವಿತ್ತು. ಅಧಿಕಾರಕ್ಕೇರಲು ಅವರಿಗೆ ಕಡಿಮೆ ಎಂದರೂ 30 ಶಾಸಕರ ಬೆಂಬಲದ ಅಗತ್ಯವಿತ್ತು. ಆದರೆ ಪೈಲಟ್ ಹಾಗೂ ಬೆಂಬಲಿಗರು ಸೇರಿ ಕೇವಲ 19 ಮಂದಿ ಶಾಸಕರಷ್ಟೇ ಇದ್ದರು. ಇಂತಹ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಬಿಜೆಪಿ ಶಾಸಕರ ಖರೀದಿಯನ್ನು ಒಪ್ಪಲಿಲ್ಲ. ಇವೆಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸೋಮವಾರ ಪೈಲಟ್ ಪ್ರಿಯಾಂಕಾ ಹಾಗೂ ರಾಹುಲ್ ಭೇಟಿಯಾಗಿ ಮಾತುಕತೆ ನಡೆಸಿ ಎಲ್ಲಾ ಅಸಮಾಧಾನಗಳಿಗೆ ತೆರೆ ಎಳೆದರು. ಹೀಗಾಗಿ ಮಂಗಳವಾರ ಬಿಜೆಪಿ ಕರೆದಿದ್ದ ಶಾಸಕರ ಸಭೆಯನ್ನು ರದ್ದುಗೊಳಿಸಿತು.

ಈ ಸಂಬಂದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪತಿಪಕ್ಷ ನಾಯಕ ಗುಲಾಬ್‌ಚಂದ್ ಕಟಾರಿಯಾ 'ನಾವು ನಮ್ಮ ರಣತಂತ್ರವನ್ನು ಮತ್ತೆ ಎಣೆಯುತ್ತೇವೆ. ಇಲ್ಲಿ ಕಾಂಗ್ರೆಸ್‌ ಐದು ವರ್ಷ ಅಧಿಕಾರ ಪೂರ್ಣಗೊಳಿಸುವುದಿಲ್ಲ' ಎಂದಿದ್ದಾರೆ