ಪಾಪಿಷ್ಟರು ಮಾತ್ರ ಕುಂಭಮೇಳಕ್ಕೆ ಹೋಗ್ತಾರೆ.. ಭೀಮ್ ಆರ್ಮಿ ಚಂದ್ರಶೇಖರ ಆಜಾದ್ ವಿವಾದಾತ್ಮಕ ಹೇಳಿಕೆ!
Maha Kumbh Mela 2025 : ಚಂದ್ರಶೇಖರ್ ಆಜಾದ್ ಅವರು ಕುಂಭಮೇಳಕ್ಕೆ ಪಾಪ ಮಾಡಿದವರು ಮಾತ್ರ ಹೋಗುತ್ತಾರೆ ಎಂದು ಹೇಳಿದ್ದಾರೆ. ತಾವು ಯಾವುದೇ ಪಾಪ ಮಾಡಿಲ್ಲವಾದ್ದರಿಂದ ಕುಂಭಮೇಳಕ್ಕೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. ಈ ಹೇಳಿಕೆಗೆ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ಕಿಡಿಕಾರಿದ್ದಾರೆ.
Maha Kumbh Mela 2025: ಕುಂಭಮೇಳ 2025: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಪ್ರಾರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಪ್ರಯಾಗರಾಜ್‌ನಲ್ಲಿ ಮಹಾಕುಂಭವು ಜನವರಿ 13 ರಿಂದ ಪ್ರಾರಂಭವಾಗಲಿದೆ. ಎಲ್ಲ ಸಿದ್ಧತೆಗಳು ನಡೆದಿರುವ ನಡುವೆ, ಮಹಾಕುಂಭಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಗಳ ಸರಣಿಯೂ ಮುಂದುವರಿದಿದೆ. ಇದೀಗ ಆಜಾದ್ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ನಗೀನಾ ಲೋಕಸಭಾ ಕ್ಷೇತ್ರದ ಸಂಸದ ಚಂದ್ರಶೇಖರ್ ಆಜಾದ್ ಅವರು ಮಹಾಕುಂಭ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಾಪ ಮಾಡಿದವರು ಮಾತ್ರ ಮಹಾಕುಂಭಕ್ಕೆ ಹೋಗುತ್ತಾರೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಪಾಪ ಮಾಡಿದವರು ಮಾತ್ರ ಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಾರೆ. ನಾನು ಯಾವುದೇ ಪಾಪ ಮಾಡಿಲ್ಲ. ಹೀಗಾಗಿ ಈ ರೀತಿ ಸಾರ್ವಜನಿಕವಾಗಿ ಸ್ನಾನ ಮಾಡುವ ನಾಟಕ ಮಾಡುವುದಿಲ್ಲ’ ಎಂದು ಭೀಮ್ ಆರ್ಮಿ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶದ ಸಂಸದ ಚಂದ್ರಶೇಖರ ಆಜಾದ್ ಹೇಳಿದ್ದಾರೆ.
ಇದನ್ನೂ ಓದಿ: ಕುಂಭಮೇಳಕ್ಕೆ ಬೆಂಬಲ, ಗಂಗಾಸಾಗರ ಕಡೆಗೆ ತಿರುಗಿಯೂ ನೋಡೋಲ್ಲ: ಪ್ರಧಾನಿ ಮೋದಿ ವಿರುದ್ಧ ಮಮತಾ ವಾಗ್ದಾಳಿ!
ಸಂಸದ ಚಂದ್ರಶೇಖರ್ ಹೇಳಿದ್ದೇನು?
ವಾಸ್ತವವಾಗಿ, ಸಂಸದ ಚಂದ್ರಶೇಖರ್ ಆಜಾದ್ ಅವರು ತಮ್ಮ ಮೇಲಿನ ಹಲ್ಲೆ ಪ್ರಕರಣಕ್ಕೆ ಹಾಜರಾಗಲು ಗುರುವಾರ ಸಹರಾನ್‌ಪುರ ನ್ಯಾಯಾಲಯಕ್ಕೆ ಬಂದಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರಶೇಖರ್ ಮಾತನಾಡಿ, ತಮ್ಮ ಆಜಾದ್ ಸಮಾಜ ಪಕ್ಷವು ಸಾವಿರಾರು ವರ್ಷಗಳಿಂದ ಧರ್ಮ ಮತ್ತು ಪಂಥದ ಹೆಸರಿನಲ್ಲಿ ಅವಮಾನಕ್ಕೊಳಗಾದ ಬಡವರು ಮತ್ತು ದುರ್ಬಲರ ಪರ ಹೋರಾಡುತ್ತಿದೆ ಎಂದರು ಇದೇ ವೇಳೆ ಪ್ರಯಾಗ ರಾಜ್ ಕುಂಭಮೇಳ ವಿಚಾರವಾಗಿ ಮಾತನಾಡಿ, ಕುಂಭ ಮೇಳಕ್ಕೆ ಯಾರು ಹೋಗ್ತಾರೆ? ಅಲ್ಲಿಗೆ ಪಾಪ ಮಾಡಿದವರು ಮಾತ್ರ ಹೋಗುತ್ತಾರೆ, ಪಾಪ ಮಾಡಿದವರು ಮಾತ್ರ ಹೋಗಬೇಕು. ಆದರೆ ಯಾರೋ ಪಾಪ ಮಾಡಿದಾಗ ಯಾರಾದರೂ ಹೇಳುತ್ತಾರಾ? ಅದರ ಬಗ್ಗೆ ವಿವರವಾಗಿ ಚರ್ಚೆ ಮಾಡಲಾಗಿಲ್ಲ. ಪ್ರಸ್ತುತ ಮಾಧ್ಯಮಗಳು, ಪೊಲೀಸ್ ಆಡಳಿತ ಮತ್ತು ನ್ಯಾಯಾಂಗವು ದುರ್ಬಲ ವರ್ಗದ ವಿರುದ್ಧ ನಿಂತಿದೆ ಎಂದು ತೋರುತ್ತದೆ ಎಂದಿದ್ದಾರೆ.
ಶಂಕರಾಚಾರ್ಯ ಸ್ವಾಮಿ ಖಂಡನೆ:
ಅವರ ಹೇಳಿಕೆಗೆ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ಕಿಡಿಕಾರಿದ್ದು. ‘ಜನರು ತಮ್ಮ ಪಾಪಗಳನ್ನು ಶುದ್ಧೀಕರಿಸಲು ಪ್ರಯತ್ನಿಸುತ್ತಿದ್ದರೆ, ಆ ಪ್ರಯತ್ನವನ್ನು ಯಾರೂ ತಕರಾರು ತೆಗೆಯಬಾರದು. ಮೇಳದಲ್ಲಿ ಪಾಲ್ಗೊಳ್ಳುವವರನ್ನೆಲ್ಲ ಪಾಪಿಗಳು ಎಂದು ಕರೆಯಬಾರದು’ ಎಂದರು.