Asianet Suvarna News Asianet Suvarna News

ಶಾಸ್ತ್ರೋಕ್ತವಿಲ್ಲದ ಮದುವೆ ಮದುವೆಯೇ ಅಲ್ಲ: ಸುಪ್ರೀಂಕೋರ್ಟ್‌ ಬಣ್ಣನೆ

ಹಿಂದೂ ವಿವಾಹವೆಂದರೆ ಅದು ಹಾಡು, ನೃತ್ಯ, ಊಟದ ಕಾರ್ಯಕ್ರಮವಾಗಲೀ ಅಥವಾ ಹಣಕಾಸಿನ ವಹಿವಾಟಿನ ವ್ಯವಹಾರವಲ್ಲ. ಬದಲಾಗಿ ಅದೊಂದು ಸಂಸ್ಕೃತಿ ಎಂದು ಸುಪ್ರೀಂಕೋರ್ಟ್‌ ಬಣ್ಣಿಸಿದೆ. 

Ceremonies compulsory for valid marriage under Hindu Marriage Act Supreme Court gvd
Author
First Published May 2, 2024, 5:03 AM IST

ನವದೆಹಲಿ (ಮೇ.02): ಹಿಂದೂ ವಿವಾಹವೆಂದರೆ ಅದು ಹಾಡು, ನೃತ್ಯ, ಊಟದ ಕಾರ್ಯಕ್ರಮವಾಗಲೀ ಅಥವಾ ಹಣಕಾಸಿನ ವಹಿವಾಟಿನ ವ್ಯವಹಾರವಲ್ಲ. ಬದಲಾಗಿ ಅದೊಂದು ಸಂಸ್ಕೃತಿ ಎಂದು ಸುಪ್ರೀಂಕೋರ್ಟ್‌ ಬಣ್ಣಿಸಿದೆ. ಜೊತೆಗೆ ಸಪ್ತಪದಿ ಸೇರಿದಂತೆ ಅಗತ್ಯ ಶಾಸ್ತ್ರಗಳನ್ನು ಪೂರೈಸದೆ ನಡೆಸುವ ಮದುವೆಗೆ ಕಾನೂನಿನ ಮಾನ್ಯತೆಯೇ ಇಲ್ಲ. ಅಲ್ಲದೆ ಇಂಥ ಆಚರಣೆಗಳಿಲ್ಲದೆ ಮಾಡಿಸುವ ಮದುವೆ ನೋಂದಣಿ ಕೂಡಾ ಮದುವೆಗೆ ಮಾನ್ಯತೆ ದೊರಕಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪೈಲಟ್‌ ದಂಪತಿಯ ವಿಚ್ಛೇದನ ಪ್ರಕರಣದಲ್ಲಿ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾ.ಅಗಾಸ್ಟಿನ್‌ ಜಾರ್ಜ್‌ ಅವರನ್ನೊಳಗೊಂಡ ಪೀಠ ಇತ್ತೀಚೆಗೆ ಈ ಮಹತ್ವದ ತೀರ್ಪು ನೀಡಿದೆ.

ಕೋರ್ಟ್‌ ಹೇಳಿದ್ದೇನು?: ‘ಸಂಸ್ಕಾರ ಎಂಬುದು ಭಾರತೀಯ ಸಮಾಜದಲ್ಲಿ ಭಾರೀ ಮಹತ್ವವನ್ನು ಪಡೆದಿದೆ. ಸಪ್ತಪದಿ ಎಂಬುದು ಪತಿ-ಪತ್ನಿಯರು ಪರಸ್ಪರರಿಗೆ ಕೊಡುವ ವಾಗ್ದಾನವಾಗಿದ್ದು, ಜೀವನದುದ್ದಕ್ಕೂ ಸಮಾನವಾಗಿ ಗೌರವಿಸಿ ಬಾಳುವ ಪ್ರತಿಜ್ಞೆಗೈಯ್ಯುತ್ತಾರೆ. ಇದನ್ನೇ ಹಿಂದೂ ವಿವಾಹ ಕಾಯ್ದೆಯೂ ತಿಳಿಸಿದೆ. ಹೀಗಾಗಿ ಸಪ್ತಪದಿ ಸೇರಿದಂತೆ ನಿರ್ದಿಷ್ಟ ಶಾಸ್ತ್ರ ಪೂರೈಸಿದರೆ ಮಾತ್ರವೇ ಅದನ್ನು ಹಿಂದೂ ವಿವಾಹ ಕಾಯ್ದೆ ಅನ್ವಯ ಮದುವೆ ಎಂದು ಒಪ್ಪಿಕೊಳ್ಳಲು ಸಾಧ್ಯ’ ಎಂದು ನ್ಯಾಯಪೀಠ ಹೇಳಿತು.

ಬರ ಪರಿಹಾರ ಶಿಫಾರಸು ವರದಿ ಸಲ್ಲಿಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚನೆ

ಹಿಂದೂ ಧರ್ಮದಲ್ಲಿ ವಿವಾಹ ಎಂಬುದು ಸಂಸ್ಕಾರವೇ ಹೊರತು ಹಾಡು-ಕುಡಿತ-ಕುಣಿತ ಇಲ್ಲವೇ ಎರಡು ಕುಟುಂಬಗಳ ನಡುವಿನ ಒಪ್ಪಂದ ಮಾಡಿಕೊಳ್ಳುವ ವೇದಿಕೆಯಲ್ಲ. ಹಿಂದೂ ವಿವಾಹಗಳ ವೇಳೆ ಧಾರ್ಮಿಕ ಆಚರಣೆ ನಡೆಸಿದ ಕುರಿತ ದಾಖಲೆಗಳು ಇರಬೇಕು. ಅದು ಮುಂದೆ ಯಾವುದೇ ಸಮಸ್ಯೆ ಎದುರಾದಾಗ ಸಾಕ್ಷಿಯಾಗುವಂತೆ ಇರಬೇಕು ಎಂಬುದಾಗಿ ನ್ಯಾಯಪೀಠ ಸ್ಪಷ್ಟಪಡಿಸಿತು.

ನೋಂದಣಿ ಅಂತಿಮವಲ್ಲ: ಮದುವೆ ನೋಂದಣಿ ಮಾಡಿಸಿದರೆ ಅದೇ ಅಂತಿಮವಾಗುವುದಿಲ್ಲ. ಯಾವುದೇ ಶಾಸ್ತ್ರೋಕ್ತ ಆಚರಣೆ ಇಲ್ಲದೇ, ಕೇವಲ ಸಂಸ್ಥೆಯೊಂದು ನೋಂದಣಿಯ ದಾಖಲೆ ಪತ್ರ ವಿತರಿಸಿದರೆ ಅದು ವೈವಾಹಿಕ ಜೀವನದ ಯಾವುದೇ ಸ್ಥಿತಿಯನ್ನು ಖಚಿತಪಡಿಸುವುದಿಲ್ಲ ಮತ್ತು ಹಿಂದೂ ವಿವಾಹ ಕಾಯ್ದೆ ಅನ್ವಯ ವಿವಾಹವನ್ನು ಮಾನ್ಯಗೊಳಿಸುವುದೂ ಇಲ್ಲ. ನೋಂದಣಿ ಕೇವಲ ಮದುವೆಯ ಸಾಕ್ಷಿಯಷ್ಟೇ. ಅದು ಮದುವೆಗೆ ಮಾನ್ಯತೆ ನೀಡದು. ಹಿಂದೂ ವಿವಾಹ ಕಾಯ್ದೆಗೆ ಅನುಸಾರವಾಗಿ ಹಿಂದೂ ಧರ್ಮೀಯರು ವಿವಾಹವಾಗಿದ್ದರೆ ಮಾತ್ರ ವಿಚ್ಛೇದನ ಪ್ರಕರಣಗಳಲ್ಲಿ ನೋಂದಣಿಗೆ ಸಿಂಧುತ್ವ ಇರುತ್ತದೆ ಎಂದು ನ್ಯಾಯಾಲಯ ಮಹತ್ವದ ಹೇಳಿಕೆ ನೀಡಿದೆ.

ಏನಿದು ಪ್ರಕರಣ?: ವಾಣಿಜ್ಯ ಪೈಲಟ್‌ ದಂಪತಿಯ ವಿಚ್ಛೇದನ ಪ್ರಕರಣದಲ್ಲಿ ಮದುವೆ ನೋಂದಣಿ ಮಾಡಿಸಿದ್ದರೂ ಹಿಂದೂ ವಿವಾಹ ಕಾಯ್ದೆಯ ಅನುಸಾರ ಸಪ್ತಪದಿ ನೆರವೇರಿರಲಿಲ್ಲ ಎಂಬುದು ನ್ಯಾಯಾಲಯಕ್ಕೆ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನೋಂದಣಿಯನ್ನು ಅಮಾನ್ಯ ಮಾಡಿ ಮದುವೆಯನ್ನು ರದ್ದುಗೊಳಿಸಿ ಪತ್ನಿ ದಾಖಲಿಸಿದ್ದ ವರದಕ್ಷಿಣೆ ಮತ್ತು ವಿಚ್ಛೇದನ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.

ಹೆಚ್ಚು ಬರ ಪರಿಹಾರಕ್ಕಾಗಿ ಮತ್ತೆ ಸುಪ್ರೀಂ ಕೋರ್ಟಿಗೆ: ಸಚಿವ ಕೃಷ್ಣಬೈರೇಗೌಡ

ಮದುವೆ ನೋಂದಣಿ ಮಾಡಿಸಿದರೆ ಅದೇ ಅಂತಿಮವಾಗುವುದಿಲ್ಲ. ಯಾವುದೇ ಶಾಸ್ತ್ರೋಕ್ತ ಆಚರಣೆ ಇಲ್ಲದೇ, ಕೇವಲ ಸಂಸ್ಥೆಯೊಂದು ನೋಂದಣಿಯ ದಾಖಲೆ ಪತ್ರ ವಿತರಿಸಿದರೆ ಅದು ವೈವಾಹಿಕ ಜೀವನದ ಯಾವುದೇ ಸ್ಥಿತಿಯನ್ನು ಖಚಿತಪಡಿಸುವುದಿಲ್ಲ ಮತ್ತು ಹಿಂದೂ ವಿವಾಹ ಕಾಯ್ದೆ ಅನ್ವಯ ವಿವಾಹವನ್ನು ಮಾನ್ಯಗೊಳಿಸುವುದೂ ಇಲ್ಲ.
- ಸುಪ್ರೀಂಕೋರ್ಟ್‌

Latest Videos
Follow Us:
Download App:
  • android
  • ios