* ರಾಜ್ಯಗಳ ನಿಯಂತ್ರಣಕ್ಕೆ ಕೇಂದ್ರದ ಕೊಕ್ಕೆ* ರಾಜ್ಯಗಳ ಖನಿಜ ನಿಧಿ ಮೇಲೆ ಇನ್ನು ಕೇಂದ್ರದ ನಿಯಂತ್ರಣ* ನಿಧಿಯನ್ನು ಮೂಲ ಉದ್ದೇಶಕ್ಕೆ ಬಳಸದ ಆರೋಪ* ಕೇಂದ್ರದ ಈ ನಿರ್ಧಾರಕ್ಕೆ ರಾಜ್ಯಗಳ ಆಕ್ಷೇಪ ಸಾಧ್ಯತೆ
ನವದೆಹಲಿ(ಆ.31): ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದು, ರಾಜ್ಯಗಳ ಅಧಿಕಾರ ಕಿತ್ತುಕೊಳ್ಳುತ್ತಿದೆ ಎಂಬ ವಿಪಕ್ಷಗಳ ಆರೋಪದ ನಡುವೆಯೇ, ಜಿಲ್ಲಾ ಖನಿಜ ನಿಧಿ (ಡಿಎಂಎಫ್) ಬಳಕೆಯ ಅನುಮೋದನೆ ಅಧಿಕಾರವನ್ನು ಕೇಂದ್ರವು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ತೀರ್ಮಾನಿಸಿದೆ. ಇದರಿಂದಾಗಿ ರಾಜ್ಯಗಳು ಹಾಗೂ ಕೇಂದ್ರದ ನಡುವೆ ಹೊಸ ಜಟಾಪಟಿ ಆರಂಭವಾಗುವ ಸಾಧ್ಯತೆ ಇದೆ.
ಗಣಿಗಳನ್ನು ಲೀಸ್ ಪಡೆದ ಗುತ್ತಿಗೆದಾರರು ಸರ್ಕಾರಕ್ಕೆ ಶೇ.10ರಷ್ಟುರಾಯಲ್ಟಿನೀಡಬೇಕು. ರಾಯಲ್ಟಿಯ ಶೇ.10ರಷ್ಟಪಾಲನ್ನು ಜಿಲ್ಲಾ ಖನಿಜಿ ನಿಧಿ ಹೆಸರಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುತ್ತದೆ. ಈ ಹಣವನ್ನು ಹೇಗೆ ಬಳಕೆ ಮಾಡಬೇಕು ಎಂದು ನಿರ್ಧರಿಸುವ ಅಧಿಕಾರ ಇದುವರೆಗೆ ರಾಜ್ಯಗಳ ಬಳಿ ಇತ್ತು. ಆದರೆ, ನಿರ್ದಿಷ್ಟಉದ್ದೇಶಕ್ಕೆ ವಿರುದ್ಧವಾಗಿ ನಾನಾ ಯೋಜನೆಗಳಿಗೆ ಈ ಹಣವನ್ನು ಬಳಕೆ ಮಾಡಲಾಗುತ್ತಿದೆ. ಹೀಗಾಗಿ ನಿಧಿ ಸಂಗ್ರಹದ ಉದ್ದೇಶವೇ ವಿಫಲವಾಗಿದೆ ಎಂದು ಹೇಳಿರುವ ಕೇಂದ್ರ ಸರ್ಕಾರ, ಹಣ ವಿನಿಯೋಗ ಮತ್ತು ಅದನ್ನು ಯಾವುದಕ್ಕೆ ವಿನಿಯೋಗ ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ತನ್ನ ವಶಕ್ಕೆ ಪಡೆದಿದೆ.
ಜಿಲ್ಲಾ ಖನಿಜ ನಿಧಿಯಲ್ಲಿ, ಅದು ಸ್ಥಾಪನೆ ಆದಾಗಿನಿಂದ (2015-16) ಈವರೆಗೆ 50,499 ಕೋಟಿ ರು. ಸಂಗ್ರಹವಾಗಿದೆ. ಇದರಲ್ಲಿ 47,288 ಕೋಟಿ ರು.ಗಳನ್ನು ವಿವಿಧ ಉದ್ದೇಶಗಳಿಗೆ ಮಂಜೂರು ಮಾಡಲಾಗಿದ್ದು, 24,499 ಕೋಟಿ ರು. ಬಳಸಲಾಗಿದೆ.
ಖನಿಜ ಸಂಪತ್ತು ಹೆಚ್ಚಿರುವ ಒಡಿಶಾದಲ್ಲಿ 13,728 ಕೋಟಿ ರು., ಛತ್ತೀಸ್‌ಗಢದಲ್ಲಿ 7,151 ಕೋಟಿ ರು. ನಿಧಿ ಸಂಗ್ರಹವಾಗಿದೆ. ಕರ್ನಾಟಕದಲ್ಲಿ 2,712 ಕೋಟಿ ರು. ಸಂಗ್ರಹವಾಗಿದ್ದು, ವಿವಿಧ ಯೋಜನೆಗಳಿಗೆ 994 ಕೋಟಿ ರು. ಬಳಕೆ ಆಗಿದೆ.
2015ರಲ್ಲಿ ಜಾರಿಗೆ ತರಲಾದ ತಿದ್ದುಪಡಿ ಕಾಯ್ದೆಯಲ್ಲಿ , ಎಲ್ಲ ಜಿಲ್ಲೆಗಳಲ್ಲೂ ಖನಿಜ ನಿಧಿ ಸ್ಥಾಪನೆ ಆಗಬೇಕು. ಗಣಿ ಕಂಪನಿಗಳು ರಾಯಲ್ಟಿ(ರಾಯಧನ) ಹೊರತಾಗಿ ಖನಿಜ ನಿಧಿಗೆ ಹಣ ನೀಡಬೇಕು. ಈ ಹಣವನ್ನು ಗಣಿಗಾರಿಕೆಯಿಂದ ಬಾಧಿತರಾದ ಜನರ ಅಭಿವೃದ್ಧಿಗೆ ನೀಡಬೇಕು. ಬಾಧಿತ ಜನರಿಗೆ ಕುಡಿಯುವ ನೀರು, ಶಿಕ್ಷಣ ನೀಡಲು ಹಾಗೂ ಬಾಧಿತ ಪ್ರದೇಶದ ಮೂಲಸೌಕರ‍್ಯ ಅಭಿವೃದ್ಧಿಗೆ ಬಳಸಬೇಕು ಎಂಬ ಅಂಶಗಳಿವೆ.
ಅಲ್ಲದೆ, ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗಾಗಲಿ ಅಥವಾ ಇನ್ನಿತರ ಯೋಜನೆಗಳಿಗಾಗಲಿ ನೀಡಕೂಡದು ಎಂಬ ಷರತ್ತುಗಳಿವೆ. ಆದರೆ ಈ ಷರತ್ತುಗಳ ಉಲ್ಲಂಘನೆ ಆಗಿದೆ ಎಂಬುದು ಕೇಂದ್ರ ಸರ್ಕಾರದ ಅನಿಸಿಕೆಯಾಗಿದೆ.
