ನವದೆಹಲಿ(ಡಿ.29): ಕೊರೋನಾ ವೈರಸ್‌ ಹರಡುವ ಭೀತಿಯಿಂದ ಭಾರತವೂ ಸೇರಿದಂತೆ ಹಲವು ದೇಶಗಳ ಪ್ರಯಾಣಿಕರಿಗೆ ಚೀನಾ ನಿಷೇಧ ವಿಧಿಸಿದ್ದು, ಅದಕ್ಕೆ ತಿರುಗೇಟು ನೀಡಲು ಇದೀಗ ಕೇಂದ್ರ ಸರ್ಕಾರವು ಚೀನಾದ ಪ್ರಯಾಣಿಕರು ಭಾರತ ಪ್ರವೇಶಿಸುವುದಕ್ಕೆ ಪರೋಕ್ಷವಾಗಿ ನಿಷೇಧ ಹೇರಿದೆ ಎಂದು ಹೇಳಲಾಗುತ್ತಿದೆ.

‘ಯಾವುದೇ ದೇಶದ ಮೂಲಕ ಚೀನಾದ ಪ್ರಯಾಣಿಕರು ಬಂದರೂ ಅವರನ್ನು ಭಾರತಕ್ಕೆ ಬರುವ ವಿಮಾನಕ್ಕೆ ಹತ್ತಿಸಿಕೊಳ್ಳಬೇಡಿ’ ಎಂದು ವಿಮಾನಯಾನ ಕಂಪನಿಗಳಿಗೆ ಭಾರತ ಸರ್ಕಾರ ‘ಅನೌಪಚಾರಿಕ’ ಸೂಚನೆ ನೀಡಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಕೇಂದ್ರ ಸರ್ಕಾರ ತಾನು ಇಂತಹ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಏರ್‌ಲೈನ್ಸ್‌ಗಳು ಕೂಡ ತಮಗೆ ಇಂತಹ ಯಾವುದೇ ಸೂಚನೆ ಬಂದಿಲ್ಲ ಎಂದು ಹೇಳಿವೆ.

ಭಾರತ ಮತ್ತು ಚೀನಾದ ನಡುವೆ ಗಡಿ ವಿವಾದವೂ ನಡೆಯುತ್ತಿರುವ ಈ ಸಂದರ್ಭದಲ್ಲಿ ಚೀನಾದ ಪ್ರಯಾಣಿಕರು ಯಾವುದೇ ದೇಶದ ಮೂಲಕ ಭಾರತಕ್ಕೆ ಬರದಂತೆ ನಿಷೇಧ ವಿಧಿಸಲಾಗಿದೆ ಎಂಬ ವದಂತಿ ಮಹತ್ವ ಪಡೆದಿದೆ. ಹಾಗೆಯೇ, ಭಾರತದಿಂದ ತೆರಳಿದ ಸುಮಾರು 1500ಕ್ಕೂ ಹೆಚ್ಚು ಜನರು ಚೀನಾದ ಬಂದರುಗಳಲ್ಲಿ ಕೆಳಗಿಳಿಯಲು ಅನುಮತಿ ಸಿಗದೆ ಪರದಾಡುತ್ತಿದ್ದು, ಅದಕ್ಕೆ ಪ್ರತೀಕಾರವಾಗಿಯೂ ಭಾರತ ಹೀಗೆ ಮಾಡಿದೆ ಎಂಬ ಮಾತುಗಳೂ ಇವೆ.

ಚೀನಾ ಜತೆ ಏರ್‌ ಬಬಲ್‌ ಇಲ್ಲ:

ಕೊರೋನಾ ಹರಡುತ್ತದೆಯೆಂಬ ಕಾರಣಕ್ಕೆ ಭಾರತೀಯರು ಸೇರಿದಂತೆ ಅನೇಕ ದೇಶದ ನಾಗರಿಕರಿಗೆ ಚೀನಾ ತನ್ನ ದೇಶದೊಳಗೆ ಪ್ರವೇಶ ನೀಡುತ್ತಿಲ್ಲ. ಆದರೆ, ಸದ್ಯ ಬ್ರಿಟನ್‌ ಹೊರತುಪಡಿಸಿ ಇನ್ನಾವುದೇ ದೇಶದ ನಾಗರಿಕರು ಭಾರತಕ್ಕೆ ಪ್ರವೇಶಿಸುವುದಕ್ಕೆ ಇಂತಹ ನಿರ್ಬಂಧವನ್ನು ಕೇಂದ್ರ ಸರ್ಕಾರ ವಿಧಿಸಿಲ್ಲ. ಕೊರೋನಾ ಲಾಕ್‌ಡೌನ್‌ ಜಾರಿಯಾದ ನಂತರ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದು, ಸೀಮಿತ ಏರ್‌ಬಬಲ್‌ ಒಪ್ಪಂದಗಳ ಮೂಲಕ ಕೆಲ ದೇಶಗಳಿಗೆ ಹಾಗೂ ಕೆಲ ದೇಶಗಳಿಂದ ವಿಮಾನಗಳ ಕಾರ್ಯಾಚರಣೆಗೆ ಅನುಮತಿ ನೀಡಿದೆ. ಆದರೆ, ಚೀನಾದ ಜೊತೆಗೆ ಇಂತಹ ಏರ್‌ ಬಬಲ್‌ ಒಪ್ಪಂದ ಇಲ್ಲ. ಹೀಗಾಗಿ ಚೀನಾದ ಪ್ರಯಾಣಿಕರು ಬೇರೆ ದೇಶಕ್ಕೆ ಹೋಗಿ ಅಲ್ಲಿಂದ ಭಾರತಕ್ಕೆ ಬರುತ್ತಿದ್ದಾರೆ. ಅವರನ್ನು ತಡೆಯಲು ಚೀನಾ ನಾಗರಿಕರನ್ನು ಯಾವ ದೇಶದಿಂದಲೂ ವಿಮಾನದಲ್ಲಿ ಕರೆದುಕೊಂಡು ಬರಬೇಡಿ ಎಂದು ಕೇಂದ್ರ ಸರ್ಕಾರ ಅನೌಪಚಾರಿಕವಾಗಿ ಸೂಚಿಸಿದೆ ಎಂದು ಹೇಳಲಾಗುತ್ತಿದೆ.

ಯಾರಿಗೂ ನಿಷೇಧ ಹೇರಿಲ್ಲ-ಪುರಿ:

ಚೀನಾದ ಪ್ರಯಾಣಿಕರು ಭಾರತ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ ಎಂಬ ಸುದ್ದಿಯನ್ನು ಕೇಂದ್ರ ವಿಮಾನಯಾನ ಸಚಿವ ಹರದೀಪ್‌ ಸಿಂಗ್‌ ಪುರಿ ಅಲ್ಲಗಳೆದಿದ್ದಾರೆ. ಹಾಗೆಯೇ, ಏರ್‌ ಇಂಡಿಯಾ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಕೂಡ ತಮಗೆ ಸರ್ಕಾರದಿಂದ ಇಂತಹ ಸೂಚನೆ ಬಂದಿಲ್ಲ. ತಾವು ಎಲ್ಲಾ ದೇಶಗಳ ನಾಗರಿಕರನ್ನೂ ವಿಮಾನಕ್ಕೆ ಹತ್ತಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿವೆ.