ನವದೆಹಲಿ(ಜೂ.09): ದೇಶದಲ್ಲಿ ಯುವತಿಯರ ವಿವಾಹಕ್ಕೆ ನಿಗದಿಪಡಿಸಿರುವ ಕನಿಷ್ಠ ವಯೋಮಿತಿಯನ್ನು ಈಗಿರುವ 18 ವರ್ಷದಿಂದ ಪುರುಷರಿಗೆ ಸರಿಸಮನಾಗಿ 21 ವರ್ಷಕ್ಕೆ ಏರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತು ಪರಿಶೀಲನೆ ನಡೆಸಿ ವರದಿ ನೀಡಲು ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ನೇತೃತ್ವದಲ್ಲಿ 10 ಜನರ ಕಾರ್ಯಪಡೆ ರಚಿಸಿದೆ.

ಹೀಗೊಂದು ಲವ್ ಕ್ವಾರೆಂಟೈನ್: ಕೊರೋನಾ ಟೈಮಲ್ಲಿ ಮದ್ವೆಯಾದ್ರೆ ಹೀಗಿರುತ್ತೆ ಇನ್ವಿಟೇಷನ್

ಈ ಕಾರ್ಯಪಡೆಯು ಮದುವೆಯ ವಯಸ್ಸಿಗೆ ಹಾಗೂ ಮಾತೃತ್ವಕ್ಕೆ ಇರುವ ಸಂಬಂಧ, ಮದುವೆಯ ವಯಸ್ಸು ಮತ್ತು ತಾಯಿ ಹಾಗೂ ಶಿಶುವಿನ ಆರೋಗ್ಯ, ಶಿಶು ಮರಣದ ಮೇಲೆ ಮದುವೆಯ ವಯಸ್ಸಿನ ಪರಿಣಾಮ, ತಾಯಂದಿರ ಮರಣದ ಮೇಲೆ ಮದುವೆಯ ವಯಸ್ಸಿನ ಪರಿಣಾಮ, ಫಲವತ್ತತೆ ದರ, ಲಿಂಗಾನುಪಾತ ಮುಂತಾದ ಸಂಗತಿಗಳನ್ನು ಪರಿಶೀಲಿಸಿ ಅಂತಿಮ ವರದಿ ನೀಡಲಿದೆ. ಈ ಹಿಂದೆ 1978ರಲ್ಲಿ ಮಹಿಳೆಯರ ವಿವಾಹಕ್ಕೆ ಕನಿಷ್ಠ ವಯೋಮಿತಿಯನ್ನು 15 ವರ್ಷದಿಂದ 18 ವರ್ಷಕ್ಕೆ ಏರಿಸಲಾಗಿತ್ತು.

ಪುರುಷರಿಗೆ ಮದುವೆಯ ಕನಿಷ್ಠ ವಯೋಮಿತಿ 21 ವರ್ಷವಿರುವುದರಿಂದ ಸಮಾನತೆಯ ಕಾರಣಕ್ಕೆ ಮಹಿಳೆಯರಿಗೂ ಇದನ್ನು 21 ವರ್ಷಕ್ಕೆ ಏರಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಜೊತೆಗೆ, ಕಡಿಮೆ ವಯಸ್ಸಿನಲ್ಲಿ ಮಗು ಹೆತ್ತರೆ ತಾಯಿ ಮತ್ತು ಮಗುವಿನ ಸಾವಿನ ಪ್ರಮಾಣ ಹೆಚ್ಚುತ್ತದೆ ಎಂಬ ವಾದವೂ ಇದರ ಹಿಂದಿದೆ. ಆದರೆ, ಮದುವೆಯ ವಯೋಮಿತಿ ಏರಿಸಿದರೆ ಮಹಿಳೆಯರ ಸಂತಾನಾಭಿವೃದ್ಧಿ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂಬ ಪ್ರತಿವಾದವೂ ಇದೆ.