ಆಕ್ಸಿಜನ್ ಘಟಕ ಸ್ಥಾಪಿಸುವ ಆಸ್ಪತ್ರೆಗೆ ಸಿಗಲಿದೆ ಈ ಲಾಭ!
* ಕೋವಿಡ್ ರೋಗಿಗಳಿಗೆ ಆಮ್ಲಜನಕದ ಕೊರತೆ ಉಂಟಾಗಿ ದೇಶ ತೀವ್ರ ಬಿಕ್ಕಟ್ಟು ಎದುರಿಸಿದ ಹಿನ್ನೆಲೆ
* ಆಕ್ಸಿಜನ್ ಘಟಕ ಸ್ಥಾಪಿಸುವ ಆಸ್ಪತ್ರೆಗೆ 2 ಕೋಟಿ ಸಾಲ
* ತನ್ನದೇ ಗ್ಯಾರಂಟಿ ಅಡಿ ಸಾಲಕ್ಕೆ ಸರ್ಕಾರ ನಿರ್ಧಾರ
ನವದೆಹಲಿ(ಜೂ.01): ಕೋವಿಡ್ ರೋಗಿಗಳಿಗೆ ಆಮ್ಲಜನಕದ ಕೊರತೆ ಉಂಟಾಗಿ ದೇಶ ತೀವ್ರ ಬಿಕ್ಕಟ್ಟು ಎದುರಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ವೈದ್ಯಕೀಯ ಸಂಸ್ಥೆಗಳು ತಮಗೆ ಬೇಕಾದ ಆಕ್ಸಿಜನ್ ತಾವೇ ಉತ್ಪಾದಿಸಿಕೊಳ್ಳಲು ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ತಮ್ಮ ಆವರಣದಲ್ಲಿ ಆಕ್ಸಿಜನ್ ಘಟಕ ಸ್ಥಾಪಿಸಲು ಇಚ್ಛಿಸುವ ಆಸ್ಪತ್ರೆ, ಕ್ಲಿನಿಕ್, ನರ್ಸಿಂಗ್ ಹೋಮ್, ಮೆಡಿಕಲ್ ಕಾಲೇಜುಗಳಿಗೆ 2 ಕೋಟಿ ರು.ವರೆಗೆ ತನ್ನದೇ ಗ್ಯಾರಂಟಿಯಲ್ಲಿ ಸಾಲ ನೀಡಲು ನಿರ್ಧರಿಸಿದೆ.
ಇದಕ್ಕಾಗಿ ಸಣ್ಣ ಉದ್ದಿಮೆಗಳೂ ಸೇರಿದಂತೆ ವಿವಿಧ ವಲಯಗಳಿಗೆ ನೀಡಲಾಗಿದ್ದ 3 ಲಕ್ಷ ಕೋಟಿ ರು. ಮೊತ್ತದ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್) ವ್ಯಾಪ್ತಿಯನ್ನು ಆಕ್ಸಿಜನ್ ಉತ್ಪಾದನೆಗೂ ವಿಸ್ತರಿಸಿ ಕೇಂದ್ರ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ.
ಅದರಡಿ ಸರ್ಕಾರದ ಶೇ.100ರಷ್ಟುಖಾತ್ರಿಯೊಂದಿಗೆ ಆಕ್ಸಿಜನ್ ಘಟಕ ಸ್ಥಾಪಿಸಲು ಆಸ್ಪತ್ರೆಗಳಿಗೆ ಬ್ಯಾಂಕುಗಳು 2 ಕೋಟಿ ರು.ವರೆಗೆ ಸಾಲ ನೀಡಬಹುದಾಗಿದೆ. ಇದಕ್ಕೆ ಸರ್ಕಾರ ಶೇ.7.5ರ ಬಡ್ಡಿ ದರ ನಿಗದಿಪಡಿಸಿದ್ದು, ಇದಕ್ಕಿಂತ ಕಡಿಮೆ ದರಕ್ಕೂ ಬ್ಯಾಂಕುಗಳು ಸಾಲ ನೀಡಬಹುದಾಗಿದೆ. ಈ ಸೌಕರ್ಯ ಪಡೆಯಲು ಸೆ.30ರ ವರೆಗೆ ಕಾಲಾವಕಾಶವಿದೆ.