ಹಜ್ ಯಾತ್ರೆ ತೆರಳುವ ಯಾತ್ರಿಗಳಿಗೆ ಇದೀಗ ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಇದೇ ವೇಳೆ ಸುವಿಧಾ ಆ್ಯಪ್ ಲಾಂಚ್ ಮಾಡಲಾಗಿದೆ. ಈ ಆ್ಯಪ್ ಮೂಲಕ ಯಾತ್ರಿಗಳು ಕೆಲ ಸೇವೆಗಳನ್ನು ನೇರವಾಗಿ ಪಡೆದುಕೊಳ್ಳಲು ಸಾಧ್ಯವಿದೆ.

ನವದೆಹಲಿ(ಮಾ.04) ಪವಿತ್ರ ಹಜ್ ಯಾತ್ರಗೆ ಯಾತ್ರಿಗಳು ತಯಾರಾಗಿದ್ದಾರೆ. ಜೂನ್‌ನಿಂದ ಹಜ್ ಯಾತ್ರೆ ಆರಂಭಗೊಳ್ಳುತ್ತಿದೆ. ಇದೀಗ ಕೇಂದ್ರ ಸರ್ಕಾರ ಹಜ್ ಯಾತ್ರಿಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ. ಇದೇ ವೇಳೆ ಹಜ್ ಯಾತ್ರಿಗಳ ಸುಗಮ ಯಾತ್ರೆಗೆ ಸುವಿಧಾ ಆ್ಯಪ್ ಕೂಡ ಲಾಂಚ್ ಮಾಡಲಾಗಿದೆ. ಮಾರ್ಗಸೂಚಿ ಪ್ರಕಟಿಸಿ, ಆ್ಯಪ್ ಲಾಂಚ್ ಮಾಡಿದ ಅಲ್ಪಸಂಖ್ಯಾತ ಸಚಿವೆ ಸ್ಮೃತಿ ಇರಾನಿ, ಹಜ್ ಯಾತ್ರಿಗಳು ಯಾವುದೇ ಅಡೆ ತಡೆ ಇಲ್ಲದೆ, ಯಾತ್ರೆ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದಿದ್ದಾರೆ.

ಹಜ್ ಮಾರ್ಗಸೂಚಿ 2024 ಹಾಗೂ ಸುವಿಧಾ ಆ್ಯಪ್ ಮೂಲಕ ಹಜ್ ಯಾತ್ರಿಗಳಿಗೆ ಸೇವೆ ಒದಗಿಸುವುದು ಮಾತ್ರ ಅಲ್ಪಸಂಖ್ಯಾತ ಸಚಿವಾಲಯದ ಕಾರ್ಯವಲ್ಲ. ಪ್ರಧಾನಿ ಮೋದಿ ಸಲಹೆಯಂತೆ ಎಲ್ಲಾ ಸಚಿವಾಲಯದ ಸಹಯೋಗದೊಂದಿಗೆ ಹಜ್ ಯಾತ್ರೆಗಳಿಗೆ ಸೇವೆ, ಸುಗಮ ಯಾತ್ರೆ, ಯಾವುದೇ ಸಮಯದಲ್ಲೂ ತುರ್ತು ಸೇವೆ ಅಥವಾ ಇನ್ಯಾವುದೇ ಸಹಾಯಕ್ಕೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

370 ದಿನಗಳಲ್ಲಿ ,640 ಕಿ.ಮೀ ನಡೆದು ಕೇರಳದಿಂದ ಮೆಕ್ಕಾ ತಲುಪಿದ ಯುವಕ!

ಕಳೆದ ವರ್ಷ 4,300 ಮಹಿಳೆಯರು ಹಜ್ ಯಾತ್ರೆ ಕೈಗೊಂಡಿದ್ದರು. ಈ ವರ್ಷ ಈ ಸಂಖ್ಯೆ 5,160ಕ್ಕೆ ಏರಿಕೆಯಾಗಿದೆ. ಹಜ್ ಯಾತ್ರಿಗಳಿಗೆ ಎಲ್ಲಾ ರೀತಿಯ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ. ಸುವಿಧಾ ಆ್ಯಪ್ ಮೂಲಕ ಹಜ್ ಯಾತ್ರಿಗಳು ವಿಮಾನ ಪ್ರಯಾಣದ ಮಾಹಿತಿ, ವಸತಿ ವ್ಯವಸ್ಥೆ, ಆರೋಗ್ಯ ಸೇವೆ, ತುರ್ತು ಸೇವೆ ಸೇರಿದಂತೆ ಹಲವು ಸೇವೆಗಳನ್ನು ನೇರವಾಗಿ ಬಳಸಲು ಸಾಧ್ಯವಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಹಜ್ ಯಾತ್ರಿಗಳಿಗೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಕೆಲ ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ. 10 ಭಾಷೆಗಳಲ್ಲಿ ಮಾರ್ಗಸೂಚಿ ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರ ಹಜ್ ಯಾತ್ರೆಯನ್ನು ಪಾರದರ್ಶಕತೆ, ಸುರಕ್ಷಿತ ಪ್ರಯಾಣಕ್ಕೆ ಶಿಸ್ತಿನಿಂದ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ಎಲ್ಲಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.