ನವದೆಹಲಿ(ಡಿ.05): ಕೃಷಿ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಒಪ್ಪಿದ್ದರೂ, ತಮ್ಮ ಪಟ್ಟು ಬಿಡದ ರೈತ ಸಂಘಟನೆಗಳು ಡಿ.8ಕ್ಕೆ ಭಾರತ್‌ ಬಂದ್‌ಗೆ ಕರೆಕೊಟ್ಟಿವೆ. ಈ ನಡುವೆ ಶುಕ್ರವಾರ ಮತ್ತೊಮ್ಮೆ ವಿವಾದ ಇತ್ಯರ್ಥ ಕುರಿತ ತಮ್ಮ ನಿಲುವನ್ನು ಬಹಿರಂಗಪಡಿಸಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ರೈತರ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ. ಹೀಗಾಗಿ ಪ್ರತಿಭಟನೆ ಕೈಬಿಟ್ಟು ಮಾತುಕತೆಗೆ ಮುಂದಾಗಬೇಕು ಎಂದು ಕರೆ ಕೊಟ್ಟಿದ್ದಾರೆ. ಅಲ್ಲದೆ ಶನಿವಾರ ರೈತರೊಂದಿಗೆ ನಡೆಯಲಿರುವ 5ನೇ ಸುತ್ತಿನ ಮಾತುಕತೆ ಫಲಪ್ರದವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ್‌ ಬಂದ್‌:

3 ಕೃಷಿ ಮಸೂದೆಗೆ ತಿದ್ದುಪಡಿ ಮಾಡುವ ಕೇಂದ್ರದ ಆಫರ್‌ ತಿರಸ್ಕರಿಸಿರುವ ರೈತ ಸಂಘಟನೆಗಳು, ಕಾಯ್ದೆಯನ್ನು ಪೂರ್ಣವಾಗಿ ರದ್ದುಪಡಿಸಬೇಕು ಎಂದು ಪಟ್ಟು ಹಿಡಿದಿವೆ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ಡಿ.8ರಂದು ಭಾರತ್‌ ಬಂದ್‌ಗೆ ಕರೆಕೊಟ್ಟಿವೆ. ಈ ಕುರಿತು ಹೇಳಿಕೆ ನೀಡಿರುವ ರೈತ ಮುಖಂಡ ಗುರುನಾಮ್‌ ಸಿಂಗ್‌ ಛಡೋನಿ, ಎಲ್ಲಾ ಕಾಯ್ದೆ ರದ್ದಾಗಬೇಕು. ಇಲ್ಲವೇ ಹೋರಾಟ ತೀವ್ರಗೊಳಿಸಲಾಗುವುದು. ಡಿ.8ರಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ವಾಹನಗಳ ಸುಂಕ ವಸೂಲಿ ಕೇಂದ್ರಗಳಿಗೆ ಮುತ್ತಿಗೆ ಹಾಕಲಾಗುವುದು. ರಾಜಧಾನಿ ದಿಲ್ಲಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬಂದ್‌ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸರ್ಕಾರದ ಭರವಸೆ ಏನು?

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆ ಈಗಿನಂತೆ ಮುಂದುವರಿಯಲಿದೆ. ಅದರಲ್ಲಿ ಬದಲಾವಣೆ ಇಲ್ಲ.

ಎಪಿಎಂಸಿಗಳನ್ನು ಮತ್ತಷ್ಟುಬಲಯುತಗೊಳಿಸಲು, ಅದರ ಬಳಕೆ ಹೆಚ್ಚಳವಾಗುವಂತೆ ನೋಡಿಕೊಳ್ಳಲು ಕ್ರಮ

ಎಪಿಎಂಸಿ, ನೂತನ ಕಾಯ್ದೆಯಡಿ ರಚಿಚನೆಯಾಗುವ ಖಾಸಗಿ ಮಂಡಳಿಗೆ ಸಮಾನ ತೆರಿಗೆ ಬಗ್ಗೆ ಆಲೋಚನೆ

ವ್ಯಾಪಾರದ ವೇಳೆ ವಿವಾದ ಸೃಷ್ಟಿಯಾದರೆ ಉನ್ನತ ಕೋರ್ಟ್‌ಗೆ ಮನವಿ ಸಲ್ಲಿಸುವ ಅವಕಾಶದ ಬಗ್ಗೆ ಪರಿಶೀಲನೆ

ಎಪಿಎಂಸಿಯಿಂದ ಹೊರಗೆ ಕಾರ್ಯನಿರ್ವಹಿಸುವ ವ್ಯಾಪಾರಿಗಳ ನೋಂದಣಿಗೆ ಕಾಯ್ದೆಯಡಿ ಅವಕಾಶಕ್ಕೆ ಸಿದ್ಧ