300ಕ್ಕೂ ಹೆಚ್ಚು ಸಿಬ್ಬಂದಿ ಕಿತ್ತುಹಾಕಿದ ಪ್ರಕರಣದಲ್ಲಿ ಇನ್ಫೋಸಿಸ್‌ ವಿರುದ್ಧ ಕ್ರಮಕ್ಕೆ ರಾಜ್ಯದ ಕಾರ್ಮಿಕ ಇಲಾಖೆಗೆ ಕೇಂದ್ರ ಸೂಚನೆ ನೀಡಿದೆ.

ನವದೆಹಲಿ (ಫೆ.15): ಇನ್ಫೋಸಿಸ್‌ನ ಮೈಸೂರು ಕ್ಯಾಂಪಸ್‌ನಿಂದ 300ಕ್ಕೂ ಹೆಚ್ಚು ಹೊಸ ಸಿಬ್ಬಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕದ ಕಾರ್ಮಿಕ ಇಲಾಖೆಗೆ ಕೇಂದ್ರ ಕಾರ್ಮಿಕ ಸಚಿವಾಲಯ ಸೂಚಿಸಿದೆ. ಆಂತರಿಕ ಪರೀಕ್ಷೆಯಲ್ಲಿ ಸತತ 3 ಬಾರಿ ಅನುತ್ತೀರ್ಣರಾದ ಕಾರಣ ನೀಡಿ 300ಕ್ಕೂ ಹೆಚ್ಚು ಹೊಸ ಸಿಬ್ಬಂದಿಯನ್ನು ಇನ್ಫೋಸಿಸ್‌ ಇತ್ತೀಚೆಗೆ ತೆಗೆದು ಹಾಕಿತ್ತು. ಆದರೆ ಐಟಿ ಉದ್ಯೋಗಿಗಳ ಸಂಘಟನೆಗಳು, ಕೆಲಸದಿಂದ ತೆಗೆದುಹಾಕಿದವರ ಸಂಖ್ಯೆ 700ಕ್ಕಿಂತ ಹೆಚ್ಚಿದೆ ಎಂದು ವಾದಿಸಿತ್ತು. ಜೊತೆಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಿತ್ತು. ಅದರ ಬೆನ್ನಲ್ಲೇ ಪ್ರಕರಣದ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಕಾರ್ಮಿಕ ಸಚಿವಾಲಯಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಾರ, ಐಟಿ ಸೇವೆಗಳ ದೈತ್ಯ ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿ ತಿಂಗಳುಗಟ್ಟಲೆ ಫೌಂಡೇಶನಲ್ ತರಬೇತಿ ಪಡೆದ 300 ಕ್ಕೂ ಹೆಚ್ಚು ಹೊಸಬರನ್ನು ವಜಾಗೊಳಿಸಿರುವುದಾಗಿ ತಿಳಿಸಿತ್ತು. ಐಟಿ ವಲಯದ ಒಕ್ಕೂಟವಾದ ನಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (NITES) ನಿಜವಾದ ಸಂಖ್ಯೆ 700 ಎಂದು ವಾದಿಸಿ, ಇನ್ಫೋಸಿಸ್ ವಿರುದ್ಧ ತಕ್ಷಣದ ಹಸ್ತಕ್ಷೇಪ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಅಧಿಕೃತ ದೂರು ಸಲ್ಲಿಸಿತು.
"ಇನ್ಫೋಸಿಸ್ ಲಿಮಿಟೆಡ್ ಇತ್ತೀಚೆಗೆ ಕ್ಯಾಂಪಸ್ ನೇಮಕಾತಿ ಮಾಡಿಕೊಂಡವರನ್ನು ಬಲವಂತವಾಗಿ ವಜಾಗೊಳಿಸುವ ಕ್ರಮಕ್ಕೆ ಮುಂದಾಗಿದೆ, ಅವರಿಗೆ ಆಫರ್ ಲೆಟರ್‌ಗಳನ್ನು ನೀಡಿದ ನಂತರ ಈಗಾಗಲೇ ಎರಡು ವರ್ಷಗಳ ಕಾಲ ಸೇರ್ಪಡೆ ವಿಳಂಬವಾಗಿತ್ತು" ಎಂದು ದೂರಿನಲ್ಲಿ ಯೂನಿಯನ್ ಹೇಳಿದೆ. ಇನ್ನು ಫ್ರೆಶರ್‌ಗಳಿಗೆ "ಪರಸ್ಪರ ಬೇರ್ಪಡಿಕೆ" ಒಪ್ಪಂದಗಳಿಗೆ ಸಹಿ ಹಾಕುವಂತೆ ಒತ್ತಾಯ ಮಾಡಲಾಗಿತ್ತು ಎನ್ನಲಾಗಿದೆ.

ಇನ್ಫೋಸಿಸ್‌ನಿಂದ ಹೇಳದೆ ಕೇಳದೆ ಉದ್ಯೋಗಿಗಳ ವಜಾ: ಕೇಂದ್ರ ಸರ್ಕಾರಕ್ಕೆ ದೂರು ಕೊಟ್ಟ ಐಟಿ ಸಂಘಟನೆ

NITES ಸಲ್ಲಿಸಿದ ದೂರಿನಲ್ಲಿ, ಇನ್ಫೋಸಿಸ್ ವಿರುದ್ಧ ತನಿಖೆ ನಡೆಸಬೇಕು, ಈ ರೀತಿಯ ವಜಾಗೊಳಿಸುವಿಕೆಯನ್ನು ತಡೆಯಲು ತಡೆಯಾಜ್ಞೆ ಹೊರಡಿಸಬೇಕು, ವಜಾಗೊಳಿಸಿದ ಎಲ್ಲಾ ಉದ್ಯೋಗಿಗಳನ್ನು ಮರು ನೇಮಕ ಮಾಡಿಕೊಳ್ಳಬೇಕು ಮತ್ತು 1947 ರ ಕೈಗಾರಿಕಾ ವಿವಾದ ಕಾಯ್ದೆ ಮತ್ತು ಇತರ ಅನ್ವಯವಾಗುವ ಕಾರ್ಮಿಕ ಕಾನೂನುಗಳ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಂಪನಿಯ ವಿರುದ್ಧ ದಂಡ ವಿಧಿಸಬೇಕು ಎಂದು ಒತ್ತಾಯಿಸಲಾಗಿದೆ.

ಸ್ಯಾಲರಿ ಹೈಕ್ ಮರುದಿನ ಇನ್ಫೋಸಿಸ್‌ನಲ್ಲಿ ಉದ್ಯೋಗ ಕಡಿತ, ಮೈಸೂರು ಕ್ಯಾಂಪಸ್‌ನಲ್ಲಿ ನಡೆದಿದ್ದೇನು?