ಅಯೋಧ್ಯೆ (ನ. 08): ನವೆಂಬರ್ 17 ರ ಒಳಗೆ ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ತೀರ್ಪು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕಟವಾಗಲಿರುವ ಹಿನ್ನೆಲೆ ಎಲ್ಲ ರಾಜ್ಯ ಸರ್ಕಾರಗಳು ಕಟ್ಟೆ ಚ್ಚರ ವಹಿಸಲು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ವಿವಾದದ ಕೇಂದ್ರ ಸ್ಥಾನವಾಗಿರುವ ಉತ್ತರ ಪ್ರದೇಶ ಅದರಲ್ಲೂ ವಿಶೇಷತಃ ಅಯೋಧ್ಯೆಗೆ ೪ ಸಾವಿರ ಅರೆಸೇನಾ ಪಡೆ\ ಸಿಬ್ಬಂದಿಗಳನ್ನು ಕೇಂದ್ರ ಸರ್ಕಾರ ರವಾನಿಸಿದೆ. ಕೇಂದ್ರ ಗೃಹ ಸಚಿವಾಲಯವು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ-ಸೂಚನೆ ರವಾನಿಸಿದೆ. ‘ಸೂಕ್ಷ್ಮ ಸ್ಥಳಗಳಲ್ಲಿ ಸಮರ್ಪಕವಾಗಿ ಭದ್ರತಾ ಸಿಬ್ಬಂದಿ ನಿಯೋಜಿಸಿ. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿ’ ಎಂದು ಸೂಚಿಸಿದೆ.

ತಾತ್ಕಾಲಿಕ ಜೈಲು: ತೀರ್ಪು ಬಂದ ನಂತರ ಗಲಾಟೆಯಾದರೆ ಬಂಧಿತರನ್ನು ಇಡಲು ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ 8 ತಾತ್ಕಾ ಲಿಕ ಜೈಲುಗಳನ್ನು ರೂಪಿಸಲಾಗಿದೆ. ಅಯೋಧ್ಯೆಯಲ್ಲಿ ಉಗ್ರ ನಿಗ್ರಹ ಪಡೆ (ಎಟಿಎಸ್), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಸ್ಥಳೀಯ ಗುಪ್ತಚರ ಪಡೆಗಳನ್ನು ನಿಯೋಜಿಸಲಾಗಿದೆ. ನಗರದಲ್ಲಿ ೧೪೪ನೇ ವಿಧಿಯನ್ವಯ ಈಗಾಗಲೇ ನಿಷೇಧಾಜ್ಞೆ ಜಾರಿಯಲ್ಲಿದೆ. ಸಂಭಾವ್ಯ ಪರಿಸ್ಥಿತಿ ಎದುರಿಸಲು ಉತ್ತರಪ್ರದೇಶ ಸರ್ಕಾರ ಎಲ್ಲ 75 ಜಿಲ್ಲೆಗಳ ಪೊಲೀಸರು ಹಾಗೂ ಅಧಿಕಾರಿಗಳ ರಜೆಯನ್ನು ನ. 30 ರವರೆಗೆ ರದ್ದುಗೊಳಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬರುವ ಪ್ರಚೋದಕ ಹೇಳಿಕೆಗಳ ಬಗ್ಗೆ ರಾಷ್ಟ್ರೀಯ ಭದ್ರ ತಾ ಕಾಯ್ದೆ ಅಡಿ ಕೇಸ್ ದಾಖಲಿಸಲಾಗುತ್ತದೆ.

78 ಸೂಕ್ಷ್ಮ ರೈಲು ನಿಲ್ದಾಣಗಳು: ಈ ನಡುವೆ, ರೈಲ್ವೆ ಇಲಾಖೆ ಕೂಡ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಪ್ರಯಾಣಿಕ ಸಂದಣಿ ಇರುವ ದೇಶದ 78 ರೈಲು ನಿಲ್ದಾಣಗಳನ್ನು ಸೂಕ್ಷ್ಮ ಎಂದು ಇಲಾಖೆ ಗುರುತಿಸಿದೆ. ವಿಶೇಷವಾಗಿ ಧಾರ್ಮಿಕ ಸ್ಥಳಗಳ ಸನಿಹದ ರೈಲು ನಿಲ್ದಾಣ ಗಳಲ್ಲಿ ಗಲಭೆ ಆಗುವ ಸಾಧ್ಯತೆ ಇದ್ದು, ಎಚ್ಚರಿಕೆ ವಹಿಸಬೇಕು ಎಂದಿರುವ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್), ತನ್ನೆಲ್ಲ ಸಿಬ್ಬಂದಿ ರಜೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ರದ್ದುಗೊಳಿಸಿದೆ.