ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುತ್ರಿ ವೀಣಾ ವಿರುದ್ಧ ಪ್ರಾಸಿಕ್ಯೂಷನ್ ಪ್ರಕ್ರಿಯೆಗೆ ಕೇಂದ್ರ ಸಚಿವಾಲಯ ಅನುಮತಿ ನೀಡಿದೆ. ಸಿಎಂಆರ್‌ಎಲ್‌ನಿಂದ ವೀಣಾ ಅವರ ಎಕ್ಸಲಾಜಿಕ್ ಸಂಸ್ಥೆಗೆ 2.73 ಕೋಟಿ ರೂ.ಗಳನ್ನು ಐಟಿ ದಾಖಲೆಗಳಿಲ್ಲದೆ ಪಡೆದ ಆರೋಪವಿದೆ. ಎಸ್ಎಫ್‌ಐಒ ವರದಿಯಂತೆ, ಇದು ಮೋಸದ ಪಾವತಿ. ಈ ವಿಷಯದಲ್ಲಿ ವೀಣಾ ಸೇರಿದಂತೆ 25 ಜನರನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಸಿಪಿಎಂ ಈ ಕ್ರಮವನ್ನು ರಾಜಕೀಯ ಪ್ರೇರಿತ ಎಂದು ಹೇಳಿದೆ.

ಕೇರಳದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರಕ್ಕೆ ಭಾರಿ ಹೊಡೆತವಾಗಿದೆ. ವಿವಾದಿತ ಗಣಿ ಕಂಪೆನಿ ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ನಿಂದ ನಡೆದಿದೆ ಎನ್ನಲಾದ ಪಾವತಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ ವೀಣಾ ವಿರುದ್ಧ ಪ್ರಾಸಿಕ್ಯೂಷನ್ ಪ್ರಕ್ರಿಯೆಗಳಿಗೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಅನುಮೋದನೆ ನೀಡಿದೆ.

ಕೊಚ್ಚಿಯಲ್ಲಿರುವ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ - SFIO) ವೀಣಾ ವಿರುದ್ಧ ತನ್ನ ಆರೋಪಪಟ್ಟಿಯನ್ನು ಸಲ್ಲಿಸಿದ ನಂತರ ಈ ಅನುಮತಿ ಬಂದಿದೆ. SFIO ವರದಿ ಪ್ರಕಾರ ವೀಣಾ ಮತ್ತು ಅವರ ಬೆಂಗಳೂರಿನಲ್ಲಿರುವ ಸಂಸ್ಥೆಯಾದ ಎಕ್ಸಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್‌ ಲಿಮಿಟೆಡ್‌ ಯಾವುದೇ ಐಟಿ ದಾಖಲೆಗಳನ್ನು ನೀಡದೆ CMRL ನಿಂದ 2.73 ಕೋಟಿ ರೂ.ಗಳನ್ನು ಪಡೆದಿವೆ. ಎರಡೂ ಸಂಸ್ಥೆಗಳ ಮಧ್ಯೆ ಔಪಚಾರಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ, ಆದರೆ ಈ ಪಾವತಿಗಳು ಮೋಸ ಮತ್ತು ನ್ಯಾಯಸಮ್ಮತವಲ್ಲ ಎಂದು SFIO ಹೇಳಿದೆ.

ಮಾನವ-ವನ್ಯಜೀವಿ ಸಂಘರ್ಷ, ಕೇರಳದಿಂದ ಸಂತ್ರಸ್ತರಿಗೆ ಪರಿಹಾರ ನೀಡಲು ಪ್ರಿಯಾಂಕಾ ಗಾಂಧಿ ಆಗ್ರಹ

2017 ಮತ್ತು 2020 ರ ನಡುವೆ ಎಕ್ಸಾಲಾಜಿಕ್ CMRL ನಿಂದ 1.72 ಕೋಟಿ ರೂ.ಗಳನ್ನು ಪಡೆದಿದೆ ಎಂದು ವರದಿಯಾಯ್ತು, ಆಗಸ್ಟ್ 8, 2023 ರಂದು ಈ ಅವ್ಯವಹಾರ ಮೊದಲು ಬೆಳಕಿಗೆ ಬಂದಿತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಿವರವಾದ ತನಿಖೆ ನಡೆಸುವಂತೆ SFIO ಗೆ ನಿರ್ದೇಶನ ನೀಡಿತು. ಇದೀಗ ತನ್ನ 160 ಪುಟಗಳ ಪ್ರಾಸಿಕ್ಯೂಷನ್ ದೂರಿನಲ್ಲಿ SFIO ಇಲಾಖೆಯು ವೀಣಾ, CMRL ವ್ಯವಸ್ಥಾಪಕ ನಿರ್ದೇಶಕ ಶಶಿಧರನ್ ಕರ್ತಾ ಮತ್ತು ಇತರ 25 ಜನರನ್ನು ಆರೋಪಿಗಳೆಂದು ಉಲ್ಲೇಖಿಸಿದೆ. CMRL, ಎಕ್ಸಲಾಜಿಕ್ ಸೊಲ್ಯೂಷನ್ಸ್ ಮತ್ತು ಅದರ ಅಂಗಸಂಸ್ಥೆ ಎಂಪವರ್ ಇಂಡಿಯಾ ಕ್ಯಾಪಿಟಲ್ ಇನ್ವೆಸ್ಟ್ಮೆಂಟ್ಸ್ ಸೇರಿದಂತೆ ಹಲವಾರು ಸಂಸ್ಥೆಗಳನ್ನು ತನ್ನ ಆರೋಪ ಪಟ್ಟಿಯಲ್ಲಿ ನಮೂದಿಸಿದೆ. ವೀಣಾ ಅಂಗಸಂಸ್ಥೆ ಸಂಸ್ಥೆಯಿಂದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು SFIO ಹೇಳಿದೆ.

ಅಪರಾಧ ಸಾಬೀತಾದರೆ, ವೀಣಾ ಮತ್ತು ಇತರ ಆರೋಪಿಗಳು 2013 ರ ಕಂಪನಿ ಕಾಯ್ದೆಯಡಿಯಲ್ಲಿ ಆರು ತಿಂಗಳಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ಆಗಲಿದೆ. ಈ ಶಿಕ್ಷೆಯ ಜೊತೆಗೆ ಅಕ್ರಮವಾಗಿ ಸಂಗ್ರಹಿಸಿದ ಮೊತ್ತದ ಮೂರು ಪಟ್ಟು ದಂಡವನ್ನು ಕೂಡ ಕಟ್ಟಬೇಕಾಗುತ್ತದೆ. ವೀಣಾ ಅವರ ಕಂಪನಿಯು CMRL ನಿಂದ ಒಟ್ಟು 2.70 ಕೋಟಿ ರೂ.ಗಳನ್ನು ಪಡೆದಿರುವುದನ್ನು SFIO ಪತ್ತೆ ಮಾಡಿದೆ. ಪ್ರತ್ಯೇಕವಾಗಿ, CMRL ಸಿಬ್ಬಂದಿಯ ಠೇವಣಿಗಳ ಆಧಾರದ ಮೇಲೆ ಆದಾಯ ತೆರಿಗೆ ಮಧ್ಯಂತರ ಇತ್ಯರ್ಥ ಮಂಡಳಿಯು 2023 ರಲ್ಲಿ 1.72 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಯುಜಿಸಿ ಕರಡು ನಿಯಮಾವಳಿಗೆ ವಿರೋಧ: ದಕ್ಷಿಣ ರಾಜ್ಯಗಳಿಂದ ಮತ್ತೊಮ್ಮೆ ಒಗ್ಗಟ್ಟಿನ ಬಲಪ್ರದರ್ಶನ

ಒಗ್ಗಟ್ಟಾದ ಪಕ್ಷದ ನಾಯಕರು:
ಪ್ರಾಸಿಕ್ಯೂಷನ್ ಅನುಮತಿ ಸಿಕ್ಕಿದ ಕೂಡಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಪರವಾಗಿ ಪಕ್ಷದ ನಾಯಕರು ಒಗ್ಗಟ್ಟಾಗಿ ನಿಂತಿದ್ದಾರೆ. ವೀಣಾ ವಿಜಯನ್ ಅವರನ್ನು ವಿಚಾರಣೆಗೆ ಒಳಪಡಿಸುವ ಅನುಮತಿಯನ್ನು ಸಿಪಿಎಂ ಗಂಭೀರವಾಗಿ ಪರಿಗಣಿಸಿಲ್ಲ. ಪಕ್ಷದ ಸಭೆ ನಡೆಯುತ್ತಿರುವಾಗಲೇ ಅನುಮತಿ ನೀಡಿದ್ದು ಮುಖ್ಯಮಂತ್ರಿಯವರನ್ನು ಗುರಿಯಾಗಿಸಿಕೊಂಡು ಮಾಡಿರುವ ತಂತ್ರವೆಂದು ಪಕ್ಷವು ಭಾವಿಸಿದ್ದು, ಕಾನೂನು ರೀತಿಯಲ್ಲಿ ಸತ್ಯಾಸತ್ಯತೆಯನ್ನು ಸಾಬೀತುಪಡಿಸಲು ಸಾಧ್ಯವೆಂದು ನಂಬಿದೆ. 

ಮುಖ್ಯಮಂತ್ರಿಯವರನ್ನು ಟಾರ್ಗೆಟ್ ಮಾಡುವ ರಾಜಕೀಯ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಪ್ರತಿಕ್ರಿಯಿಸಿದ್ದಾರೆ. ರಾಜಕೀಯವಾಗಿ ಇದನ್ನು ಎದುರಿಸಲಾಗುವುದು ಎಂದೂ ಹೇಳಿದ ಗೋವಿಂದನ್, ಲಂಚಕ್ಕೆ ಯಾರಾದರೂ ತೆರಿಗೆ ಕಟ್ಟುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಪಕ್ಷದ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಪಿಎಂಗೆ ಮಸಿ ಬಳಿಯಲು ಮತ್ತು ಮುಖ್ಯಮಂತ್ರಿಯವರನ್ನು ಟಾರ್ಗೆಟ್ ಮಾಡಲು ಈ ಪ್ರಯತ್ನ ನಡೆಯುತ್ತಿದೆ. ಇದು ಉದ್ದೇಶಪೂರ್ವಕವಾಗಿ ಸೃಷ್ಟಿಸಿದ ಸುಳ್ಳು ಪ್ರಚಾರ ಎಂದು ಹೇಳಿದರು.

ಎಸ್ಎಫ್ಐ ತನಿಖೆಯು ಈ ರಾಜಕೀಯ ಹಿನ್ನೆಲೆಯಲ್ಲಿ ನಡೆಯುತ್ತಿರುವುದರಿಂದ ಸೂಕ್ಷ್ಮವಾಗಿ ಪರಿಶೀಲಿಸಬೇಕಾದ ವಿಷಯವಾಗಿದೆ ಎಂದು ಎಂ.ವಿ.ಗೋವಿಂದನ್ ಹೇಳಿದರು. ಇದು ರಾಜಕೀಯ ಕಾರ್ಯಸೂಚಿಯ ಭಾಗವಾಗಿದೆ. ಸರ್ಕಾರದ ಕಡೆಯಿಂದ ಯಾವುದೇ ರೀತಿಯ ಸಹಾಯವನ್ನು ಮಾಡಲಾಗಿಲ್ಲ. ಸಿಎಂಆರ್ಎಲ್ ಕಂಪನಿಗೆ ಅನುಕೂಲಕರವಾಗಿ ಸರ್ಕಾರ ಯಾವುದೇ ನಿಲುವನ್ನು ತೆಗೆದುಕೊಂಡಿಲ್ಲ ಎಂದು ಎಂ.ವಿ.ಗೋವಿಂದನ್ ಮಾಧ್ಯಮಗಳಿಗೆ ತಿಳಿಸಿದರು.

ಎಸ್ಎಫ್ಐಒ ತನಿಖೆಗೆ ಸಂಬಂಧಿಸಿದ ಸುದ್ದಿಯನ್ನು ಸಹ ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿದೆ. ದೆಹಲಿ ಹೈಕೋರ್ಟ್‌ನಲ್ಲಿ ಪ್ರಕರಣವನ್ನು ರದ್ದುಗೊಳಿಸಲು ವಾದ ನಡೆಯುತ್ತಿದೆ. ವಾದವನ್ನು ಆಲಿಸಿದ ನ್ಯಾಯಾಧೀಶರನ್ನು ಅಲಹಾಬಾದ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಜುಲೈನಲ್ಲಿ ವಿಸ್ತಾರವಾದ ವಾದವನ್ನು ಆಲಿಸಲು ನಿರ್ಧರಿಸಿರುವಾಗ ಈಗ ಎಸ್ಎಫ್ಐಒ ಈ ನಾಟಕವನ್ನು ಆಡುತ್ತಿದೆ. ಇದು ರಾಜಕೀಯ ಕಾರ್ಯಸೂಚಿಯ ಭಾಗವಾಗಿದೆ ಎಂದು ಗೋವಿಂದನ್ ಆರೋಪಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದು ಎರಡು ಕಂಪನಿಗಳ ನಡುವಿನ ವ್ಯವಹಾರವಾಗಿದೆ. ಮುಖ್ಯಮಂತ್ರಿಯಾಗಲಿ ಅಥವಾ ಸರ್ಕಾರವಾಗಲಿ ಕಂಪನಿಗೆ ಯಾವುದೇ ರೀತಿಯ ಸಹಾಯವನ್ನು ಮಾಡಿಲ್ಲ. ಮೂರು ನ್ಯಾಯಾಲಯಗಳು ಮುಖ್ಯಮಂತ್ರಿಯವರನ್ನು ಭ್ರಷ್ಟಾಚಾರದಲ್ಲಿ ಸಿಲುಕಿಸಲು ಏನನ್ನೂ ಕಂಡುಹಿಡಿಯಲಿಲ್ಲ ಎಂದು ಗೋವಿಂದನ್ ಹೇಳಿದರು.