ನವದೆಹಲಿ (ಡಿ.18):  ದೇಶಾದ್ಯಂತ ಇರುವ ಎಲ್ಲಾ ಖಾಸಗಿ ಸೆಕ್ಯುರಿಟಿ ಗಾರ್ಡ್‌ಗಳು ಹಾಗೂ ಸೆಕ್ಯುರಿಟಿ ಏಜೆನ್ಸಿಗಳ ಮಾಲಿಕರು ವಿಪತ್ತು ನಿರ್ವಹಣೆಯ ಬಗ್ಗೆ ತರಬೇತಿ ಪಡೆಯುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಖಾಸಗಿ ಸೆಕ್ಯುರಿಟಿ ಗಾರ್ಡ್‌ಗಳು 20 ದಿನಗಳ ಹಾಗೂ ಖಾಸಗಿ ಸೆಕ್ಯುರಿಟಿ ಏಜೆನ್ಸಿಗಳ ಮಾಲಿಕರು 6 ದಿನಗಳ ತರಬೇತಿ ಪಡೆಯುವುದು ಕಡ್ಡಾಯವಾಗಿದೆ.

ಸೆಕ್ಯುರಿಟಿ ಗಾರ್ಡ್‌ಗಳು ಗುಂಪು ನಿಯಂತ್ರಿಸುವುದು, ಅಗ್ನಿ ಆಕಸ್ಮಿಕಗಳ ನಿರ್ವಹಣೆ ಹಾಗೂ ಬಾಂಬ್‌ಗಳನ್ನು ಗುರುತಿಸುವ ಬಗ್ಗೆ ತರಬೇತಿ ಪಡೆಯಬೇಕಿದೆ. ಏಜೆನ್ಸಿಗಳ ಮಾಲಿಕರು ಆಂತರಿಕ ಭದ್ರತೆ ಹಾಗೂ ವಿಪತ್ತು ನಿರ್ವಹಣೆ ಬಗ್ಗೆ ತರಬೇತಿ ಪಡೆಯಬೇಕಿದೆ. 2005ರ ಖಾಸಗಿ ಸೆಕ್ಯುರಿಟಿ ಏಜೆನ್ಸಿಗಳ ನಿಯಂತ್ರಣ ಕಾಯ್ದೆಯಡಿ ‘ಖಾಸಗಿ ಸೆಕ್ಯುರಿಟಿ ಏಜೆನ್ಸಿಗಳ ಕೇಂದ್ರೀಯ ಮಾದರಿ ನಿಯಮಗಳು-2020’ ಎಂಬ ನಿಯಮಾವಳಿಯನ್ನು ಕೇಂದ್ರ ಗೃಹ ಇಲಾಖೆ ಬಿಡುಗಡೆ ಮಾಡಿದೆ. ಅದರಲ್ಲಿ ತರಬೇತಿಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಈ ತರಬೇತಿಗಳನ್ನು ಎಲ್ಲಿ ಪಡೆಯಬೇಕು ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ.

ನಿಮ್ಮ ಫೋನ್‌ನಲ್ಲಿ ಬ್ಯಾಂಕ್ ಪಾಸ್‌ವರ್ಡ್, ಕಾರ್ಡ್ ಮಾಹಿತಿ ಸುರಕ್ಷಿತವಾಗಿಡಲು ಸೈಬಲ್ ಲಾಕ್ !

ಕಳೆದ ವರ್ಷದ ಸಮೀಕ್ಷೆಯ ಪ್ರಕಾರ ದೇಶದಲ್ಲಿ 90 ಲಕ್ಷ ಖಾಸಗಿ ಸೆಕ್ಯುರಿಟಿ ಗಾರ್ಡ್‌ಗಳಿದ್ದಾರೆ. ದೇಶದಲ್ಲಿರುವ ಒಟ್ಟು ಪೊಲೀಸರ ಸಂಖ್ಯೆ 30 ಲಕ್ಷ.
 
ಹೊಸ ನಿಯಮದಲ್ಲಿ ಏನಿದೆ?

1. ಖಾಸಗಿ ಸೆಕ್ಯುರಿಟಿ ಏಜೆನ್ಸಿಗಳು ತಮ್ಮ ಮಾಲಿಕ, ತಮ್ಮಲ್ಲಿರುವ ಸೆಕ್ಯುರಿಟಿ ಗಾರ್ಡ್‌ಗಳು ಅಥವಾ ಮೇಲ್ವಿಚಾರಕರ ವಿರುದ್ಧ ಕ್ರಿಮಿನಲ್‌ ಕೇಸುಗಳಿದ್ದರೆ ಕೂಡಲೇ ಸರ್ಕಾರಕ್ಕೆ ಮಾಹಿತಿ ನೀಡಬೇಕು.

2. ಖಾಸಗಿ ಸೆಕ್ಯುರಿಟಿ ಗಾರ್ಡ್‌ಗಳು ಹಾಗೂ ಮೇಲುಸ್ತುವಾರಿಗಳ ನಡತೆ ಹಾಗೂ ಹಿನ್ನೆಲೆಯನ್ನು ಏಜೆನ್ಸಿಗಳು ತಕ್ಷಣ ಪರಿಶೀಲನೆ ನಡೆಸಬೇಕು. ಪೊಲೀಸರು ಅಥವಾ ಸರ್ಕಾರದ ಬಳಿಯಿರುವ ಅಪರಾಧಗಳ ಡೇಟಾಬೇಸ್‌ ಬಳಸಿ ಪರಿಶೀಲಿಸಬಹುದು.

3. ಸೆಕ್ಯುರಿಟಿ ಗಾರ್ಡ್‌ಗಳಿಗೆ ಭದ್ರತಾ ವಿಷಯಗಳ ಬಗ್ಗೆ 100 ತಾಸು ತರಗತಿಯಲ್ಲಿ ಬೋಧನೆ ಹಾಗೂ 60 ತಾಸು ಪ್ರಾಯೋಗಿಕ ತರಬೇತಿ ಸೇರಿದಂತೆ 20 ದಿನಗಳ ಕಾಲ ತರಬೇತಿ ನೀಡಬೇಕು.

4. ಸೆಕ್ಯುರಿಟಿ ಗಾರ್ಡ್‌ಗಳು ನಿವೃತ್ತ ಸೈನಿಕ ಅಥವಾ ನಿವೃತ್ತ ಪೊಲೀಸರಾಗಿದ್ದರೆ ಅವರಿಗೆ 40 ತಾಸು ಕ್ಲಾಸ್‌ರೂಂ ಬೋಧನೆ ಹಾಗೂ 16 ತಾಸು ಪ್ರಾಯೋಗಿಕ ತರಬೇತಿಯನ್ನು ಹೊಂದಿರುವ 7 ದಿನಗಳ ತರಬೇತಿ ನೀಡಬೇಕು.

5. ಸೆಕ್ಯುರಿಟಿ ಗಾರ್ಡ್‌ಗಳಿಗೆ ನೀಡುವ ತರಬೇತಿಯಲ್ಲಿ ದೈಹಿಕ ಫಿಟ್‌ನೆಸ್‌, ದೈಹಿಕ ಭದ್ರತೆ, ಆಸ್ತಿಗಳ ರಕ್ಷಣೆ, ಕಟ್ಟಡ ಅಥವಾ ಅಪಾರ್ಟ್‌ಮೆಂಟ್‌ಗಳ ಭದ್ರತೆ, ವೈಯಕ್ತಿಕ ರಕ್ಷಣೆ, ಅಗ್ನಿಶಾಮಕ, ಗುಂಪು ನಿಯಂತ್ರಣ, ಗುರುತಿನ ದಾಖಲೆಗಳ ಪರಿಶೀಲನೆ ಕುರಿತು ಮಾಹಿತಿ ನೀಡಲಾಗುತ್ತದೆ.

6. ಖಾಸಗಿ ಸೆಕ್ಯುರಿಟಿ ಗಾರ್ಡ್‌ಗಳಿಗೆ ಇಂಗ್ಲಿಷ್‌ ಅಕ್ಷರಗಳನ್ನು ಓದಲು ಹಾಗೂ ಅರ್ಥ ಮಾಡಿಕೊಳ್ಳಲು ಮತ್ತು ಅರೇಬಿಕ್‌ ಸಂಖ್ಯೆಗಳನ್ನು ಓದಲು ಬರುವುದು ಕಡ್ಡಾಯ. ಏಕೆಂದರೆ ಶಸ್ತ್ರಾಸ್ತ್ರಗಳ ಲೈಸನ್ಸ್‌, ಪ್ರಯಾಣ ದಾಖಲೆ ಹಾಗೂ ಸೆಕ್ಯುರಿಟಿ ತಪಾಸಣೆ ಶೀಟ್‌ಗಳಲ್ಲಿ ಈ ನಂಬರ್‌ಗಳಿರುತ್ತವೆ.

7. ತರಬೇತಿಯಲ್ಲಿ ಸುಧಾರಿತ ಸ್ಫೋಟಕ (ಐಇಡಿ)ಗಳನ್ನು ಗುರುತಿಸುವುದು, ಪ್ರಥಮ ಚಿಕಿತ್ಸೆ, ವಿಪತ್ತು ನಿರ್ವಹಣೆ ಹಾಗೂ ಪ್ರತಿಕ್ರಿಯೆ, ನಿಷೇಧಿತವಲ್ಲದ ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವುದು, ಭಾರತೀಯ ದಂಡಸಂಹಿತೆಯ ಪ್ರಾಥಮಿಕ ಜ್ಞಾನ, ಪೊಲೀಸ್‌ ಠಾಣೆಗೆ ದೂರು ನೀಡುವುದು, ಪೊಲೀಸ್‌ ಹಾಗೂ ಮಿಲಿಟರಿ ಅಧಿಕಾರಿಗಳ ರಾರ‍ಯಂಕ್‌ ಬಗ್ಗೆ ಹಾಗೂ ಸಾರ್ವಜನಿಕವಾಗಿ ಬಳಸುವ ಮತ್ತು ಪೊಲೀಸರು ಬಳಸುವ ಶಸ್ತ್ರಾಸ್ತ್ರಗಳ ಬಗ್ಗೆ ಪ್ರಾಥಮಿಕ ಮಾಹಿತಿ ನೀಡಲಾಗುತ್ತದೆ.

8. ಸೆಕ್ಯುರಿಟಿ ಗಾರ್ಡ್‌ ಆಗುವವರು ಕನಿಷ್ಠ 160 ಸೆಂ.ಮೀ. (ಮಹಿಳೆಗೆ 150 ಸೆಂ.ಮೀ.) ಎತ್ತರ ಹಾಗೂ ಅದಕ್ಕೆ ತಕ್ಕ ತೂಕ, 80 ಸೆಂ.ಮೀ. ಎದೆಯಳತೆ ಮತ್ತು 4 ಸೆಂ.ಮೀ. ಎದೆಯ ವಿಸ್ತರಣೆ ಅಳತೆ ಹೊಂದಿರಬೇಕು. ದೂರದ ದೃಷ್ಟಿ6/6, ಸಮೀಪದ ದೃಷ್ಟಿ0.6/0.6 ಇರಬೇಕು. ಬಣ್ಣಗುರುಡು ಇರಬಾರದು.

9. ಸೆಕ್ಯುರಿಟಿ ಏಜೆನ್ಸಿ ನಡೆಸುವ ಲೈಸನ್ಸ್‌ದಾರರು ವಿಪತ್ತು ನಿರ್ವಹಣೆ, ಸೆಕ್ಯುರಿಟಿಯ ವಿಧಾನ, ವಿಐಪಿ ಸೆಕ್ಯುರಿಟಿ, ಆಂತರಿಕ ಭದ್ರತೆ, ಸಾಂಸ್ಥಿಕ ಭದ್ರತೆ, ಅಗ್ನಿಶಾಮಕ ಹಾಗೂ ಸ್ಫೋಟಕಗಳ ಬಗ್ಗೆ ಕನಿಷ್ಠ 6 ದಿನಗಳ ತರಬೇತಿ ಪಡೆಯಬೇಕು.