ಬೇಡದ ಗುಜುರಿ ಸಾಮಾನು ಮಾರಿ 2364 ಕೋಟಿ ರೂ. ಗಳಿಕೆ ಮಾಡಿದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರವು ತನ್ನ ಕಚೇರಿಗಳಲ್ಲಿನ ಬೇಡದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ₹2,364 ಕೋಟಿ ಗಳಿಸಿದೆ. ಈ ಅಭಿಯಾನವು 2021 ರಿಂದ 2024 ರವರೆಗೆ ನಡೆದಿದ್ದು, 5.97 ಲಕ್ಷ ಸ್ಥಳಗಳನ್ನು ಒಳಗೊಂಡಿದೆ.
ಭಾರತ ಸರ್ಕಾರವೂ ಇತ್ತೀಚೆಗೆ ತನ್ನ ಕಚೇರಿಗಳ ಸ್ವಚ್ಛತಾ ಕಾರ್ಯ ನಡೆಸಿದ್ದು, ಬೇಡವಾದ ಹಳೆಯ ಗುಜುರಿ ಸಾಮಾನುಗಳನ್ನು ಮಾರಿ ಬರೋಬ್ಬರಿ ಕೋಟ್ಯಾಂತರ ರೂಪಾಯಿಯನ್ನು ಗಳಿಕೆ ಮಾಡಿದೆ. ಜೊತೆಗೆ ಕಚೇರಿಯಲ್ಲಿನ ಬೇಡವಾದ ವಸ್ತುಗಳನ್ನು ಗುಜರಿಗೆ ಮಾರಿದ್ದರಿಂದ ಕಚೇರಿಗಳಲ್ಲಿ ಸ್ಥಳಾವಕಾಶ ಹೆಚ್ಚಾಗಿದೆ. 2021ರಿಂದ 2024ರವರೆಗಿನ ಒಟ್ಟು ಮೂರುವರೆ ವರ್ಷಗಳ ಗುಜರಿ ಸಾಮಾನುಗಳನ್ನು ಮಾರಲಾಗಿದ್ದು, ಇದುವರೆಗೆ ಈ ಬೇಡವಾದ ವಸ್ತುಗಳ ಮಾರಾಟದಿಂದ ಸುಮಾರು 2,364 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಒಟ್ಟು 5.97 ಲಕ್ಷ ಸ್ಥಳಗಳನ್ನು ಇದು ಒಳಗೊಂಡಿದ್ದು, ಈ ಸ್ವಚ್ಛತಾ ಅಭಿಯಾನದ ಬೆಳೆಯುತ್ತಿರುವ ವ್ಯಾಪ್ತಿಯನ್ನು ಸೂಚಿಸುತ್ತಿದೆ.
2011ರಿಂದಲೂ ಬಳಕೆಯಲ್ಲಿ ಇಲ್ಲದ ಹಾಗೂ ಶಾಶ್ವತವಾಗಿ ಬೇಡವಾದ ವಸ್ತುಗಳನ್ನು ಮಾರಿ ಒಟ್ಟು 2,364 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಗಳಿಕೆ ಮಾಡಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವಿಶೇಷ ಅಭಿಯಾನ 4.0, ಇದು ಭಾರತದ ಈ ರೀತಿಯ ಅತೀ ದೊಡ್ಡ ಅಭಿಯಾನವಾಗಿದ್ದು, ಬೇಡದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ದೇಶದ ಬೊಕ್ಕಸಕ್ಕೆ ಸುಮಾರು 2,364 ಕೋಟಿ ರೂಪಾಯಿ ಬಂದಿದೆ ಎಂದು ಬರೆದುಕೊಂಡಿದ್ದಾರೆ.
ಈ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ಇಂತಹ ಒಳ್ಳೆಯ ಪ್ರಯತ್ನಕ್ಕೆ ಸರ್ಕಾರವನ್ನು ಶ್ಲಾಘಿಸಿದ್ದಾರೆ. ದಕ್ಷ ನಿರ್ವಹಣೆ ಮತ್ತು ಪೂರ್ವಭಾವಿ ಕ್ರಮದ ಮೇಲೆ ಕೇಂದ್ರೀಕರಿಸುವ ಮೂಲಕ ಈ ಪ್ರಯತ್ನವು ಉತ್ತಮ ಫಲಿತಾಂಶ ನೀಡಿದೆ. ಸಾಮೂಹಿಕ ಪ್ರಯತ್ನಗಳು ಸುಸ್ಥಿರ ಫಲಿತಾಂಶಗಳಿಗೆ ಹೇಗೆ ಕಾರಣವಾಗಬಹುದು ಎಂಬುದನ್ನು ತೋರಿಸುತ್ತದೆ, ಸ್ವಚ್ಛತೆ ಹಾಗೂ ಆರ್ಥಿಕ ವಿವೇಕ ಎರಡನ್ನೂ ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.
ಇಂತಹ ಗುಜುರಿ ಅಭಿಯಾನವನ್ನು ಸರ್ಕಾರ ನಡೆಸುತ್ತಿರುವುದು ಇದೇ ಮೊದಲಲ್ಲ, 2021ರಿಂದ ಇದುವರಗೆ ಮಾಡಿದ ಈ ಕಾರ್ಯಾಚರಣೆಯಲ್ಲಿ ಒಟ್ಟು 2,364 ಕೋಟಿ ಗಳಿಕೆಯಾಗಿದೆ. 2024ರಲ್ಲಿ 5.97 ಲಕ್ಷ ಸೈಟುಗಳು ಈ ಅಭಿಯಾನದ ಭಾಗವಾಗಿವೆ. 2023ರಲ್ಲಿ 2.59 ಲಕ್ಷ ಸೈಟುಗಳಿದ್ದವು ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಈ ಅಭಿಯಾನವು ಸರ್ಕಾರಿ ಕಚೇರಿಗಳಾದ್ಯಂತ ಇದ್ದ ಕಾಗದದ ಕೆಲಸಗಳಲ್ಲಿನ ಬಾಕಿಯನ್ನು ಸಹ ನಿಭಾಯಿಸಿತು. ಸಿಂಗ್ ಅವರು ಮಾಡಿದ ಪ್ರಗತಿಯನ್ನು ಶ್ಲಾಘಿಸಿದರು, ಅನೇಕ ಇಲಾಖೆಗಳು ತಮ್ಮ ಗುರಿಗಳಲ್ಲಿ 90-100% ಅನ್ನು ತೆರವುಗೊಳಿಸಿವೆ. ಈ ವೇಗವನ್ನು ಕಾಯ್ದುಕೊಳ್ಳುವಂತೆ ಅವರು ಅಧಿಕಾರಿಗಳನ್ನು ಪ್ರೋತ್ಸಾಹಿಸಿದರು.