ನವದೆಹಲಿ(ಜ.03): ಸಾರಿಗೆ ನಿಯಮಗಳ ಉಲ್ಲಂಘನೆಗೆ ವಿಧಿಸುವ ದಂಡವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ ಮೇಲೆ ಇದೀಗ ಕೇಂದ್ರ ಸರ್ಕಾರ ತಂಬಾಕು ಉತ್ಪನ್ನಗಳ ಸೇವನೆ ಹಾಗೂ ಮಾರಾಟಕ್ಕೆ ಕಡಿವಾಣ ಹಾಕಲು ಅತ್ಯಂತ ಕಠಿಣ ನಿರ್ಬಂಧ ಹಾಗೂ ಭಾರಿ ಪ್ರಮಾಣದ ದಂಡ ಜಾರಿಗೊಳಿಸಲು ಮುಂದಾಗಿದೆ. ಇದಕ್ಕಾಗಿ ದೇಶದಲ್ಲಿ ಧೂಮಪಾನ ಹಾಗೂ ತಂಬಾಕು ಸೇವನೆಯ ಕಾನೂನುಬದ್ಧ ವಯೋಮಿತಿಯನ್ನು ಈಗಿರುವ 18 ವರ್ಷದಿಂದ 21 ವರ್ಷಕ್ಕೆ ಏರಿಸಲು ಸರ್ಕಾರ ನಿರ್ಧರಿಸಿದೆ. ಜೊತೆಗೆ, ನಿಷೇಧಿತ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ವಿಧಿಸುವ ದಂಡವನ್ನು ಈಗಿನ 200 ರು.ದಿಂದ 2000 ರು.ಗೆ ಏರಿಸುವುದಕ್ಕೂ ಮುಂದಾಗಿದೆ.

ಇದಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆಯು ‘ಸಿಗರೆಟ್‌ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ, ಉತ್ಪಾದನೆ, ಪೂರೈಕೆ ಹಾಗೂ ಮಾರಾಟ ನಿಯಂತ್ರಣ) ತಿದ್ದುಪಡಿ ಕಾಯ್ದೆ-2020’ರ ಕರಡು ಸಿದ್ಧಪಡಿಸಿದೆ. ಈಗಾಗಲೇ ಜಾರಿಯಲ್ಲಿರುವ ಈ ಕಾಯ್ದೆಗೆ ಇನ್ನಷ್ಟುಬಲ ತುಂಬಲು ಸೆಕ್ಷನ್‌ 7ಕ್ಕೆ ತಿದ್ದುಪಡಿ ಮಾಡಲಾಗುತ್ತಿದ್ದು, ಅದರಲ್ಲಿ ‘ಯಾವುದೇ ವ್ಯಕ್ತಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರಿಗೂ ತಂಬಾಕು ಉತ್ಪನ್ನಗಳನ್ನು ಮಾರುವಂತಿಲ್ಲ ಮತ್ತು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಉತ್ಪನ್ನಗಳನ್ನು ಖರೀದಿಸುವಂತಿಲ್ಲ. ಶಿಕ್ಷಣ ಸಂಸ್ಥೆಗಳಿಂದ 100 ಮೀಟರ್‌ ಸುತ್ತಳತೆಯಲ್ಲಿ ಈ ಉತ್ಪನ್ನಗಳನ್ನು ಮಾರುವಂತಿಲ್ಲ. ತಂಬಾಕು ಉತ್ಪನ್ನಗಳನ್ನು ಸರಿಯಾಗಿ ಪ್ಯಾಕ್‌ ಮಾಡಲಾದ ಮೂಲ ಪೊಟ್ಟಣಗಳಲ್ಲೇ ಮಾರಾಟ ಮಾಡಬೇಕು’ ಎಂದು ಹೇಳಲಾಗಿದೆ. ತಂಬಾಕು ಉತ್ಪನ್ನಗಳನ್ನು ಮೂಲ ಪೊಟ್ಟಣಗಳಲ್ಲೇ ಮಾರಾಟ ಮಾಡಬೇಕು ಅಂದರೆ ಸಿಗರೆಟ್‌ಗಳನ್ನು ಅಂಗಡಿಗಳಲ್ಲಿ ಬಿಡಿಬಿಡಿಯಾಗಿ ಮಾರಾಟ ಮಾಡುವಂತಿಲ್ಲ.

ಕಾನೂನು ಉಲ್ಲಂಘಿಸಿದರೆ 2 ವರ್ಷ ಜೈಲು

ತಂಬಾಕು ಉತ್ಪನ್ನಗಳನ್ನು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮಾರಾಟ ಮಾಡಿದರೆ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಖರೀದಿಸಿದರೆ ಮತ್ತು ಯಾವುದೇ ರೀತಿಯಲ್ಲಿ ತಂಬಾಕು ಕಾಯ್ದೆಯ ಸೆಕ್ಷನ್‌ 7ನ್ನು ಉಲ್ಲಂಘಿಸಿದರೆ ಮೊದಲ ಬಾರಿ 2 ವರ್ಷ ಜೈಲುಶಿಕ್ಷೆ ಹಾಗೂ 1 ಲಕ್ಷ ರು.ವರೆಗೆ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಉಲ್ಲಂಘಿಸಿದರೆ 5 ವರ್ಷ ಜೈಲುಶಿಕ್ಷೆ ಹಾಗೂ 5 ಲಕ್ಷ ರು.ವರೆಗೆ ದಂಡ ವಿಧಿಸಲಾಗುತ್ತದೆ.

ಜೊತೆಗೆ, ತಿದ್ದುಪಡಿ ಮಸೂದೆಯಲ್ಲಿ ಅಕ್ರಮ ಸಿಗರೆಟ್‌ ಮತ್ತು ತಂಬಾಕು ಉತ್ಪನ್ನಗಳನ್ನು ತಯಾರಿಸಿದರೆ 2 ವರ್ಷ ಜೈಲು ಹಾಗೂ 1 ಲಕ್ಷ ರು. ದಂಡ ವಿಧಿಸುವ ಪ್ರಸ್ತಾಪವಿದೆ. ಅಕ್ರಮ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದರೆ ಮೊದಲ ಬಾರಿ 1 ವರ್ಷ ಜೈಲುಶಿಕ್ಷೆ ಹಾಗೂ 50000 ರು. ದಂಡ, ಎರಡನೇ ಬಾರಿ ಉಲ್ಲಂಘಿಸಿದರೆ 2 ವರ್ಷ ಜೈಲುಶಿಕ್ಷೆ ಮತ್ತು 1 ಲಕ್ಷ ರು. ದಂಡ ವಿಧಿಸಲು ಅವಕಾಶವಿದೆ.

ನಿಷೇಧವಿರುವೆಡೆ ಧೂಮಪಾನಕ್ಕೆ 2000 ದಂಡ

ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಧೂಮಪಾನ ನಿಷೇಧವಿರುವಲ್ಲಿ ಧೂಮಪಾನ ಮಾಡಿದರೆ ಈಗ ವಿಧಿಸುತ್ತಿರುವ 200 ರು. ದಂಡವನ್ನು 2000 ರು.ಗೆ ಏರಿಕೆ ಮಾಡುವುದಕ್ಕೂ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಜೊತೆಗೆ, ಯಾವುದೇ ವ್ಯಕ್ತಿ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಮಾಧ್ಯಮದಲ್ಲಿ ತಂಬಾಕು ಉತ್ಪನ್ನಗಳ ಪರವಾದ ಜಾಹೀರಾತಿನಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದೂ ತಿದ್ದುಪಡಿಯಲ್ಲಿ ಕಟ್ಟಪ್ಪಣೆ ಮಾಡಲಾಗಿದೆ.