Covid Cases ಮಹಾರಾಷ್ಟ್ರಕ್ಕೆ ಕೊರೋನಾ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ, ಮತ್ತೆ ಆತಂಕ!
- ಚೀನಾ, ದ.ಕೊರಿಯಾದಲ್ಲಿ ದಿಢೀರ್ ಕೊರೋನಾ ಹೆಚ್ಚಳ
- ಮಹಾರಾಷ್ಟ್ರದಲ್ಲಿ ಕೊರೋನಾ ನಿಗಾ ವಹಿಸುವಂತೆ ಸೂಚನೆ
- ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದ ಕೇಂದ್ರ
ನವದೆಹಲಿ(ಮಾ.19): ಕೊರೋನಾ ವೈರಸ್‌ನಿಂದ ಸದ್ಯಕ್ಕೆ ಮುಕ್ತಿ ಸಿಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಓಮಿಕ್ರಾನ್, ಕೊರೋನಾ ವೈರಸ್ ಹೆಚ್ಚಳದ ಆತಂಕದಿಂದ ಹೊರಬಂದಿರುವ ಭಾರತಕ್ಕೆ ಇದೀಗ ಚೀನಾ ಹಾಗೂ ದಕ್ಷಿಣ ಕೊರಿಯಾದಲ್ಲಿನ ಕೊರೋನಾ ಹೆಚ್ಚಳ ಮತ್ತೆ ಆತಂಕ ತಂದಿದೆ. ಈಗಾಗಲೇ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಕೊರೋನಾ ಎಚ್ಚರಿಕೆ ನೀಡಿದೆ. ಇದೀಗ ಮಹಾರಾಷ್ಟ್ರ ಸರ್ಕಾರಕ್ಕೆ ಕೊರೋನಾ ಕುರಿತು ಅತೀವ ನಿಗಾ ವಹಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಚೀನಾ, ದಕ್ಷಿಣ ಕೊರಿಯಾ ಹಾಗೂ ಯೂರೋಪಿಯನ್ ರಾಷ್ಟ್ರಗಳಲ್ಲಿ ಕೊರೋನಾ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಸೂಚನೆ ನೀಡುವ ಮೊದಲೇ ಮಹಾರಾಷ್ಟ್ರ ಅಲರ್ಟ್ ಆಗಿದೆ. ಇದೀಗ ಮಹಾರಾಷ್ಟ್ರ ಸರ್ಕಾರಕ್ಕೆ ಕೇಂದ್ರದಿಂದ ಪತ್ರ ಬಂದಿದೆ. ಕೊರೋನಾ ಪರೀಕ್ಷೆ ಹೆಚ್ಚಿಸುವಂತೆ ಸೂಚಿಸಲಾಗಿದೆ. ಕೊರೋನಾ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಎಲ್ಲಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೊಪೆ ಹೇಳಿದ್ದಾರೆ.
ಚೀನಾ, ದಕ್ಷಿಣ ಕೊರಿಯಾದಲ್ಲಿ ಮತ್ತೆ ಕೊರೋನಾ ಅಬ್ಬರ: ಭಾರತದಲ್ಲಿ ಕೇವಲ 2503 ಕೇಸು!
ಮಹಾರಾಷ್ಟ್ರ ಸರ್ಕಾರ ಆರೋಗ್ಯ ಸಚಿವಾಲಯದ ದಾಖಲೆಗಳ ಪ್ರಕಾರ ಕಳೆದ 24 ಗಂಟೆಯಲ್ಲಿ 394 ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿನ ಸಕ್ರೀನ ಕೊರೋನಾ ಪ್ರಕರಣಗಳ ಸಂಖ್ಯೆ 1,680. ಇನ್ನು ಮಹಾರಾಷ್ಟ್ರ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 78,72,203. ಇದೇ ರೀತಿ ಕೊರೋನಾಗೆ ಬಲಿಯಾದವರ ಒಟ್ಟು ಸಂಖ್ಯೆ1,43,765.
ಕೊರಿಯಾದಲ್ಲಿ 4 ಲಕ್ಷ ಕೇಸು:
ದಕ್ಷಿಣ ಕೊರಿಯಾದಲ್ಲಿ ಗುರುವಾರ ಮಧ್ಯರಾತ್ರಿ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 4.07 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಬುಧವಾರ ಒಂದೇ ದಿನ ಸಾರ್ವಕಾಲಿಕ ಗರಿಷ್ಠ 6 ಲಕ್ಷ ಪ್ರಕರಣಗಳು ದಾಖಲಾಗಿದ್ದವು. ಇದನ್ನು ಹೋಲಿಸಿದರೆ ಸೋಂಕಿನ ಪ್ರಮಾಣ ಕಡಿಮೆಯಾದರೂ, ಇದು ಒಂದೇ ದಿನ ದಾಖಲಾದ 2 ನೇ ಗರಿಷ್ಠ ಪ್ರಕರಣ ಇದಾಗಿದೆ.
22 ತಿಂಗಳ ಬಳಿಕ ಸೋಂಕಿತರ ಸಂಖ್ಯೆ 100ರ ಆಸುಪಾಸಿಗೆ..!
ರಾಜಧಾನಿ ಸಿಯೋಲ್‌ನಲ್ಲಿ ಒಮಿಕ್ರೋನ್ ಅಂಕೆಯಿಲ್ಲದೇ ಹರಡುತ್ತಿದ್ದು ಗುರುವಾರ 81,997 ಜನರಿಗೆ ಸೋಂಕು ಪತ್ತೆಯಾಗಿದೆ. ಇದೇ ವೇಳೆ 301 ಸೋಂಕಿತರು ಸಾವಿಗೀಡಾಗಿದ್ದಾರೆ. 149 ಜನರ ಸ್ಥಿತಿ ಗಂಭೀರವಾಗಿದೆ. ಆದರೆ ಕೋವಿಡ್ ಮರಣ ದರ ಕೇವಲ ಶೇ. 0.14ರಷ್ಟಿದೆ. ಹೊಸ ಕೊರೋನಾ ಪ್ರಕರಣಕ್ಕೆ ಚೀನಾದಲ್ಲಿ ಓರ್ವನ ಬಲಿಯಾಗಿದೆ. ಇದು ಆತಂಕ ಮತ್ತಷ್ಟು ಹೆಚ್ಚಿಸಿದೆ.
ಚೀನಾದಲ್ಲೂ ಕೋವಿಡ್ ಅಬ್ಬರ:
ಚೀನಾದಲ್ಲೂ ಮತ್ತೊಮ್ಮೆ ಕೋವಿಡ್ ಮಹಾಸ್ಫೋಟವಾಗುವ ಸಾಧ್ಯತೆಗಳಿದ್ದು, 2020ರಲ್ಲಿ ದಾಖಲಾದ ಪ್ರಕರಣಗಳಿಗಿಂತ ಎರಡು ಪಟ್ಟು ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಗುರುವಾರ ಚೀನಾದಲ್ಲಿ ಸೋಂಕು ಲಕ್ಷಣವುಳ್ಳ 2,388 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಸೋಂಕು ಒಂದೇ ದಿನದಲ್ಲಿ ದ್ವಿಗುಣವಾಗಿದೆ. ಬುಧವಾರ 1226 ಕೇಸುಗಳು ವರದಿಯಾಗಿದ್ದವು.
ಹಾಂಕಾಂಗ್ ಸೇರಿದಂತೆ ಹಲವು ರಾಷ್ಟ್ರದಲ್ಲಿ ಕೊರೋನಾ ಹೆಚ್ಚಳವಾಗಿದೆ. ಕೊರೋನಾದಿಂದ ಮುಕ್ತಿ ಪಡೆದಿದ್ದ ನ್ಯೂಜಿಲೆಂಡ್‌ನಲ್ಲೂ ಕೋವಿಡ್ ಪತ್ತೆಯಾಗಿದೆ. ಸಮೋವಾ ದ್ವೀಪದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಲಾಕ್‌ಡೌನ್ ಘೋಷಿಸಲಾಗಿದೆ.
ರಾಜ್ಯದಲ್ಲಿ ನಿನ್ನೆ ಕೇವಲ 106 ಕೋವಿಡ್ ಕೇಸ್ ಪತ್ತೆ, 5 ಸಾವು
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 106ಕ್ಕೆ ಕುಸಿದಿದೆ. ಐವರು ಮೃತರಾಗಿದ್ದಾರೆ. 154 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2013ಕ್ಕೆ ಇಳಿದಿದೆ. 36,326 ಕೋವಿಡ್ ಪರೀಕ್ಷೆ ನಡೆದಿದ್ದು, ಶೇ.0.29ರ ಪಾಸಿಟಿವಿಟಿ ದರ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 84 ಹೊಸ ಪ್ರಕರಣ ಪತ್ತೆಯಾಗಿದೆ. ಉಳಿದಂತೆ ದಕ್ಷಿಣ ಕನ್ನಡ 6, ಚಿತ್ರದುರ್ಗ 3, ಮೈಸೂರು, ಧಾರವಾಡ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ 2, ಚಿಕ್ಕಬಳ್ಳಾಪುರ, ಕಲಬುರಗಿ, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಉಳಿದ 18 ಜಿಲ್ಲೆಗಳಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ. ಬೆಂಗಳೂರು ನಗರದಲ್ಲಿ ಇಬ್ಬರು, ಧಾರವಾಡ, ಬಳ್ಳಾರಿ ಮತ್ತು ವಿಜಯಪುರದಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 39.44 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 39.02 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ.