ಪಿಎಫ್‌ಐ ನಿಷೇಧಕ್ಕೆ ಮುಂದಿನ ವಾರವೇ ಕೇಂದ್ರದಿಂದ ಅಧಿಸೂಚನೆ ಪ್ರಕಟ ಸಾಧ್ಯತೆ ದೇಶವಿರೋಧಿ ಕೃತ್ಯ, ಉಗ್ರ ಕೃತ್ಯಕ್ಕೆ ಬೆಂಬಲ, ಹಿಂಸೆಗೆ ಪ್ರಚೋದನೆ ಹಿನ್ನೆಲೆ ನಿಷೇಧಿಸಿದರೆ ಕಾನೂನು ಹೋರಾಟ: ಪಿಎಫ್‌ಐ ನಾಯಕ ಅನೀಸ್‌

ನವದೆಹಲಿ: ಇತ್ತೀಚೆಗೆ ದೇಶದ ಹಲವು ರಾಜ್ಯಗಳಲ್ಲಿ ರಾಮ ನವಮಿ ವೇಳೆ ನಡೆದ ಹಿಂಸಾಚಾರದಲ್ಲಿ ವಿವಾದಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಕೈವಾಡದ ಶಂಕೆ ವ್ಯಕ್ತವಾಗಿರುವಾಗಲೇ, ದೇಶವ್ಯಾಪಿ ಸಂಘಟನೆಯನ್ನು ನಿಷೇಧ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಮುಂದಿನ ವಾರವೇ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಕೆಲವು ರಾಜ್ಯಗಳಲ್ಲಿ ಈಗಾಗಲೇ ಪಿಎಫ್‌ಐಗೆ ನಿಷೇಧ ಹೇರಲಾಗಿದೆಯಾದರೂ, ದೇಶವ್ಯಾಪಿ ನಿಷೇಧ ಜಾರಿಯಾದರೆ ಸಂಘಟನೆಯ ಚಟುವಟಿಕೆಗಳಿಗೆ ಹೊಡೆತ ಬೀಳಲಿದೆ.ಇತ್ತೀಚೆಗೆ ರಾಮನವಮಿ ವೇಳೆ ಗೋವಾ (Goa) , ಗುಜರಾತ್‌(Gujarat), ರಾಜಸ್ಥಾನ್‌(Rajastan), ಮಧ್ಯಪ್ರದೇಶ(Madhya Pradesh), ಜಾರ್ಖಂಡ್‌ (Jharkhand), ಪಶ್ಚಿಮ ಬಂಗಾಳದಲ್ಲಿ (West Bengal) ಹಿಂಸಾಚಾರ ನಡೆದಿತ್ತು. ಈ ವೇಳೆ ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಪಿಎಫ್‌ಐ ಕೈವಾಡವಿತ್ತು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿ.ಡಿ.ಶರ್ಮಾ ಆರೋಪಿಸಿದ್ದರು.

SDPI, PFI ಬ್ಯಾನ್‌ ಆಗ್ಬೇಕು, ಹಂತಕರಿಗೆ ಶಿಕ್ಷೆ ಆಗ್ಬೇಕು: ಸಿಡಿದೆದ್ದ ಹಿಂದೂಪರ ಸಂಘಟನೆಗಳು
‘ಇನ್ನು ಕಾಂಗ್ರೆಸ್‌ ಆಡಳಿತದ ರಾಜಸ್ಥಾನದ ಕರೌಲಿಯಲ್ಲಿ ನಡೆದ ಕೋಮು ಹಿಂಸಾಚಾರದಲ್ಲೂ ಪಿಎಫ್‌ಐ ಕೈವಾಡವಿದೆ. ಘಟನಾ ಸ್ಥಳಕ್ಕೆ ತೆರಳುವ ವೇಳೆ ತಮ್ಮ ಮೇಲೆ ಕಲ್ಲು ತೂರಿದ ಘಟನೆಯ ಹಿಂದೆಯೇ ಇದೇ ಸಂಘಟನೆ ಪಾತ್ರವಿದೆ’ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ (Tejaswi Surya)ಆರೋಪಿಸಿದ್ದರು.

ಈ ಆರೋಪಗಳ ಜೊತೆಗೆ ಹಿಂದಿನಿಂದಲೂ ಪಿಎಫ್‌ಐ ವಿರುದ್ಧ ದೇಶದ್ರೋಹ, ಉಗ್ರವಾದಕ್ಕೆ ಬೆಂಬಲ ನೀಡಿದ ಆರೋಪಗಳಿವೆ. ಸ್ವತಃ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೂಡಾ ಬೆಂಗಳೂರು ಸರಣಿ ಸ್ಫೋಟ, ಕೇರಳದಲ್ಲಿ ಸಂಘ ಪರಿವಾರದ ಕಾರ್ಯಕರ್ತನ ಕೈಕಡಿದ ಕೇಸ್‌, ಕೇರಳದ ಲವ್‌ ಜಿಹಾದ್‌ನಲ್ಲಿ ಪಿಎಫ್‌ಐ ಮತ್ತು ಅದರ ರಾಜಕೀಯ ಮುಖವಾಣಿ ಎಸ್‌ಡಿಪಿಐನ ಪಾತ್ರವಿದೆ ಎಂದು ಕೇಂದ್ರಕ್ಕೆ ವರದಿ ಸಲ್ಲಿಸಿತ್ತು. ಹೀಗಾಗಿ ಇದೀಗ ದೇಶವ್ಯಾಪಿ ಸಂಘಟನೆ ನಿಷೇಧಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅದರ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಮುಂದಿನ ವಾರ ಈ ಕುರಿತು ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

SDPI, PFI ನಿಷೇಧ ಪ್ರಸ್ತಾಪ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಕಾನೂನು ಹೋರಾಟ- ಪಿಎಫ್‌ಐ:

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಎಫ್‌ಐನ ಪ್ರಧಾನ ಕಾರ್ಯದರ್ಶಿ ಅನೀಸ್‌ ಅಹಮದ್‌ (Anees Ahmed), ಈ ಹಿಂದೆಯೂ ಇಂಥ ಮಾತು ಕೇಳಿಬಂದಿದ್ದವು. ಆದರೆ ನಿಷೇಧಕ್ಕೆ ಒಳಗಾಗುವಂಥ ಯಾವುದೇ ಕೆಲಸವನ್ನು ನಾವು ಮಾಡಿಲ್ಲ. ಒಂದು ವೇಳೆ ಸರ್ಕಾರ ಸಂಘಟನೆಯನ್ನು ನಿಷೇಧಿಸಿದರೆ ನಾವು ಕಾನೂನೂ ಹಾದಿ ಹಿಡಿಯಲಿದ್ದೇವೆ ಎಂದು ತಿಳಿಸಿದ್ದಾರೆ.

ಪಿಎಫ್‌ಐ ಹಾದಿ:

1993ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಸಂಘಟನೆ ಆರಂಭವಾಗಿತ್ತು. ಇದೊಂದು ಇಸ್ಲಾಮಿಕ್‌ ಸಂಘಟನೆಯಾಗಿದ್ದು, ನಿಷೇಧಿತ ಇಸ್ಲಾಮಿಕ್‌ ವಿದ್ಯಾರ್ಥಿ ಉಗ್ರ ಸಂಘಟನೆಯಾದ ಸಿಮಿ ಜೊತೆ ನಂಟು ಹೊಂದಿದೆ ಎಂದು ಗುಪ್ತಚರ ಸಂಸ್ಥೆಗಳು ಇದರ ಬಗ್ಗೆ ಪ್ರಾರಂಭಿಕ ದಾಖಲೆಗಳನ್ನು ಸಂಗ್ರಹಿಸಿದ್ದವು. 2006ರಲ್ಲಿ ಕರ್ನಾಟಕದ ಕೆಎಫ್‌ಡಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಸಂಘಟನೆಗಳನ್ನು ವಿಲೀನಗೊಳಿಸಿ ಪಿಎಫ್‌ಐ ಎಂಬ ಅಧಿಕೃತ ಹೆಸರಿನಲ್ಲಿ ಸಂಘಟನೆ ಸ್ಥಾಪನೆಗೊಂಡಿತ್ತು. 2017ರಲ್ಲಿ ಎನ್‌ಐಎ ಸಿದ್ಧಪಡಿಸಿದ ಪರಿಷ್ಕೃತ ವರದಿಯಲ್ಲಿ, ಹಲವು ಭಯೋತ್ಪಾದನಾ ಪ್ರಕರಣಗಳ ಜೊತೆ ಸಂಘಟನೆಗೆ ನಂಟು ಇರುವ ವಿಷಯ ಪ್ರಸ್ತಾಪಿಸಿತ್ತು.