ಜನರಿಗೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿತಪ್ಪಿಸುವ ಜಾಹೀರಾತುಗಳಿಗೆ ಅವುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳು ಹಾಗೂ ಇನ್‌ಫ್ಲುಯೆನ್ಸರ್‌ಗಳೂ ಸಮಾನವಾಗಿ ಹೊಣೆಗಾರರಾಗುತ್ತಾರೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. 

ನವದೆಹಲಿ (ಮೇ.08): ಜನರಿಗೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿತಪ್ಪಿಸುವ ಜಾಹೀರಾತುಗಳಿಗೆ ಅವುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳು ಹಾಗೂ ಇನ್‌ಫ್ಲುಯೆನ್ಸರ್‌ಗಳೂ ಸಮಾನವಾಗಿ ಹೊಣೆಗಾರರಾಗುತ್ತಾರೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಅಲ್ಲದೆ, ಜಾಹೀರಾತುಗಳನ್ನು ಪ್ರಸಾರ ಮಾಡುವವರು ಇನ್ನುಮುಂದೆ ಸ್ವಯಂ ಘೋಷಣೆ ಸಲ್ಲಿಸಬೇಕು. ಅದರಲ್ಲಿ ತಾವು ಜಾಹೀರಾತುಗಳ ನಿಯಮಕ್ಕೆ ಬದ್ಧರಾಗಿದ್ದು, ಈಗ ಪ್ರಸಾರ ಮಾಡುತ್ತಿರುವ ಜಾಹೀರಾತು ಕೂಡ ನಿಯಮಕ್ಕೆ ಅನುಗುಣವಾಗಿದೆ ಎಂದು ಖಾತ್ರಿ ನೀಡಬೇಕು ಎಂದು ಸೂಚನೆ ನೀಡಿದೆ. ಪತಂಜಲಿ ಆಯುರ್ವೇದ ಕಂಪನಿಯ ವಂಚಕ ಜಾಹೀರಾತುಗಳ ಕುರಿತಾದ ಪ್ರಕರಣದ ವಿಚಾರಣೆ ವೇಳೆ ಮಂಗಳವಾರ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ಈ ಸೂಚನೆ ನೀಡಿತು. ಅಲ್ಲದೆ ಪತಂಜಲಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಸಂಘವನ್ನೂ ತರಾಟೆ ತೆಗೆದುಕೊಂಡಿತು.

ಸೆಲೆಬ್ರಿಟಿಗಳಿಗೆ ನಿಯಮ: ದಾರಿತಪ್ಪಿಸುವ ಜಾಹೀರಾತುಗಳನ್ನು ತಡೆಯಲು ‘ಪ್ರಿವೆನ್ಷನ್‌ ಆಫ್‌ ಮಿಸ್‌ಲೀಡಿಂಗ್‌ ಅಡ್ವರ್ಟೈಸ್‌ಮೆಂಟ್‌ ಅಂಡ್‌ ಎಂಡೋರ್ಸ್‌ಮೆಂಟ್‌-2022’ ಎಂಬ ನಿಯಮವಿದೆ. ಅದರಲ್ಲಿರುವ 13ನೇ ನಿಯಮದ ಪ್ರಕಾರ ಜಾಹೀರಾತಿನಲ್ಲಿ ನಟಿಸುವವರಿಗೆ ಅಥವಾ ಕಾಣಿಸಿಕೊಳ್ಳುವವರಿಗೆ ತಾವು ಯಾವ ಉತ್ಪನ್ನ ಅಥವಾ ಸೇವೆಯನ್ನು ಜನರಿಗೆ ಬಳಸಲು ಹೇಳುತ್ತಿದ್ದೇವೆ ಎಂಬುದು ತಿಳಿದಿರಬೇಕಾಗುತ್ತದೆ. ವಿಶೇಷವಾಗಿ ಆರೋಗ್ಯ ಹಾಗೂ ಆಹಾರ ವಿಭಾಗದಲ್ಲಿ ಜನರಿಗೆ ತಾವು ಖರೀದಿಸುತ್ತಿರುವ ಉತ್ಪನ್ನದ ಬಗ್ಗೆ ಅಗತ್ಯ ಮಾಹಿತಿ ಇರಬೇಕಾಗುತ್ತದೆ. ಹೀಗಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳು ಹಾಗೂ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಕೂಡ ದಾರಿತಪ್ಪಿಸುವ ಜಾಹೀರಾತುಗಳಿಗೆ ಸಮಾನ ಹೊಣೆಗಾರರಾಗುತ್ತಾರೆ ಎಂದು ಸುಪ್ರೀಂಕೋರ್ಟ್‌ ಹೇಳಿತು.

ಶಾಸ್ತ್ರೋಕ್ತವಿಲ್ಲದ ಮದುವೆ ಮದುವೆಯೇ ಅಲ್ಲ: ಸುಪ್ರೀಂಕೋರ್ಟ್‌ ಬಣ್ಣನೆ

ಸ್ವಯಂ ಘೋಷಣಾ ಪತ್ರ: ಸಂಬಂಧಪಟ್ಟ ಸಚಿವಾಲಯಗಳು ವಂಚಕ ಜಾಹೀರಾತುಗಳ ವಿರುದ್ಧ ದೂರು ನೀಡಲು ಜನರಿಗೆ ಸರಿಯಾದ ವ್ಯವಸ್ಥೆ ರೂಪಿಸಬೇಕು. ಅಲ್ಲಿ ಬಂದ ದೂರುಗಳನ್ನು ಕಡ್ಡಾಯವಾಗಿ ಬಗೆಹರಿಸುವುದಕ್ಕೆ ವ್ಯವಸ್ಥೆ ಮಾಡಬೇಕು. ಅಲ್ಲಿಯವರೆಗೆ ಜಾಹೀರಾತುಗಳನ್ನು ಪ್ರಸಾರ ಮಾಡುವವರು ‘ಈ ಜಾಹೀರಾತು ನಿಯಮಕ್ಕೆ ಬದ್ಧವಾಗಿದೆ’ ಎಂಬ ಸ್ವಯಂ ಘೋಷಣೆ ಬರೆದುಕೊಡಬೇಕು. ಜಾಹೀರಾತಿನ ಪ್ರಸಾರಕ್ಕೆ ಅನುಮತಿ ನೀಡುವವರು ಈ ಘೋಷಣೆಯನ್ನು ಪರಿಶೀಲಿಸಿಯೇ ಅನುಮತಿ ನೀಡಬೇಕು. 1994ರ ಕೇಬಲ್‌ ಟೀವಿ ನೆಟ್ವರ್ಕ್‌ ರೂಲ್ಸ್‌, ಜಾಹೀರಾತು ಅಧಿನಿಯಮ ಇತ್ಯಾದಿಗಳಿಗೆ ಅನುಗುಣವಾಗಿ ಸ್ವಯಂ ಘೋಷಣೆ ಪಡೆದುಕೊಳ್ಳಬೇಕು. ಟೀವಿ ಚಾನಲ್‌ಗಳು ಈ ಘೋಷಣೆಯನ್ನು ಬ್ರಾಡ್‌ಕಾಸ್ಟ್‌ ಸೇವಾ ಪೋರ್ಟಲ್‌ನಲ್ಲಿ ಅಪ್ಲೋಡ್‌ ಮಾಡಬೇಕು. ನಾಲ್ಕು ವಾರದೊಳಗೆ ಮುದ್ರಣ ಮಾಧ್ಯಮಗಳಿಗಾಗಿ ವೆಬ್‌ಸೈಟ್‌ ರೂಪಿಸಬೇಕು ಎಂದೂ ಸುಪ್ರೀಂಕೋರ್ಟ್‌ ಆದೇಶ ನೀಡಿದೆ.