Asianet Suvarna News Asianet Suvarna News

ಗಣರಾಜ್ಯೋತ್ಸವಕ್ಕೆ 75ರ ಸಂಭ್ರಮ: ಮಹಿಳಾ ಯೋಧರ ಸೇನಾಪಡೆ ಪಥಸಂಚಲನ

ಈ ವರ್ಷ ಭಾರತದಲ್ಲಿ 75ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಭಾರತವನ್ನು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಘೋಷಿಸಿ 74 ವರ್ಷಗಳು ತುಂಬಿವೆ. ಅತಿದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿರುವ ಭಾರತ ಸಂವಿಧಾನವನ್ನು ಅಳವಡಿಸಿಕೊಂಡ ದಿನವನ್ನು ಗಣರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತದೆ. 75ನೇ ವರ್ಷದ ಆಚರಣೆಯನ್ನು ಮಹಿಳಾ ಕೇಂದ್ರಿತವಾಗಿ ರೂಪಿಸಲಾಗಿದ್ದು, ಈ ಬಾರಿಯ ಆಚರಣೆಯೂ ಹಲವು ವಿಶೇಷತೆಗಳಿಂದ ಕೂಡಿದೆ. 

Celebrating 75 years of Republic Day grg
Author
First Published Jan 26, 2024, 7:48 AM IST

ಈ ವರ್ಷ ಭಾರತದಲ್ಲಿ 75ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಭಾರತವನ್ನು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಘೋಷಿಸಿ 74 ವರ್ಷಗಳು ತುಂಬಿವೆ. ಅತಿದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿರುವ ಭಾರತ ಸಂವಿಧಾನವನ್ನು ಅಳವಡಿಸಿಕೊಂಡ ದಿನವನ್ನು ಗಣರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತದೆ. 75ನೇ ವರ್ಷದ ಆಚರಣೆಯನ್ನು ಮಹಿಳಾ ಕೇಂದ್ರಿತವಾಗಿ ರೂಪಿಸಲಾಗಿದ್ದು, ಈ ಬಾರಿಯ ಆಚರಣೆಯೂ ಹಲವು ವಿಶೇಷತೆಗಳಿಂದ ಕೂಡಿದೆ. ವರ್ಷದ ಮೊದಲ ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವದ ಕುರಿತಾದ ಒಂದಷ್ಟು ಮಾಹಿತಿ ಇಲ್ಲಿದೆ....

75ನೇ ಗಣರಾಜ್ಯೋತ್ಸವದ ಥೀಮ್‌

ಈ ಬಾರಿಯ ಗಣರಾಜ್ಯೋತ್ಸವಕ್ಕೆ ‘ವಿಕಸಿತ ಭಾರತ’ ಮತ್ತು ‘ಭಾರತ್‌ ಲೋಕ್‌ತಂತ್ರಕಿ ಮಾತೃಕಾ’ ಎಂಬ ಥೀಮ್‌ ಕೊಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ ವಿಕಸಿತ ಭಾರತ ಮತ್ತು ಭಾರತ ಪ್ರಜಾಪ್ರಭುತ್ವದ ತಾಯಿ ಎಂದು ಅವರು ಹೇಳಿದ್ದ ಮಾತುಗಳನ್ನು ಅಳವಡಿಸಿಕೊಳ್ಳಲಾಗಿದೆ. ಅಲ್ಲದೇ ಈ ಬಾರಿ ವಿವಿಧ ರಾಜ್ಯಗಳು ಮತ್ತು ಸಚಿವಾಲಯಗಳು ತಯಾರಿಸುವ ಸ್ತಬ್ದಚಿತ್ರಗಳು ಇದೇ ಥೀಮ್‌ ಒಳಗೊಂಡಿರುತ್ತವೆ.

ಇಂದು 75ನೇ ಗಣರಾಜ್ಯೋತ್ಸವ: ಮಿಲಿಟರಿ ಬ್ಯಾಂಡ್ ಮೊದಲು ಮೊಳಗಲಿದೆ ಶಂಖ, ನಾದಸ್ವರ

ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ ಈ ಬಾರಿಯ ಮುಖ್ಯ ಅತಿಥಿ:

75ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಮುಖ್ಯ ಅತಿಥಿಯಾಗಿದ್ದಾರೆ. 6ನೇ ಬಾರಿ ಫ್ರಾನ್ಸ್‌ ಅಧ್ಯಕ್ಷರು ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಭಾಗಿಯಾಗುತ್ತಿರುವುದು ವಿಶೇಷವಾಗಿದೆ. ಮ್ಯಾಕ್ರನ್‌ ಜ.25ಕ್ಕೆ ಭಾರತಕ್ಕೆ ಆಗಮಿಸಲಿದ್ದು, ಜೈಪುರ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಅಂಬರ್ ಕೋಟೆ, ಜಂತರ್ ಮಂತರ್ ಮತ್ತು ಹವಾ ಮಹಲ್‌ಗಳನ್ನು ಮ್ಯಾಕ್ರನ್‌ ವೀಕ್ಷಿಸಲಿದ್ದಾರೆ. ರಾತ್ರಿ ದೆಹಲಿಗೆ ಆಗಮಿಸಲಿರುವ ಅವರು ಗಣರಾಜ್ಯೋತ್ಸವ ಪರೇಡ್‌ ವೀಕ್ಷಿಸಲಿದ್ದಾರೆ.

25 ಸ್ತಬ್ಧಚಿತ್ರಗಳ ಪ್ರದರ್ಶನ:

ಈ ಬಾರಿಯ ಗಣರಾಜ್ಯೋತ್ಸವದಲ್ಲಿ 16 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ 9 ಸಚಿವಾಲಯಗಳ ಮತ್ತು ವಿವಿಧ ಸಂಸ್ಥೆಗಳ 25 ಸ್ತಬ್ಧಚಿತ್ರಗಳು ಈ ಬಾರಿ ಪ್ರದರ್ಶನಗೊಳ್ಳಲಿವೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಛತ್ತೀಸ್‌ಗಢ, ಗುಜರಾತ್, ಹರ್ಯಾಣ, ಜಾರ್ಖಂಡ್, ಲಡಾಖ್, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶಗಳ ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳಲಿವೆ. ಆದರೆ ಈ ಬಾರಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ ದೊರೆತಿಲ್ಲ.

ವಿವಿಧ ಕ್ಷೇತ್ರದ ಸಾಧಕರಿಗೆ ಆಹ್ವಾನ:

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮತ್ತು ಸರ್ಕಾರದ ಯೋಜನೆಗಳ ಫಲಾನುಭವಿಗಳು ಸೇರಿದಂತೆ ಸುಮಾರು 13 ಸಾವಿರ ವಿಶೇಷ ಅತಿಥಿಗಳನ್ನು 75ನೇ ಗಣರಾಜ್ಯೋತ್ಸವ ಪರೇಡ್‌ ವೀಕ್ಷಿಸಲು ಆಹ್ವಾನಿಸಲಾಗಿದೆ. ವಿವಿಧ ಸರ್ಕಾರಿ ಯೋಜನೆಗಳಲ್ಲಿ ಉತ್ತಮ ಸಾಧನೆ ಮಾಡಿದ ವ್ಯಕ್ತಿಗಳು, ಗ್ರಾಮಪಂಚಾಯತ್‌ ಅಧ್ಯಕ್ಷರು, ಸ್ವಚ್ಛ ಭಾರತ ಅಭಿಯಾನದ ಮಹಿಳಾ ಕಾರ್ಮಿಕರು, ಇಸ್ರೋದ ಮಹಿಳಾ ಬಾಹ್ಯಾಕಾಶ ವಿಜ್ಞಾನಿಗಳು, ಯೋಗ ಶಿಕ್ಷಕರು (ಆಯುಷ್ಮಾನ್ ಭಾರತ್), ಅಂತಾರಾಷ್ಟ್ರೀಯ ಕ್ರೀಡಾಕೂಟದ ವಿಜೇತರು, ಪ್ಯಾರಾ ಒಲಿಂಪಿಕ್ ಪದಕ ವಿಜೇತರು, ಅತ್ಯುತ್ತಮ ಸ್ವ-ಸಹಾಯ ಗುಂಪುಗಳು, ಉತ್ಪಾದಕ ಸಂಸ್ಥೆಗಳ ರೈತರು, ಪಿಎಮ್‌ ಮನ್ ಕಿ ಬಾತ್ ಕಾರ್ಯಕ್ರಮ, ಪ್ರಾಜೆಕ್ಟ್ ವೀರ್ ಗಾಥಾ 3.0 ರ ''ಸೂಪರ್-100'' ಮತ್ತು ರಾಷ್ಟ್ರೀಯ ಶಾಲಾ ಬ್ಯಾಂಡ್ ಸ್ಪರ್ಧೆಯ ವಿಜೇತರು ಭಾಗವಹಿಸಲಿದ್ದಾರೆ. 

ಈ ಬಾರಿಯ ವಿಶೇಷತೆಗಳು

ನಾರಿಶಕ್ತಿ:

ಈ ಬಾರಿಯ ಗಣರಾಜ್ಯೋತ್ಸವವನ್ನು ಮಹಿಳಾ ಕೇಂದ್ರಿತವಾಗಿ ‘ಲೋಕತಂತ್ರ ಕಿ ಮಾತೃಕಾ’ ಎಂಬ ಥೀಮ್‌ನಲ್ಲಿ ರೂಪಿಸಲಾಗಿದೆ. ಇದೇ ಮೊದಲ ಬಾರಿಗೆ 2 ಸಂಪೂರ್ಣ ಮಹಿಳಾ ಸೇನಾ ತುಕಡಿ ಪರೇಡ್‌ನಲ್ಲಿ ಭಾಗವಹಿಸಲಿವೆ. ವಾಯುಪಡೆಯ 5 ಮಹಿಳಾ ಲೆಫ್ಟಿನೆಂಟ್‌ಗಳ ಪೈಕಿ 4 ಮಂದಿ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ 100 ಮಂದಿ ಮಹಿಳೆಯರ ತಂಡ ವಿವಿಧ ಶಾಸ್ತ್ರೀಯ ಸಂಗೀತ ವಾದ್ಯಗಳನ್ನು ನುಡಿಸಲಿದ್ದಾರೆ.

ಸೇನಾ ದಂಪತಿ:

ಇದೇ ಮೊದಲ ಬಾರಿಗೆ ಸೈನಿಕ ದಂಪತಿ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಮೇಜರ್‌ ಜೆರ್ರಿ ಬ್ಲೇಝ್‌ ಮತ್ತು ಕ್ಯಾಪ್ಟನ್‌ ಸುಪ್ರೀತಾ ಅವರು ಈ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗಲಿದ್ದಾರೆ

1500 ಮಂದಿ ರೈತ ದಂಪತಿ

ಇದೇ ಮೊದಲ ಬಾರಿಗೆ ಜನ ಭಾಗೀದಾರಿ ಕಾರ್ಯಕ್ರಮದ ಅಡಿಯಲ್ಲಿ ದೇಶಾದ್ಯಂತ ಸರ್ಕಾರಿ ಯೋಜನೆಯ ಫಲಾನುಭವಿಗಳಾಗಿರುವ 1,500 ರೈತ ದಂಪತಿಗಳಿಗೆ ಆಹ್ವಾನ ನೀಡಲಾಗಿದೆ.

ಬ್ಯಾಂಡ್‌ ಸ್ಫರ್ಧೆ:

ಇದೇ ಮೊದಲ ಬಾರಿ ರಾಷ್ಟ್ರಮಟ್ಟದ ರಕ್ಷಣೆ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬ್ಯಾಂಡ್‌ ಸ್ಪರ್ಧೆ ಆಯೋಜಿಸಿದ್ದು, ಅದರ ವಿಜೇತರಿಗೆ ಗಣರಾಜ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಫ್ರಾನ್ಸ್‌ ವ್ಯಕ್ತಿ ಭಾಗಿ:

ಇದೇ ಮೊದಲ ಬಾರಿಗೆ ಫ್ರಾನ್ಸ್‌ನ ಬ್ಯಾಸ್ಟೈಲ್‌ ಪರೇಡ್‌ನಲ್ಲಿ ಭಾಗವಹಿಸಿದ್ದ ಸ್ಕ್ವಾಡ್ರನ್‌ ಲೀಡರ್‌ ಸುಮಿತಾ ಯಾದವ್‌ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ.

ನಾಣ್ಯ ಮತ್ತು ಅಂಚೆ ಚೀಟಿ:

2024ರಲ್ಲಿ 75ನೇ ಗಣರಾಜ್ಯೋತ್ಸವ ಆಚರಿಸುವ ಸ್ಮರಣಾರ್ಥ ರಕ್ಷಣಾ ಇಲಾಖೆಯಿಂದ ವಿಶೇಷ ಅಂಚೆಚೀಟಿ ಮತ್ತು ನಾಣ್ಯ ಬಿಡುಗಡೆ ಮಾಡಲಾಗುತ್ತದೆ.

ವಿಮಾನ ಪ್ರದರ್ಶನ

ವಾಯುಪಡೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಸಿ-295 ವಿಮಾನ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿದೆ. ಅದರ ಜೊತೆಗೆ ಸ್ವದೇಶಿ ನಿರ್ಮಿತ ಪಿನಾಕಾ, ಪ್ರಚಂಡ ಮತ್ತು ನಾಗ್‌ಗಳು ಸಹ ಪ್ರದರ್ಶನಗೊಳ್ಳಲಿವೆ.

ಅನಂತ ಸೂತ್ರ:

ಈ ಬಾರಿಯ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಗ್ಯಾಲರಿ ಹಿಂದೆ ದೇಶದ ವಿವಿಧ ಭಾಗಗಳಲ್ಲಿ ತಯಾರಿಸಲಾಗುವ 1900 ಪ್ರಕಾರದ ಸೀರೆಯನ್ನು ಪ್ರದರ್ಶಿಸಲಾಗುತ್ತದೆ. ಇದಕ್ಕೆ ಅನಂತ ಸೂತ್ರ ಎಂದು ಹೆಸರಿಡಲಾಗಿದ್ದು, ಭಾರತೀಯ ಸಂಸ್ಕೃತಿಯಲ್ಲಿ ವಸ್ತ್ರದಲ್ಲಿರುವ ಕಲಾಕುಸುರಿಯನ್ನು ಪ್ರದರ್ಶಿಸಲು ಮತ್ತು ಕಸೂತಿ ಕಲೆಗೆ ಉತ್ತೇಜನ ನೀಡುವ ಸಲುವಾಗಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಂದು ಸೀರೆಯ ಮೇಲೆ ಕ್ಯೂಆರ್‌ ಕೋಡ್‌ ಅಳವಡಿಸಲಾಗಿದ್ದು, ಸೀರೆಯ ಕಸೂತಿ ಕಲೆಯ ಕುರಿತು ಮತ್ತು ನೇಯ್ಗೆ ಮಾಡುವ ವಿಧಾನದ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ಪ್ರಮುಖವಾಗಿ ಮೈಸೂರು ರೇಷ್ಮೆ ಸೀರೆ, ಕಾಂಚೀಪುರಂ ರೇಷ್ಮೆ ಸೀರೆ, ಪಂಜಾಬಿನ ಫುಲ್ಕಾರಿ ಸೀರೆ, ಜಮ್ಮು ಕಾಶ್ಮೀರದ ಕಾಶಿದಾ ಸೀರೆ ಮುಂತಾದವುಗಳು ಇಲ್ಲಿ ಪ್ರದರ್ಶಿತಗೊಳ್ಳಲಿವೆ.

ದೇಶದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಹೀಗಿರುತ್ತದೆ:

ಆರಂಭ: ಗಣರಾಜ್ಯೋತ್ಸವದ ಕಾರ್ಯಕ್ರಮ ಜ.23ರ ಪರಾಕ್ರಮ ದಿನದಿಂದಲೇ ಆರಂಭವಾಗುತ್ತದೆ. 2022ರಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕೂ ಮೊದಲು ಜ.24ರಿಂದ ಕಾರ್ಯಕ್ರಮ ಆರಂಭವಾಗುತ್ತಿತ್ತು. ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಗಣರಾಜ್ಯೋತ್ಸವವನ್ನು ಜ.23ರಿಂದಲೇ ಆರಂಭಿಸಲು ತೀರ್ಮಾನಿಸಲಾಯಿತು.

ಗಣರಾಜ್ಯೋತ್ಸವ ಭಾಷಣ: ಗಣರಾಜ್ಯೋತ್ಸವ ಮುನ್ನಾದಿನ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಲಿದ್ದಾರೆ. ಈ ಭಾಷಣ ದೇಶದ ಸಾಧನೆಗಳು, ಸವಾಲುಗಳು ಮತ್ತು ಭವಿಷ್ಯದ ದೂರದೃಷ್ಟಿಯನ್ನು ಒಳಗೊಂಡಿರುತ್ತದೆ.
ಹುತಾತ್ಮರಿಗೆ ಗೌರವ: ಗಣರಾಜ್ಯೋತ್ಸವ ದಿನದ ಮುಂಜಾನೆ ಪ್ರಧಾನಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿರುವ ಅಮರ್ ಜವಾನ್‌ ಜ್ಯೋತಿಗೆ ಗೌರವ ಸಲ್ಲಿಸಲಿದ್ದಾರೆ. ಇಲ್ಲಿಂದ ಅಧಿಕೃತವಾಗಿ ಗಣರಾಜ್ಯೋತ್ಸವ ಪರೇಡ್‌ ಆರಂಭಗೊಳ್ಳುತ್ತದೆ.
ಧ್ವಜ ಅನಾವರಣ: ಕರ್ತವ್ಯಪಥದಲ್ಲಿ ರಾಷ್ಟ್ರಪತಿ ರಾಷ್ಟ್ರಧ್ವಜಾ ಅನಾವರಣ ಮಾಡಲಿದ್ದಾರೆ. ಈ ವೇಳೆ ರಾಷ್ಟ್ರಗೀತೆ ನುಡಿಸುವುದರ ಜೊತೆ 21 ಬಾರಿ ಗನ್‌ ಸಲ್ಯೂಟ್‌ ಸಲ್ಲಿಸಲಾಗುತ್ತದೆ.

ಸೇನಾಪಡೆಗಳ ಪಥಸಂಚಲನ: ಕರ್ತವ್ಯಪಥದಲ್ಲಿ ಭಾರತೀಯ ಸೇನಾಪಡೆಯ ಮೂರು ದಳಗಳು ಹಾಗೂ ಪ್ಯಾರಾಮಿಲಿಟರಿ ಪಡೆಗಳು ಪಥಸಂಚಲನೆ ನಡೆಸಲಿವೆ.

ಮೋಟರ್‌ ಸೈಕಲ್‌ ಸ್ಟಂಟ್‌: ಸೇನಾಪಡೆಗಳ ಪಥಸಂಚಲನದ ಬಳಿಕ ‘ಡೇರ್‌ಡೆವಿಲ್ಸ್‌’ ತಂಡ ಬೈಕ್‌ ಸಾಹಸವನ್ನು ನಡೆಸಲಿದೆ.

ಸ್ತಬ್ಧ ಚಿತ್ರಗಳ ಪ್ರದರ್ಶನ: 16 ರಾಜ್ಯಗಳು ಮತ್ತು ವಿವಿಧ ಸಚಿವಾಲಯಗಳು ಮತ್ತು ಸಂಸ್ಥೆಗಳು ತಯಾರಿಸಿರುವ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಲಿದೆ.

ಜಾನಪದ ನೃತ್ಯ: ವಿವಿಧ ರಾಜ್ಯಗಳ ಜಾನಪದ ಕಲಾತಂಡಗಳು ಜಾನಪದ ನೃತ್ಯವನ್ನು ಪ್ರದರ್ಶಿಸಲಿವೆ.

ಫ್ಲೈಪಾಸ್ಟ್‌: ಜಾನಪದ ನೃತ್ಯದ ಬಳಿಕ ಭಾರತೀಯ ವಾಯುಪಡೆಯ ವಿವಿಧ ವಿಮಾನಗಳಿಂದ ವೈಮಾನಿಕ ಪ್ರದರ್ಶನ ನಡೆಯಲಿದೆ.
ಪ್ರಶಸ್ತಿ ಪ್ರದಾನ: ಗಣರಾಜ್ಯೋತ್ಸವ ದಿನದ ಸಾಯಂಕಾಲ ರಾಷ್ಟ್ರಪತಿ ಪದ್ಮ ಪ್ರಶಸ್ತಿ ಹಾಗೂ ಶೌರ್ಯ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.
ಬೀಟಿಂಗ್‌ ರೀಟ್ರೀಟ್‌: ಜ.29ರಂದು ಬೀಟಿಂಗ್‌ ರೀಟ್ರೀಟ್‌ ಕಾರ್ಯಕ್ರಮ ನಡೆಯಲಿದ್ದು, ಗಣರಾಜ್ಯೋತ್ಸವ ವಿದ್ಯುಕ್ತವಾಗಿ ಅಂತ್ಯಗೊಳ್ಳಲಿದೆ.

ಗಣರಾಜ್ಯೋತ್ಸವ ಅಂದಿನಿಂದ ಇಂದಿನವರೆಗೆ

ಮೊದಲ ಗಣರಾಜ್ಯೋತ್ಸವ:

1950ರ ಜ.26ರಂದು ಮೊದಲ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್‌ ಧ್ವಜಾರೋಹಣ ನಡೆಸುವ ಮೂಲಕ ಗಣರಾಜ್ಯದ ಉದಯವನ್ನು ಘೋಷಿಸಿದರು. ದೆಹಲಿಯ ಮೇಜರ್‌ ಧ್ಯಾನ್‌ಚಂದ್‌ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ವಿಮಾನಗಳು ಮತ್ತು 3 ಸಾವಿರ ಮಂದಿ ಸೈನಿಕರು ಭಾಗಿಯಾಗಿದ್ದರು. ಇಂಡೋನೇಷ್ಯಾದ ಅಧ್ಯಕ್ಷ ಸುಕಾರ್ನೋ ಮುಖ್ಯ ಅತಿಥಿಯಾಗಿದ್ದರು.

ರಾಜಪಥದಲ್ಲಿ ಮೊದಲ ಗಣರಾಜ್ಯೋತ್ಸವ:

1955ರಲ್ಲಿ ಮೊದಲ ಬಾರಿಗೆ ರಾಜಪಥದಲ್ಲಿ ಗಣರಾಜ್ಯೋತ್ಸವನ್ನು ಆಚರಿಸಲಾಯಿತು. ಈ ವೇಳೆ ಪಾಕಿಸ್ತಾನದ ಗವರ್ನರ್‌ ಜನರಲ್‌ ಮಲಿಕ್‌ ಗುಲಾಮ್‌ ಮುಹಮ್ಮದ್‌ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು.
ಇಬ್ಬರು ಮುಖ್ಯ ಅತಿಥಿಗಳು:

1968 ಮತ್ತು 1974ರಲ್ಲಿ ಎರಡು ದೇಶಗಳಿಂದ ಮುಖ್ಯ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. 1968ರಲ್ಲಿ ಸೋವಿಯತ್‌ ಯೂನಿಯನ್‌ನ ಅಲೆಕ್ಸಿ ಕೋಸಿಜಿನ್‌ ಹಾಗೂ ಯುಗೋಸ್ಲಾವಿಯಾದ ಅಧ್ಯಕ್ಷ ಜೋಸಿಪ್‌ ಬ್ರೋಜ್‌ ಟಿಟೋ ಮತ್ತು 1974ರಲ್ಲಿ ಮತ್ತೊಮ್ಮೆ ಟಿಟೋ ಶ್ರೀಲಂಕಾ ಪ್ರಧಾನಿ ಸಿರಿಮಾವೋ ಬಂಢಾರ ನಾಯಿಕೆ ಜೊತೆ ಭಾಗಿಯಾಗಿದ್ದರು.

10 ಮಂದಿ ಮುಖ್ಯ ಅತಿಥಿಗಳು:

2018ರಲ್ಲಿ ಮೊದಲ ಬಾರಿ ಏಸಿಯಾನ್‌ ಒಕ್ಕೂಟ 10 ರಾಷ್ಟ್ರಗಳ ಮುಖ್ಯಸ್ಥರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು. ಮೊದಲ ಬಾರಿ ಇಷ್ಟೊಂದು ಪ್ರಮಾಣದಲ್ಲಿ ವಿದೇಶಿ ಗಣ್ಯರು ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದರು.

ಕರ್ತವ್ಯ ಪಥದಲ್ಲಿ ಮೊದಲ ಗಣರಾಜ್ಯೋತ್ಸವ:

ರಾಜಪಥದ ಹೆಸರನ್ನು ಕರ್ತವ್ಯಪಥ ಎಂದು ಬದಲಾಯಿಸಿದ ಬಳಿಕ 2023ರಲ್ಲಿ ಮೊದಲ ಬಾರಿ ಕರ್ತವ್ಯಪಥದಲ್ಲಿ ಗಣರಾಜ್ಯೋತ್ಸವ ಪರೇಡ್‌ ನಡೆಸಲಾಯಿತು. ಬ್ರಿಟಿಷ್ ವಸಾಹಾತುಶಾಹಿ ನೆನಪುಗಳನ್ನು ತೊಡೆಯುವುದಕ್ಕಾಗಿ ರಾಜಪಥದ ಹೆಸರನ್ನು 2022ರ ಸೆಪ್ಟೆಂಬರ್‌ನಲ್ಲಿ ಬದಲಿಸಲಾಗಿತ್ತು.

ಗಣರಾಜ್ಯೋತ್ಸವದ ಅತಿಥಿಗಳು:

ಏಷ್ಯಾ - 36
ಯುರೋಪ್‌ - 25
ಆಫ್ರಿಕಾ - 12
ದಕ್ಷಿಣ ಅಮೆರಿಕ - 5
ಉತ್ತರ ಅಮೆರಿಕ - 3
ಆಸ್ಟ್ರೇಲಿಯಾ - 1

ದಿಲ್ಲಿಯಲ್ಲಿ ಎಲ್ಲೆಡೆ ಪೊಲೀಸ್‌ ಕಣ್ಗಾವಲು:

75ನೇ ಗಣರಾಜ್ಯೋತ್ಸವಕ್ಕೆ ಭಾರಿ ಬಿಗಿಭದ್ರತೆ ಒದಗಿಸಲಾಗಿದೆ. ಒಟ್ಟು 77 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದ್ದು, 14 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ ದೆಹಲಿ ಪೊಲೀಸರಿಂದ 8 ಸಾವಿರ, ಸೇನಾಪಡೆ ಮತ್ತು ಅರೆಸೇನಾ ಪಡೆಗಳಿಂದ 6 ಸಾವಿರ ಮಂದಿಯನ್ನು ನೇಮಕ ಮಾಡಲಾಗಿದೆ. ದಿಲ್ಲಿಯನ್ನು 8 ವಿಭಾಗವಾಗಿ ವಿಂಗಡಿಸಿ ಪ್ರತಿ ವಿಭಾಗದ ಭದ್ರತಾ ನೇತೃತ್ವವನ್ನು ಡಿಜಿಪಿಗೆ ವಹಿಸಲಾಗಿದೆ. 200ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಕರ್ನಾಟಕದ ಪ್ರಾಂಜಲ್‌ಗೆ ಮರಣೋತ್ತರ ಶೌರ್ಯ ಪ್ರಶಸ್ತಿ: ಒಟ್ಟು 80 ಮಂದಿಗೆ ಶೌರ್ಯ ಪದಕ

ಇಂದು ನಡೆಯುವುದು ಧ್ವಜ ಅನಾವರಣ:

ದೇಶಕ್ಕೆ ಸಂವಿಧಾನವನ್ನು ಅಳವಡಿಸಿಕೊಂಡ ದಿನವನ್ನು ಸಂಭ್ರಮಿಸುವುದಕ್ಕಾಗಿ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜವನ್ನು ಅನಾವರಣ ಮಾಡಲಾಗುತ್ತದೆ. ರಾಷ್ಟ್ರಪತಿ ಈ ಕಾರ್ಯಕ್ರಮವನ್ನು ನೆರವೇರಿಸಲಿದ್ದು, ಈಗಾಗಲೇ ಧ್ವಜಸ್ಥಂಭದ ಮೇಲ್ಭಾಗದಲ್ಲಿ ಕಟ್ಟಲಾಗಿರುವ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. ಅದೇ ರೀತಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಧ್ವಜಾರೋಹಣ ನಡೆಸಲಾಗುತ್ತದೆ. ದೇಶದ ಪ್ರಧಾನಿ ಈ ಕಾರ್ಯಕ್ರಮವನ್ನು ನೆರವೇರಿಸಲಿದ್ದು, ಹಗ್ಗದಲ್ಲಿ ಕಟ್ಟಿರುವ ಧ್ವಜವನ್ನು ಧ್ವಜಸ್ಥಂಭದ ಮೇಲ್ಭಾಗಕ್ಕೆ ಎಳೆದು ಬಳಿಕ ಹಾರಿಸಲಾಗುತ್ತದೆ.

25 - ಪ್ರದರ್ಶನಗೊಳ್ಳಲಿರುವ ಸ್ತಬ್ಧಚಿತ್ರಗಳು
13000 - ಇಷ್ಟು ಮಂದಿ ವಿಶೇಷ ಆಹ್ವಾನಿತರು
1500 - ಇಷ್ಟು ಮಂದಿ ರೈತ ದಂಪತಿಗಳು ಭಾಗಿ
1900 - ಇಷ್ಟು ಸೀರೆಗಳಿಂದ ಗ್ಯಾಲರಿ ಅಲಂಕಾರ
14000 - ದೆಹಲಿಯಲ್ಲಿ ಭದ್ರತೆ ನೇಮಿಸಿರುವ ಸಿಬ್ಬಂದಿ

Follow Us:
Download App:
  • android
  • ios