ನವದೆಹಲಿ (ಜ. 23): ‘ನೀವು ನನಗೆ ರಕ್ತ ಕೊಡಿ... ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ...’ ಎಂದು ಅಬ್ಬರಿಸಿ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ದೇಶಪ್ರೇಮದ ಕಿಚ್ಚು ಜಾಗೃತಿಗೊಳಿಸಿದ್ದು ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌. ಇಂದು ಅವರ 125ನೇ ಜನ್ಮದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಪಶ್ಚಿಮ ಬಂಗಾಳದಲ್ಲಿ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದ್ದ ಈ ದಿನವನ್ನು ಇನ್ನುಮುಂದೆ ‘ಪರಾಕ್ರಮ ದಿನ’ ಎಂದು ದೇಶಾದ್ಯಂತ ಆಚರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಅಲ್ಲದೆ, ಹೌರಾ-ಕಲ್ಕಾ ಮೈಲ್‌ ರೈಲಿಗೆ ‘ನೇತಾಜಿ ಎಕ್ಸ್‌ಪ್ರೆಸ್‌’ ಎಂದೂ ಮರುನಾಮಕರಣ ಮಾಡಿದೆ.

ಇಂಗ್ಲೆಂಡ್‌ ನೌಕರಿ ಧಿಕ್ಕರಿಸಿ ದೇಶಸೇವೆಗೆ

1897ರ ಜನವರಿ 23ರಂದು ಒಡಿಶಾದ ಕಟಕ್‌ ನಗರದಲ್ಲಿ ಜಾನಕಿನಾಥ್‌ ಬೋಸ್‌ ಮತ್ತು ಪ್ರಭಾವತಿ ದೇವಿ ದಂಪತಿ ಪುತ್ರನಾಗಿ ಜನಿಸಿದ ನೇತಾಜಿ ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ ಹೊರಹೊಮ್ಮಿದ್ದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಟಕ್‌ ನಗರದಲ್ಲಿ ಮುಗಿಸಿ, 1919ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ ಪಡೆದು, ನಂತರ ಅದೇ ವರ್ಷ ಸೆಪ್ಟೆಂಬರ್‌ 15ರಂದು ಐಸಿಎಸ್‌ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಾಣ ಬೆಳೆಸಿದರು. ಅತಿ ಕಷ್ಟದ ಪರೀಕ್ಷೆಯಲ್ಲಿ 4ನೇ ಕ್ರಮಾಂಕದಲ್ಲಿ ತೇರ್ಗಡೆಯೂ ಆದರು. ಆದರೆ ವಿದೇಶಿ ಗುಲಾಮಗಿರಿ ಅಡಿಯಲ್ಲಿ ಕೆಲಸ ಮಾಡಲು ಒಪ್ಪದ ಬೋಸ್‌ ಐಸಿಎಸ್‌ ಪದವಿ ಧಿಕ್ಕರಿಸಿ 1921ರಲ್ಲಿ ಸ್ವದೇಶಕ್ಕೆ ಮರಳಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು.

1.5 ವರ್ಷ ಕೃಪಿ ಕಾಯ್ದೆ ತಡೆ ಹಿಡಿಯುವ ಪ್ರಸ್ತಾಪಕ್ಕೆ ರೈತರು ನಕಾರ; 11 ನೇ ಸುತ್ತಿನ ಸಭೆ ಪ್ರಮುಖಾಂಶ!

ಇಂಡಿಯನ್‌ ನ್ಯಾಷನಲ್‌ ಆರ್ಮಿ ಸ್ಥಾಪನೆ

ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲೇಬೇಕೆಂದು ಪಣ ತೊಟ್ಟಿದ್ದ ನೇತಾಜಿ ಅಂದಿನ ಬ್ರಿಟಿಷ್‌ ಸರ್ಕಾರಕ್ಕೆ ತನ್ನ ಪ್ರಖರ ನಿಲುವುಗಳಿಂದಲೇ ಬಿಸಿ ಮುಟ್ಟಿಸಿದ್ದರು. ‘ಆಜಾದ್‌ ಹಿಂದ್‌ ಪೌಜ್‌’ (ಇಂಡಿಯನ್‌ ನ್ಯಾಷನಲ… ಆರ್ಮಿ- ಐಎನ್‌ಎ) ಎಂಬ ಸೇನೆಯನ್ನು ಕಟ್ಟಿಕ್ರಾಂತಿಕಾರಿ ನಿಲುವಿನ ನಾಯಕರಾಗಿ ಹೊರಹೊಮ್ಮಿದ್ದರು. ಅಪ್ರತಿಮ ದೇಶಭಕ್ತರಾಗಿದ್ದ ಬೋಸ್‌ ವಿದೇಶದಲ್ಲೂ ಸ್ವಾತಂತ್ರ್ಯ ಹೋರಾಟವನ್ನು ಸಂಘಟಿಸಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶ-ವಿದೇಶದಲ್ಲಿ ಸುತ್ತಾಡಿ ಬ್ರಿಟಿಷರನ್ನು ಸಿಂಹಸ್ವಪ್ನವಾಗಿ ಕಾಡಿದ್ದರು.

ಗಾಂಧೀಜಿ ಅಹಿಂಸೆ ಅಂದರೆ ಬೋಸ್‌ ಯುದ್ಧ ಅನ್ನುತ್ತಿದ್ದರು!

ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿದ್ದ ಬೋಸ್‌ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ವಿಶಿಷ್ಟಪಾತ್ರವಹಿಸಿದ್ದರು. ಗಾಂಧೀಜಿ ಸ್ವಾತಂತ್ರ್ಯವನ್ನು ಶಾಂತಿಯುತವಾಗಿಯೇ ಪಡೆಯಬೇಕೆಂಬ ನಿಲುವು ಹೊಂದಿದ್ದರು. ಆದರೆ ಬೋಸ್‌ ಸ್ವಾತಂತ್ರ್ಯಕ್ಕೆ ಸಶಸ್ತ್ರ ಹೋರಾಟವೂ ಅಗತ್ಯ, ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲ ನೀತಿ ಹೊಂದಿರಬಾರದೆಂಬ ದಿಟ್ಟನಿಲುವು ಹೊಂದಿದ್ದರು. ಅವರ ಹೋರಾಟದಿಂದ ಸ್ವಾತಂತ್ರ್ಯ ಲಭಿಸದಿದ್ದರೂ ತಮ್ಮ ಸಿಡಿಲಬ್ಬರದ ಪ್ರಖರ ಮಾತುಗಳಿಂದ ಅಸಂಖ್ಯಾತರಿಗೆ ಸ್ಫೂರ್ತಿಯಾಗಿದ್ದರು.

ಕಾಂಗ್ರೆಸ್‌ ತ್ಯಜಿಸಿದ್ದೇಕೆ?

ಬೋಸ್‌ ಜ.18, 1938ರಿಂದ ಏ.29, 1939ರ ವರೆಗೆ ಕಾಂಗ್ರೆಸ್‌ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ ಮಹಾತ್ಮ ಗಾಂಧೀಜಿ ಹಾಗೂ ಕಾಂಗ್ರೆಸ್‌ ನಾಯಕರೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದ 1939ರಲ್ಲಿ ಕಾಂಗ್ರೆಸ್‌ ತ್ಯಜಿಸಿದರು. ಧೈರ‍್ಯ, ನಾಯಕತ್ವ ಗುಣ, ಉತ್ತಮ ವಾಗ್ಮಿಯಾಗಿದ್ದ ಬೋಸ್‌ರಿಂದ ಪ್ರೇರಣೆಗೊಡು ಭಾರತ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಯುವಕರು ಇಂಡಿಯನ್‌ ನ್ಯಾಷನಲ್‌ ಆರ್ಮಿ ಸೇರಿದ್ದರು.

ನೇತಾಜಿ ಜಯಂತಿ ; ಹರಿಪುರಕ್ಕೂ ಸುಭಾಷ್ ಚಂದ್ರಬೋಸ್‌ಗಿರುವ ನಂಟಿನ ಕತೆ ಹೇಳಿದ ಮೋದಿ!

ಬೋಸ್‌ ಸಾವು ಇಂದಿಗೂ ನಿಗೂಢವಾಗಿ ಉಳಿದಿರುವುದೇಕೆ?

ದೇಶ ಸ್ವಾತಂತ್ರ್ಯ ಗಳಿಸುವ ಕೊನೆ ಘಟ್ಟದಲ್ಲಿ ಅಂದರೆ 1945ರಲ್ಲಿ ನೇತಾಜಿ ವಿಮಾನ ದುರಂತದಲ್ಲಿ ಮಡಿದರು ಎಂದು ಅನೇಕರು ನಂಬಿದ್ದಾರೆ. ಆದರೆ, ಅವರು ಅಂದು ಸಾಯಲೇ ಇಲ್ಲ ಎಂಬುದು ಇನ್ನೊಂದು ವಾದ. ಬಹುತೇಕರು ಭಾವಿಸಿದಂತೆ ನೇತಾಜಿ ವಿಮಾನ ದುರಂತದಲ್ಲಿ ಮಡಿದರೋ ಅಥವಾ ಗುಮ್ನಾಮಿ ಬಾಬಾ ರೂಪ ಧರಿಸಿ 1980ರ ದಶಕದವರೆಗೂ ಬದುಕಿದ್ದರೋ ಎನ್ನುವ ಪ್ರಶ್ನೆಗೆ ಇಂದಿಗೂ ಸ್ಪಷ್ಟಉತ್ತರ ಸಿಕ್ಕಿಲ್ಲ. ನೇತಾಜಿ ಸಾವಿನ ನಿಗೂಢ ಭೇದಿಸುವುದಕ್ಕಾಗಿಯೇ ನೇಮಕಗೊಂಡಿದ್ದ ವಿಷ್ಣು ಸಾಹಿ ಸಮಿತಿ ಕೂಡ ಈ ವಿಚಾರದಲ್ಲಿ ತಾರ್ಕಿಕ ಅಂತ್ಯ ನೀಡುವಲ್ಲಿ ವಿಫಲಗೊಂಡಿದೆ.

ಪಶ್ಚಿಮ ಬಂಗಾಳದ ರಾಜಕೀಯ ಕುತೂಹಲ

ಬೋಸ್‌ ಅವರ 125ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ನಡೆಯಲಿರುವ ಪ್ರಥಮ ಪರಾಕ್ರಮ ದಿನದ ಕಾರ‍್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ನಡುವೆ ಜ.23ನ್ನು ಸಾರ್ವತ್ರಿಕ ರಜಾದಿನವೆಂದು ಘೋಷಿಸುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ತೃಣಮೂಲ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಸುಭಾಷ್‌ ಚಂದ್ರ ಬೋಸ್‌ ಅವರನ್ನು ರಾಜಕೀಯಕ್ಕೆ ಎಳೆಯುತ್ತಿವೆ. 2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಲಿರುವ ಹಿನ್ನೆಲೆಯಲ್ಲಿ ಈ ಎಲ್ಲ ರಾಜಕೀಯ ಬೆಳವಣಿಗೆಗಳು ಮಹತ್ವ ಪಡೆದಿವೆ.