'ತಾಲಿಬಾನ್, ಪಾಕ್‌ಗೆ ಭಾರತ ಸೇನೆ ಎಚ್ಚರಿಕೆ, ನಮ್ಮ ತಂಟೆಗೆ ಬಂದರೆ ತಕ್ಕ ಶಾಸ್ತಿ!'
* ಆಫ್ಘನ್ ನೆಲ ಬಳಸಿ ಉಗ್ರ ಕೃತ್ಯ ಎಸಗಿದರೆ ಹುಷಾರ್
* ತಾಲಿಬಾನ್, ಪಾಕ್‌ಗೆ ಭಾರತ ಸೇನೆ ಎಚ್ಚರಿಕೆ
* ನಮ್ಮ ತಂಟೆಗೆ ಬಂದರೆ ತಕ್ಕ ಶಾಸ್ತಿ: ಜ| ಬಿಪಿನ್ ರಾವತ್
ನವದೆಹಲಿ(ಆ.26): ತಾಲಿಬಾನ್ ನಿಯಂತ್ರಣಕ್ಕೆ ಒಳಪಟ್ಟಿರುವ ಅಫ್ಘಾನಿಸ್ತಾನದಿಂದ ನಡೆಯುವ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ಮತ್ತು ಭಾರತವನ್ನು ಗುರಿಯಾಗಿಸಿಕೊಂಡು ನಡೆಸುವ ಕೃತ್ಯಗಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಸಶಸ್ತ್ರ ಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್ ಹೇಳಿದ್ದಾರೆ. ಈ ಮೂಲಕ ಆಫ್ಘನ್ ನೆಲವನ್ನು ಬಳಸಿಕೊಂಡು ಭಾರತದಲ್ಲಿ ಉಗ್ರ ಚಟುವಟಿಕೆಗೆ ಸಂಚು ರೂಪಿಸುತ್ತಿರುವ ಪಾಕಿಸ್ತಾನಿ ಉಗ್ರರು ಹಾಗೂ ತಾಲಿಬಾನ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಅಬ್ಸರ್ವರ್ ರೀಸರ್ಚ್ ಫೌಂಡೇಶನ್ (ಒಆರ್‌ಎಫ್) ಆಯೋಜಿಸಿದ್ದ ಸಂವಾದ ಕಾರ್ಯಕ್ರಮದ ವೇಳೆ ಮಾತನಾಡಿದ ರಾವತ್ ಈ ಮಾತುಗಳನ್ನು ಹೇಳಿದರು. ‘ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಿಭಾಯಿಸಿದ ರೀತಿಯಲ್ಲಿಯೇ ತಾಲಿಬಾನ್ ಬೆದರಿಕೆಯನ್ನು ಕೂಡ ನಿಭಾಯಿಸಲಾಗುವುದು. ಇತರ ದೇಶಗಳು ಕೂಡ ಈ ಯತ್ನಕ್ಕೆ ಸಹಕರಿಸಬೇಕು’ ಎಂದು ಹೇಳಿದರು.
‘ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳಲಿದೆ ಎನ್ನುವುದನ್ನು ಭಾರತ ನಿರೀಕ್ಷಿಸಿತ್ತು. ಆದರೆ, ಇಷ್ಟುಬೇಗ ಆಗಿದ್ದು ನಮಗೇ ಅಚ್ಚರಿ ಮೂಸಿಡಿತು. ಕಳೆದ ಕೆಲವು ದಿನಗಳಿಂದ ನಡೆದ ಘಟನಾವಳಿಗಳು ಅಚ್ಚರಿ ಉಂಟುಮಾಡಿವೆ’ ಎಂದರು.
‘ಕಳೆದ 20 ವರ್ಷಗಳಲ್ಲಿ ತಾಲಿಬಾನ್ ಸಂಘಟನೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಅಫ್ಘಾನಿಸ್ತಾನದಿಂದ ನಡೆಯುವ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ನಾವು ಕಳವಳ ಹೊಂದಿದ್ದೇವೆ. ಹೀಗಾಗಿ ಜಾಗತಿಕ ಭಯೋತ್ಪಾದನೆಯ ವಿರುದ್ಧ ಹೋರಾಡಲು ಕ್ವಾಡ್ ರಾಷ್ಟ್ರಗಳ (ಅಮೆರಿಕ, ಜಪಾನ್, ಭಾರತ ಮತ್ತು ಆಸ್ಪ್ರೇಲಿಯಾ) ಮಧ್ಯೆ ಸಹಕಾರವನ್ನು ಹೆಚ್ಚಿಸುವ ಅಗತ್ಯವಿದೆ’ ಎಂದು ಹೇಳಿದರು.