Asianet Suvarna News Asianet Suvarna News

ರಾಜ್ಯಸಭೆ ಗದ್ದಲ, ಮಹಿಳೆಯರ ಮೇಲೆ ಹಲ್ಲೆ ಆರೋಪ: ಸತ್ಯ ಬಯಲು ಮಾಡಿದ ಸಿಸಿಟಿವಿ ದೃಶ್ಯ!

* ಸಂಸತ್ತಿನ ಮೇಲ್ಮನೆ ಗಲಾಟೆ: ತಾರಕಕ್ಕೇರಿದ ಆಡಳಿತ- ವಿಪಕ್ಷಗಳ ವಾಕ್ಸಮರ-

* ರಾಜ್ಯಸಭೆ ಗದ್ದಲ ಜಟಾಪಟಿ

* ಹೊರಗಿನವರನ್ನು ಕರೆಸಿ ಸದಸ್ಯೆಯರ ಮೇಲೆ ಹಲ್ಲೆ: ವಿಪಕ್ಷ

* ಸರ್ಕಾರದ ವಿರುದ್ಧ ಪ್ರತಿಭಟನೆ

CCTV footage shows Opposition MPs jostling with marshals in Rajya Sabha pod
Author
Bangalore, First Published Aug 13, 2021, 7:58 AM IST
  • Facebook
  • Twitter
  • Whatsapp

ನವದೆಹಲಿ(ಆ.13): ರಾಜ್ಯಸಭೆಯಲ್ಲಿ ಬುಧವಾರ ನಡೆದ ಕೋಲಾಹಲದ ಘಟನೆಯು ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ‘ಯಾವುದೇ ಪ್ರಚೋದನೆ ಇಲ್ಲದೆಯೇ ಸರ್ಕಾರ ಹೊರಗಿನ ವ್ಯಕ್ತಿಗಳನ್ನು ರಾಜ್ಯಸಭೆಗೆ ಕರೆಸಿ ವಿಪಕ್ಷದ ಮಹಿಳಾ ಸದಸ್ಯರ ಮೇಲೆ ಹಲ್ಲೆ ನಡೆಸಿದೆ’ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿವೆ. ಆದರೆ, ಇದನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಸರ್ಕಾರ, ‘ವಿಪಕ್ಷಗಳ ಸದಸ್ಯರು ಮಸೂದೆಗಳನ್ನು ಅಂಗೀಕರಿಸದಂತೆ ಬೆದರಿಕೆ ಹಾಕಿದ್ದರು. ಬಳಿಕ ಮಹಿಳಾ ಮಾರ್ಷಲ್‌ಗಳ ಮೇಲೆ ಹಲ್ಲೆ ನಡೆಸುವ ಮೂಲಕ ಸದನಕ್ಕೆ ಸದನದ ಘನತೆಗೆ ಕಪ್ಪುಚುಕ್ಕೆ ಇಟ್ಟಿದ್ದಾರೆ’ ಎಂದು ತಿರುಗೇಟು ನೀಡಿದೆ.

ಇದರ ಬೆನ್ನಲ್ಲೇ ಉಭಯ ಬಣಗಳು ಪ್ರತ್ಯೇಕವಾಗಿ ರಾಜ್ಯಸಭೆಯ ಸಭಾಪತಿಯಾಗಿರುವ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ಭೇಟಿ ಮಾಡಿ ಪರಸ್ಪರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿವೆ. ಇನ್ನೊಂದೆಡೆ ಸರ್ಕಾರದ ವರ್ತನೆ ಖಂಡಿಸಿ ವಿಪಕ್ಷಗಳ ನಾಯಕರು ಗುರುವಾರ ಪಾರ್ಲಿಮೆಂಟ್‌ ಹೌಸ್‌ನಿಂದ ವಿಜಯ್‌ ಚೌಕ್‌ವರೆಗೆ ಪ್ರತಿಭಟನಾ ನಡಿಗೆ ನಡೆಸಿದ್ದಾರೆ. ಅದಕ್ಕೆ ಪತಿಯಾಗಿ ಬಿಜೆಪಿ ಕೂಡ ತನ್ನ 7 ಸಚಿವರಿಂದ ಜಂಟಿ ಪತ್ರಿಕಾಗೋಷ್ಠಿ ನಡೆಸಿ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದೆ.

ವಿಪಕ್ಷಗಳ ಆಕ್ರೋಶ:

ಬುಧವಾರದ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ವಿಪಕ್ಷ ನಾಯಕರು ‘ಯಾವುದೇ ಪ್ರಚೋದನೆ ಇಲ್ಲದೆಯೇ ಸಂಸತ್ತಿನ ಭದ್ರತೆಯ ಭಾಗವಾಗಿರದ ಹೊರಗಿನ ವ್ಯಕ್ತಿಗಳನ್ನು ರಾಜ್ಯಸಭೆಗೆ ಕರೆಸಲಾಗಿತ್ತು. ಇದು ಮಹಿಳಾ ಸಂಸದರೂ ಸೇರಿದಂತೆ ವಿಪಕ್ಷ ಸದಸ್ಯರ ಮೇಲೆ ಹಲ್ಲೆಗೆಂದೇ ನಡೆಸಿದ ಕೆಲಸ. ಇದು ಸರ್ಕಾರದ ಸರ್ವಾಧಿಕಾರಿ ಧೋರಣೆ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಗೆ ಸಾಕ್ಷಿ’ ಎಂದಿದ್ದಾರೆ.

‘ಪೆಗಾಸಸ್‌ನಂಥ ಪ್ರಮುಖ ವಿಷಯಗಳ ಚರ್ಚೆಗೆ ವಿಪಕ್ಷಗಳು ಒಂದಾಗಿ ನಿರ್ಧರಿಸಿದ ಹಿನ್ನೆಲೆಯಲ್ಲಿ, ಸಂಸತ್ತಿನ ಮುಂಗಾರು ಅಧಿವೇಶನವನ್ನು ಉದ್ದೇಶಪೂರ್ವಕವಾಗಿಯೇ ದಿಕ್ಕು ತಪ್ಪಿಸಲು ಸರ್ಕಾರ ಈ ರೀತಿ ನಡೆದುಕೊಂಡಿದೆ. ರಾಜ್ಯಸಭೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಸದಸ್ಯರ ಮೇಲೆ ಹಲ್ಲೆ ನಡೆದಿದೆ. ಸಭಾಧ್ಯಕ್ಷರು ಮತ್ತು ಸ್ಪೀಕರ್‌ ತಮಗೆ ನೋವಾಗಿದೆ ಎನ್ನುತ್ತಾರೆ. ಆದರೆ ಸದನವನ್ನು ಸೂಕ್ತ ರೀತಿಯಲ್ಲಿ ನಡೆಸುವುದು ಅವರ ಹೊಣೆ’ ಎಂದು ವಿಪಕ್ಷ ನಾಯಕರು ಹೇಳಿದ್ದಾರೆ.

ಸರ್ಕಾರದ ತಿರುಗೇಟು:

ಬುಧವಾರದ ಘಟನೆಗೆ ಸರ್ಕಾರವೇ ಕಾರಣ ಎಂಬ ವಿಪಕ್ಷಗಳ ಟೀಕೆಗೆ ಸರ್ಕಾರದ 7 ಸಚಿವರು ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ತಿರುಗೇಟು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಅನುರಾಗ್‌ ಠಾಕೂರ್‌ ‘ಸದನದಲ್ಲಿ ಮೇಜು ಇರುವುದು ಕುಣಿಯುವುದಕ್ಕಲ್ಲ ಅಥವಾ ಪ್ರತಿಭಟಿಸುವುದಕ್ಕಲ್ಲ. ಕಲಾಪಕ್ಕೆ ಅಡ್ಡಿಪಡಿಸುವ ಮತ್ತು ಬೆದರಿಕೆ ರೀತಿಯ ಇಂಥ ವರ್ತನೆಗಳಿಗೆ ವಿಪಕ್ಷ ನಾಯಕರು ದೇಶದ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಇನ್ನು ಸಂಸದೀಯ ಖಾತೆ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ ‘ಮಸೂದೆ ಅಂಗೀಕರಿಸಿದರೆ ಇನ್ನಷ್ಟುಹಾನಿ ಮಾಡುವುದಾಗಿ ಹೇಳುವ ಮೂಲಕ ವಿಪಕ್ಷ ಸದಸ್ಯರು ಅಕ್ಷರಶಃ ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ. ಇದರಿಂದ ಅನಿವಾರ್ಯವಾಗಿ ಅಧಿವೇಶನವನ್ನು ಅವಧಿಪೂರ್ವ ಮುಕ್ತಾಯಗೊಳಿಸಬೇಕಾಗಿ ಬಂತು. ಇನ್ನು ವಿಪಕ್ಷ ನಾಯಕರು ಆರೋಪ ಮಾಡಿದಂತೆ ಮಹಿಳಾ ಸಂಸದರ ಮೇಲೆ ದಾಳಿ ನಡೆದಿಲ್ಲ. ಅದನ್ನು ಸಿಸಿಟೀವಿ ದೃಶ್ಯಗಳೇ ಖಚಿತಪಡಿಸಿವೆ’ ಎಂದಿದ್ದಾರೆ.

ಸಭಾನಾಯಕ ಪೀಯೂಷ್‌ ಗೋಯಲ್‌ ಮಾತನಾಡಿ ‘ವಿಪಕ್ಷ ಸದಸ್ಯರ ದಾಳಿಯಿಂದ ಮಹಿಳಾ ಮಾರ್ಷಲ್‌ ಗಾಯಗೊಂಡಿದ್ದಾರೆ. ಇದು ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ದಿನ’ ಎಂದಿದ್ದಾರೆ.

‘ಹೊರಗಿನವರನ್ನು ಕರೆತಂದು ಹಲ್ಲೆ ಮಾಡಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಇದು ಸುಳ್ಳು. ಸದನಕ್ಕೆ ಬಂದಿದ್ದು ಯಾವುದೇ ಪಕ್ಷಕ್ಕೆ ಸೇರದ ಮಾರ್ಷಲ್‌ಗಳು. 18 ಪುರುಷ ಮತ್ತು 12 ಮಹಿಳಾ ಮಾರ್ಷಲ್‌ಗಳನ್ನು ನಿಯೋಜಿಸಲಾಗಿತ್ತು. ಇವರಲ್ಲಿ ಯಾರೂ ಹೊರಗಿನವರಲ್ಲ. ಅವರ ಮೇಲೇ ವಿಪಕ್ಷ ಸಂಸದರು ಹಲ್ಲೆ ನಡೆಸಿದ್ದಾರೆ. ವಿಪಕ್ಷಗಳು ಆನೆ ನಡೆದಿದ್ದೇ ಹಾದಿ ಎಂದು ತಿಳಿದುಕೊಂಡಂತಿದೆ’ ಎಂದು ಕಿಡಿಕಾರಿದ್ದಾರೆ.

ಬಿಜೆಪಿ, ಕಾಂಗ್ರೆಸ್‌ ದೂರು:

ಈ ನಡುವೆ ಬಿಜೆಪಿ ಸಚಿವರ ನಿಯೋಗ ವೆಂಕಯ್ಯನಾಯ್ಡು ಅವರನ್ನು ಭೇಟಿ ಮಾಡಿ, ಸದನದೊಳಗೆ ಅಶಿಸ್ತು ತೋರಿಸಿದ ಸದಸ್ಯರ ವಿರುದ್ಧ ಕಠಿಣ ಕ್ರಮಕ್ಕೆ ಮನವಿ ಮಾಡಿದೆ. ಜೊತೆಗೆ ಇಡೀ ಘಟನೆ ಕುರಿತು ವಿಸ್ತೃತ ತನಿಖೆ ನಡೆಸಬೇಕು. ಇಂಥ ನಾಚಿಕೆಗೇಡಿನ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತನಿಖಾ ವರದಿಯನ್ನು ದೇಶದ ಜನರ ಮುಂದಿಡಬೇಕು ಎಂದಿದ್ದಾರೆ.

ಇನ್ನೊಂದೆಡೆ ಘಟನೆ ಕುರಿತು ವಿಪಕ್ಷಗಳ ಸದಸ್ಯರು ಸಭಾಧ್ಯಕ್ಷ ವೆಂಕಯ್ಯನಾಯ್ಡು ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ರಾಜ್ಯಸಭೆಯಲ್ಲಿ ನಡೆದಿದ್ದೇನು?

- ಬುಧವಾರ ಸಂಜೆ ವಿಮಾ ಖಾಸಗೀಕರಣ ಮಸೂದೆ ಅಂಗೀಕಾರ

- ಪ್ರತಿಪಕ್ಷಗಳ ತೀವ್ರ ಆಕ್ರೋಶ. ಬಾವಿಗಿಳಿದು ಧರಣಿ, ಗದ್ದಲ

- ವಿಪಕ್ಷಗಳ ಸದಸ್ಯರು ಹಾಗೂ ಮಾರ್ಷಲ್‌ಗಳ ನಡುವೆ ಘರ್ಷಣೆ

- ಹೊರಗಿನವರನ್ನು ಕರೆಸಿ ಸ್ತ್ರೀಯರ ಮೇಲೆ ಹಲ್ಲೆ: ವಿಪಕ್ಷ ಆರೋಪ

- ಕೇಂದ್ರದಿಂದ ನಿರಾಕರಣೆ, ವಿಪಕ್ಷದವರೇ ದಾಳಿ ನಡೆಸಿದ್ದಾರೆಂದು ಕಿಡಿ

- ಗುರುವಾರ ಸಿಸಿಟೀವಿ ದೃಶ್ಯಾವಳಿಗಳು ಬಿಡುಗಡೆ, ವಿಪಕ್ಷಗಳ ಬಣ್ಣ ಬಯಲು

- ಮಹಿಳಾ ಸಂಸದರೇ ಮಾರ್ಷಲ್‌ಗಳ ಮೇಲೆ ಹಲ್ಲೆ ನಡೆಸಿರುವುದು ಪತ್ತೆ

- ಕೆಲ ಪುರುಷ ಸದಸ್ಯರು ಮೇಜಿನ ಮೇಲೆ ಹತ್ತಿ ಅಗೌರವ ತಂದಿರುವುದು ಗೋಚರ

Follow Us:
Download App:
  • android
  • ios