ಪುಣೆಯ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ 37 ವರ್ಷದ ಮಿಲಿಂದ್ ಕುಲಕರ್ಣಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೆಲ ದಿನಗಳ ಹಿಂದಷ್ಟೇ ಹೈದರಾಬಾದ್‌ನ ಇಂಡೋರ್ ಸ್ಟೇಡಿಯಂನಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ 23 ವರ್ಷ ಯುವಕನೋರ್ವ ಹಠಾತ್ ಆಗಿ ಕುಸಿದು ಬಿದ್ದು, ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮೊದಲೇ ಈಗ ಪುಣೆಯಲ್ಲಿ ಅಂತಹದ್ದೇ ಒಂದು ಆಘಾತಕಾರಿ ಘಟನೆ ನಡೆದಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡ್ತಿದ್ದ ಯುವಕನೋರ್ವ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. 37 ವರ್ಷದ ಮಿಲಿಂದ್ ಕುಲಕರ್ಣಿ ಸಾವನ್ನಪ್ಪಿದ ಯುವಕ. ಈ ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.

ಮಿಲಿಂದ್ ಕುಲಕರ್ಣಿ ಜಿಮ್‌ನಲ್ಲಿ ಕುಸಿದು ಬಿದ್ದು ಕೆಲ ಸೆಕೆಂಡ್‌ನಲ್ಲಿ ಆತ ಕುಸಿದು ಬಿದ್ದಿದ್ದು, ಸಾವನ್ನಪ್ಪಿದ್ದಾರೆ. ಕೂಡಲೇ ಅಲ್ಲಿದ್ದವರು ಅವರ ಬಳಿ ಹೋಗಿ ಅವರನ್ನು ಮುಟ್ಟಿ ನೋಡಿ ಬಳಿಕ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ವೈದ್ಯರು ಅವರು ಬರುತ್ತಲೇ ಸಾವನ್ನಪ್ಪಿದ್ದರು ಎಂದು ಘೋಷಣೆ ಮಾಡಿದ್ದಾರೆ. ಪುಣೆಯ ಪಿಂಪ್ರಿ ಚಿಂಚವಾಡಿಯಲ್ಲಿರುವ ಜಿಮ್‌ನಲ್ಲಿ ನಿನ್ನೆ ಬೆಳಗ್ಗೆ ಈ ಘಟನೆ ನಡೆದಿದೆ.

ನಿನ್ನೆ ಬೆಳಗ್ಗೆ 7.15 ರ ಸುಮಾರಿಗೆ ನೈಟ್ರೋ ಜಿಮ್‌ನಲ್ಲಿ ಈ ಘಟನೆ ನಡೆದಿದೆ. ಜಿಮ್ ಸಿಬ್ಬಂದಿಯ ಪ್ರಕಾರ, ಕುಲಕರ್ಣಿ ವ್ಯಾಯಾಮ ಮಾಡುವಾಗ ತಲೆತಿರುಗುವಿಕೆ ಅನುಭವಿಸಿ ವಾಟರ್ ಕೂಲರ್ ಕಡೆಗೆ ನಡೆದುಕೊಂಡು ಹೋಗುವಾಗಲೇ ಕುಸಿದು ಬಿದ್ದಿದ್ದಾರೆ. ಈ ವೇಳೆ ಜಿಮ್‌ನಲ್ಲಿದ್ದ ಇತರರು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ನಂತರ ಪಿಂಪ್ರಿಯ ಯಶವಂತರಾವ್ ಚವಾಣ್ ಸ್ಮಾರಕ ಆಸ್ಪತ್ರೆಗೆ (YCMH) ಸ್ಥಳಾಂತರಿಸಿದ್ದಾರೆ. ಅಲ್ಲಿ ವೈದ್ಯರು ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಜಿಮ್ ಮ್ಯಾನೇಜರ್ ಸಂತೋಷ್ ಆಡಗ್ಲೆ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಕುಲಕರ್ಣಿ ನಿಯಮಿತವಾಗಿ ಜಿಮ್‌ಗೆ ಬರುತ್ತಿದ್ದು, ಅನುಭವಿಯಾಗಿದ್ದರು ಎಂದರು. ವೈಸಿಎಂಹೆಚ್‌ನ ಡೀನ್ ಡಾ. ರಾಜೇಂದ್ರ ವೇಬಲ್ ಅವರು ಶವಪರೀಕ್ಷೆ ನಡೆಸಲಾಗಿದೆ. ಪ್ರಾಥಮಿಕ ಸಂಶೋಧನೆಗಳು ಸಾವಿಗೆ ಕಾರಣ ಹೃದಯಾಘಾತ ಎಂದು ಸೂಚಿಸುತ್ತವೆ. ಮೃತರಿಗೆ ಗಮನಾರ್ಹವಾದ ಸುಮಾರು 60 ರಿಂದ 70 ಪ್ರತಿಶತದಷ್ಟು ಹೃದಯದ ತೊಂದರೆಗಳಿದ್ದವುಆದರೆ ತಪಾಸಣೆ ಮಾಡಿಸದೇ ರೋಗನಿರ್ಣಯ ಮಾಡದೆಯೇ ಹೋಗಿರಬಹುದು. ಇದು ಅವರ ಮೊದಲ ಹೃದಯ ಸಮಸ್ಯೆಯಂತೆ ಕಂಡುಬಂದರೂ, ಇದು ಮಾರಕವಾಗಿದೆ ಎಂದು ವೈದ್ಯರು ಹೇಳಿದರು.

ಶವವನ್ನು ಶವಪರೀಕ್ಷೆಗಾಗಿ ವೈಸಿಎಂಎಚ್‌ಗೆ ಕಳುಹಿಸಲಾಗಿದೆ. ಈ ಸಂಬಂಧ ಯಾವುದೇ ದೂರು ಬಂದಿಲ್ಲ ಮತ್ತು ಸಹಜ ಸಾವಿಗೆ ಕಾರಣವಾಗಿರುವುದರಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಚಿಂಚ್‌ವಾಡ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಅಂಕುಶ್ ಬಂಗಾರ್ ಹೇಳಿದ್ದಾರೆ.

65 ವರ್ಷಕ್ಕಿಂತ ಮೇಲ್ಪಟ್ಟ ಜನರು ಸಾಮಾನ್ಯವಾಗಿ ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ. ಆದಾಗ್ಯೂ, ಕಳೆದ ಕೆಲವು ವರ್ಷಗಳಿಂದ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತದ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಹಲವಾರು ಜಾಗತಿಕ ವೈದ್ಯಕೀಯ ವರದಿಗಳು 30 ಮತ್ತು 40 ರ ಹರೆಯದ ಜನರಲ್ಲಿ ಹೃದಯಾಘಾತದ ಸಂಖ್ಯೆಯಲ್ಲಿ ಏರಿಕೆಯಾಗಿರುವುದನ್ನು ಎತ್ತಿ ತೋರಿಸುತ್ತವೆ. ಜಿಮ್‌ನಲ್ಲಿ ವರ್ಕೌಟ್ ವೇಳೆ ಯುವಕರು ಸಾವನ್ನಪ್ಪಿರುವುದು ಇದೇ ಮೊದಲ ಪ್ರಕರಣ ಅಲ್ಲ, ಈ ಹಿಂದೆಯೂ ಹಲವು ಘಟನೆಗಳು ನಡೆದಿದ್ದು, ಇದು ಜಿಮ್‌ಗೆ ಹೋಗುವವರಲ್ಲಿ ಆತಂಕ ಸೃಷ್ಟಿಸಿದೆ.

Scroll to load tweet…