ಹರೀಶ್‌ ರಾವತ್‌ ಅವರಿಗೆ ಸಿಬಿಐನಿಂದ ಬಂಧನಕ್ಕೊಳಗಾಗುವ ಭೀತಿ ಎದುರಾಗಿದೆ. ಉತ್ತರಾಖಂಡ್‌ನಲ್ಲಿ 2016ರಲ್ಲಿ ತಮ್ಮದೇ ನೇತೃತ್ವದ ಸರ್ಕಾರ ಉಳಿಸಿಕೊಳ್ಳಲು ಶಾಸಕರ ಕುದುರೆ ವ್ಯಾಪಾರ ನಡೆಸಿದ್ದ ಆರೋಪ ಸಂಬಂಧ ರಾವತ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ನವದೆಹಲಿ (ಅ.24): ಅಕ್ರಮ ಹಣ ವರ್ಗಾವಣೆ ಆರೋಪದ ಮೇರೆಗೆ ಕರ್ನಾಟಕದ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಮತ್ತು ಕೇಂದ್ರದ ಮಾಜಿ ಸಚಿವರಾದ ಪ್ರಭಾವೀ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಅವರಿಗೆ ಕೇಂದ್ರ ತನಿಖಾ ತಂಡಗಳಾದ ಸಿಬಿಐ ಮತ್ತು ಇ.ಡಿ ತನಿಖೆ ಬಿಸಿ ಮುಟ್ಟಿದ ಬೆನ್ನಲ್ಲೇ, ಇದೀಗ ಮತ್ತೋರ್ವ ಕಾಂಗ್ರೆಸ್‌ ಮುಖಂಡ ಹರೀಶ್‌ ರಾವತ್‌ ಅವರಿಗೆ ಸಿಬಿಐನಿಂದ ಬಂಧನಕ್ಕೊಳಗಾಗುವ ಭೀತಿ ಎದುರಾಗಿದೆ.

ಉತ್ತರಾಖಂಡ್‌ನಲ್ಲಿ 2016ರಲ್ಲಿ ತಮ್ಮದೇ ನೇತೃತ್ವದ ಸರ್ಕಾರ ಉಳಿಸಿಕೊಳ್ಳಲು ಶಾಸಕರ ಕುದುರೆ ವ್ಯಾಪಾರ ನಡೆಸಿದ್ದ ಆರೋಪ ಸಂಬಂಧ ರಾವತ್‌ ವಿರುದ್ಧ ಸಿಬಿಐ ಬುಧವಾರ ಪ್ರಕರಣ ದಾಖಲಿಸಿಕೊಂಡಿದೆ. ಅಲ್ಲದೆ, ಇದೇ ಎಫ್‌ಐಆರ್‌ನಲ್ಲಿ ಸುದ್ದಿ ವಾಹಿನಿಯೊಂದರ ಸಂಪಾದಕ ಹಾಗೂ ಸಚಿವ ಹರಕ್‌ ಸಿಂಗ್‌ ಹೆಸರುಗಳನ್ನು ಸಿಬಿಐ ಉಲ್ಲೇಖಿಸಿದೆ.

Video: ಕೊನೆಗೂ ತಿಹಾರ್ ಜೈಲಿನಿಂದ ಹೊರಬಂದ ಡಿಕೆಶಿಯ ಫಸ್ಟ್ ರಿಯಾಕ್ಷನ್...

ಏನಿದು ಕೇಸ್‌?: 2016ರಲ್ಲಿ ಉತ್ತರಾಖಂಡ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು. ಈ ವೇಳೆ ಸರ್ಕಾರ ರಚನೆಗೆ ಮುಂದಾಗಿದ್ದ ಹರೀಶ್‌ ರಾವತ್‌, ಕಾಂಗ್ರೆಸ್‌ನಿಂದ ಬಂಡೆದ್ದು ಬಿಜೆಪಿ ಸೇರಿದ್ದ ಶಾಸಕರ ಬೆಂಬಲ ಪಡೆಯಲು ಅವರಿಗೆ ಹಣದ ಆಮಿಷ ನೀಡಿದ್ದರು. ರಾವತ್‌ ಸದನದಲ್ಲಿ ವಿಶ್ವಾಸಮತ ಯಾಚನೆಗೆ ಅಣಿಯಾಗಿದ್ದ ವೇಳೆಯೇ, ಲಂಚದ ಆಮಿಷ ಒಡ್ಡಿದ್ದ ವಿಡಿಯೋಗಳು ಬಹಿರಂಗವಾಗಿ ಭಾರೀ ಗದ್ದಲ ಉಂಟಾಗಿತ್ತು. ಇದರ ಹೊರತಾಗಿಯೂ ರಾವತ್‌ ವಿಶ್ವಾಸಮತ ಗೆದ್ದು ಸರ್ಕಾರ ರಚಿಸಿದ್ದರು. ಆದರೆ ಪ್ರಕರಣ ಕುರಿತು ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು.

ಕೇಂದ್ರದ ಈ ಕ್ರಮದ ವಿರುದ್ಧ ರಾವತ್‌ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ, ರಾವತ್‌ ಕೋರಿಕೆಯನ್ನು ಇತ್ತೀಚೆಗೆ ತಿರಸ್ಕರಿಸಿದ್ದ ಹೈಕೋರ್ಟ್‌, ಸಿಬಿಐ ತನಿಖೆಗೆ ಸಮ್ಮತಿ ಸೂಚಿಸಿತ್ತು.