ಸಿಬಿಐ ಮೇಲೆ ಸಿಬಿಐ ದಾಳಿ | ನಾಲ್ವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು 

ನವದೆಹಲಿ(ಜ.15): ಭ್ರಷ್ಟ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಹೆಡೆಮುರಿ ಕಟ್ಟುವ ಕೇಂದ್ರೀಯ ತನಿಖಾ ದಳ (ಸಿಬಿಐ), ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿರುವ ತನ್ನ ಕಚೇರಿಯ ಮೇಲೆ ಗುರುವಾರ ಮುಂಜಾನೆ ದಾಳಿ ನಡೆಸಿದ್ದು, ನಾಲ್ವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.

ಬ್ಯಾಂಕ್‌ ಅಕ್ರಮ ನಡೆಸಿದ ಆರೋಪ ಎದುರಿಸುತ್ತಿರುವ ಕಂಪನಿಗಳ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದೆ. ಈ ತನಿಖೆಯಲ್ಲಿ ಅಕ್ರಮ ನಡೆಸಿದ ಕಂಪನಿಗಳ ಪರವಾಗಿ ಕೆಲಸ ಮಾಡಲು ಕೆಲ ಸಿಬಿಐ ಅಧಿಕಾರಿಗಳೇ ಭಾರೀ ಪ್ರಮಾಣದ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಟ್ರಾಫಿಕ್‌ ಜಾಂ: ಬೆಂಗ್ಳೂರು ಈಗ ಜಗತ್ತಲ್ಲೇ ನಂ.6..!

ಈ ಹಿನ್ನೆಲೆಯಲ್ಲಿ ಘಾಜಿಯಾಬಾದ್‌ನಲ್ಲಿನ ತನ್ನ ತರಬೇತಿ ಕೇಂದ್ರ ಸೇರಿದಂತೆ ದೇಶದ ವಿವಿಧ ನಗರಗಳ 14 ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳ ಹಿರಿಯ ತಂಡ ಮುಂಜಾನೆ ಏಕಾಏಕಿ ದಾಳಿ ನಡೆಸಿತು.

ಈ ದಾಳಿ ವೇಳೆ ನಗದು ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ ತನ್ನ ಕಚೇರಿ ಮತ್ತು ಅಧಿಕಾರಿಗಳ ಮೇಲೆ ದಾಳಿ ನಡೆಸಬೇಕಾದ ಮುಜುಗರದ ಪರಿಸ್ಥಿತಿ ಹಿನ್ನೆಲೆಯಲ್ಲಿ ದಾಳಿ ಕುರಿತು ಸಂಸ್ಥೆ ಹೆಚ್ಚಿನ ಮಾಹಿತಿ ನೀಡಿಲ್ಲ.