ಮಮತಾ ಕುಟುಂಬಕ್ಕೆ ಕಲ್ಲಿದ್ದಲು ಹಗರಣ ಕಂಟಕ| ಸಂಸದ ಅಭಿಷೇಕ್ ಬ್ಯಾನರ್ಜಿ ಪತ್ನಿ, ನಾದಿನಿಗೆ ಸಿಬಿಐ ನೋಟಿಸ್
ನವದೆಹಲಿ/ಕೋಲ್ಕತಾ(ಫೆ.22): ಪಶ್ಚಿಮ ಬಂಗಾಳದ ವಿವಿಧ ಕಲ್ಲಿದ್ದಲು ಗಣಿಗಳಲ್ಲಿ ನಡೆದಿದೆ ಎನ್ನಲಾದ ಕಲ್ಲಿದ್ದಲು ಕಳ್ಳತನ ಪ್ರಕರಣ ಸಂಬಂಧ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿ, ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ಮತ್ತು ನಾದಿನಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ.
ಅಭಿಷೇಕ್ ಅವರ ಪತ್ನಿ ರುಜಿರಾ ಬ್ಯಾನರ್ಜಿ ಮತ್ತು ನಾದಿನಿ ಮೇನಕಾ ಗಂಭೀರ್‌ಗೆ ಸಿಬಿಐ ಅಧಿಕಾರಿಗಳು ವಿಚಾರಣೆಗಾಗಿ ಹಾಜರಿರುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ. ರುಜಿರಾಗೆ ಭಾನುವಾರ ಮಧ್ಯಾಹ್ನ ಮತ್ತು ಮೇನಕಾಗೆ ಸೋಮವಾರ ವಿಚಾರಣೆಗೆ ಸಜ್ಜಾಗಿರುವಂತೆ ಸಿಬಿಐ ನೋಟಿಸ್‌ನಲ್ಲಿ ಸೂಚಿಸಿದೆ. ಆದರೆ ರುಜಿರಾ ವಿಚಾರಣೆ ಸಾಧ್ಯವಾಗಿಲ್ಲ ಚುನಾವಣೆ ಹೊತ್ತಿನಲ್ಲೇ ನಡೆದಿರುವ ಈ ಬೆಳವಣಿಗೆ ಉಭಯ ಪಕ್ಷಗಳ ನಡುವೆ ಮತ್ತಷ್ಟುವಾಕ್ಸಮರಕ್ಕೆ ಕಾರಣವಾಗಿದೆ.
ನೋಟಿಸ್ ಬಗ್ಗೆ ಕೆಂಡಾಮಂಡಲವಾಗಿರುವ ಅಭಿಷೇಕ್ ಬ್ಯಾನರ್ಜಿ, ‘ಬಿಜೆಪಿ ಪಾಲಿಗೆ ಇದೀಗ ಕೇವಲ ಸಿಬಿಐ ಮಾತ್ರವೇ ಪಾಲುದಾರನಾಗಿ ಉಳಿದುಕೊಂಡಿದೆ. ಆದರೆ ಇಂಥ ಬೆದರಿಕೆಗಳಿಗೆ ಪಕ್ಷ ತಲೆಬಾಗಲಿದೆ ಎಂದು ಬಿಜೆಪಿ ಅಂದುಕೊಂಡಿದ್ದರೆ ಅದು ಅವರ ತಪ್ಪು ಅಭಿಪ್ರಾಯ’ ಎಂದು ಪ್ರತಿಕ್ರಿಯಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯ, ‘ಯಾರಾದರೂ ತಪ್ಪು ಮಾಡಿದ್ದರೆ ಕಾನೂನು ತನ್ನ ಕೆಲಸ ಮಾಡಲಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇ ಬೇಕು. ಈ ವಿಷಯವನ್ನು ಯಾರೂ ರಾಜಕೀಯಕರಣಗೊಳಿಸಬಾರದು’ ಎಂದಿದ್ದಾರೆ.
ಏನಿದು ಪ್ರಕರಣ?:
ರಾಜ್ಯದಲ್ಲಿ ನಡೆದಿದೆ ಎನ್ನಲಾದ ಕಲ್ಲಿದ್ದಲು ಕಳ್ಳತನ ಪ್ರಕರಣ ಸಂಬಂಧ ಕಳೆದ ವರ್ಷ ಸಿಬಿಐ ಕೇಸು ದಾಖಲಿಸಿತ್ತು. ಅದರಲ್ಲಿ ಮಾಂಝಿ ಲಾಲಾನನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿತ್ತು. ಮಾಂಝಿ ಖಾತೆಯಿಂದ ರುಜಿರಾ ಅವರ ಬ್ಯಾಂಕಾಕ್‌ನಲ್ಲಿರುವ ಬ್ಯಾಂಕ್ ಖಾತೆಗೆ ಭಾರೀ ಪ್ರಮಾಣದ ಹಣ ಜಮೆಯಾಗಿದೆ ಎಂದು ಇತ್ತೀಚೆಗೆಷ್ಟೇ ಬಿಜೆಪಿ ಸೇರಿದ್ದ ಮಾಜಿ ಟಿಎಂಸಿ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ರುಜಿರಾ ಅವರ ಪಾತ್ರದ ಬಗ್ಗೆ ಮಾಹಿತಿ ಪಡೆಯಲು ಸಿಬಿಐ ಈ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.
ಇಲಿಗೆ ಹೆದರಲ್ಲ
ಜೈಲಿಗೆ ಕಳಿಸುವ ಬೆದರಿಕೆಗೆ ನಾನು ಬಗ್ಗಲ್ಲ. ಬಂದೂಕು ಎದುರಿಸಿರುವ ನಾನು ಇಲಿಗಳಿಗೆ ಹೆದರಲ್ಲ. ಈ ಪಂದ್ಯದಲ್ಲಿ ನಾನು ಗೋಲ್‌ಕೀಪರ್. ಯಾರು ಗೆಲ್ಲುತ್ತಾರೋ ನೋಡೋಣ.
- ಮಮತಾ ಬ್ಯಾನರ್ಜಿ, ಟಿಎಂಸಿ ಮುಖ್ಯಸ್ಥ
