ಸಿಬಿಐನಿಂದ ಲುಕ್‌ಔಟ್ ನೋಟಿಸ್: ಇದೇನಿದು ಗಿಮಿಕ್ ಮೋದಿಜೀ ಎಂದ ಮನೀಶ್ ಸಿಸೋಡಿಯಾ
ಸಿಬಿಐ ತನ್ನ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದೆ, ತಾನು ದೆಹಲಿಯಲ್ಲೇ ಮುಕ್ತವಾಗಿ ತಿರುಗುತ್ತಿದ್ದೇನೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಜ್ರಿವಾಲ್ ಸಹ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಸಿಬಿಐ ತನ್ನ ವಿರುದ್ಧ ಲುಕ್‌ಔಟ್ ನೋಟಿಸ್ (ಎಲ್‌ಒಸಿ) (Look Out Notice) ಜಾರಿಗೊಳಿಸಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿಕೊಂಡಿದ್ದಾರೆ. ಅಲ್ಲದೆ, ತನ್ನ ನಿವಾಸದ ಮೇಲೆ ರೇಡ್ ಮಾಡಿದಾಗ ಅವರಿಗೆ ಏನೂ ಸಿಗದ ಕಾರಣ ಸಿಬಿಐ ಹೊಸ ನಾಟಕವಾಡುತ್ತಿದೆ ಎಂದೂ ಸಿಸೋಡಿಯಾ ಆರೋಪಿಸಿದ್ದಾರೆ. ಹಾಗೂ, ನಾನು ದೆಹಲಿಯಲ್ಲಿ "ಮುಕ್ತವಾಗಿ ತಿರುಗುತ್ತಿದ್ದೇನೆ". ಪ್ರಧಾನಿ ನರೇಂದ್ರ ಮೋದಿಗೆ ತನ್ನನ್ನು ಹುಡುಕಲು ಸಾಧ್ಯವಾಗುತ್ತಿಲ್ಲವೇ ಎಂದೂ ದೆಹಲಿ ಉಪ ಮುಖ್ಯಮಂತ್ರಿ ಪ್ರಶ್ನೆ ಮಾಡಿದ್ದಾರೆ.
ಇನ್ನು,ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ನಿರುದ್ಯೋಗ ಮತ್ತು ಹಣದುಬ್ಬರದ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡುವ ಬದಲು "ಇಡೀ ದೇಶದೊಂದಿಗೆ ಹೋರಾಡುತ್ತಿದ್ದಾರೆ" ಎಂದು ಟೀಕಿಸಿದ್ದಾರೆ. ದೆಹಲಿ ಸರ್ಕಾರದ ಅಬಕಾರಿ ನೀತಿ 2021-22ರ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಸೋಡಿಯಾ ಅವರ ನಿವಾಸ ಸೇರಿದಂತೆ 31 ಸ್ಥಳಗಳ ಮೇಲೆ ಕೇಂದ್ರೀಯ ತನಿಖಾ ದಳ ಶುಕ್ರವಾರ ದಾಳಿ ನಡೆಸಿತ್ತು. ಈ ಸಂಬಂಧ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಸಿಸೋಡಿಯಾ, "ನಿಮ್ಮ ಎಲ್ಲಾ ದಾಳಿಗಳು ವಿಫಲವಾಗಿವೆ, ಏನೂ ಪತ್ತೆಯಾಗಿಲ್ಲ. ಒಂದು ಪೈಸೆಯೂ ದುರುಪಯೋಗವಾಗಲಿಲ್ಲ. ಈಗ ಮನೀಶ್ ಸಿಸೋಡಿಯಾ ಪತ್ತೆಯಾಗಿಲ್ಲ ಎಂದು ಲುಕ್‌ಔಟ್ ನೋಟಿಸ್ ನೀಡಿದ್ದೀರಿ. ಇದೇನು ನಾಟಕ ಮೋದಿ ಜೀ? ನಾನು ದೆಹಲಿಯಲ್ಲಿ ಮುಕ್ತವಾಗಿ ಸುತ್ತಾಡುತ್ತಿದ್ದೇನೆ, ನಾನು ಎಲ್ಲಿಗೆ ಬರಬೇಕು ಎಂದು ಹೇಳಿ. ನೀವು ನನ್ನನ್ನು ಹುಡುಕಲು ಸಾಧ್ಯವಾಗುತ್ತಿಲ್ಲವೇ?" ಎಂದೂ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.
ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾರನ್ನು Money Shh ಎಂದ ಕೇಂದ್ರ ಸಚಿವ ಅನುರಾಗ್ ಠಾಕೂರ್
ಅಬಕಾರಿ ನೀತಿಯ ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಸಿಸೋಡಿಯಾ ಸೇರಿದಂತೆ 13 ಮಂದಿ ಆರೋಪಿಗಳಾಗಿದ್ದಾರೆ.ಇನ್ನು, ಕೇಂದ್ರೀಯ ಸಂಸ್ಥೆ ಎಫ್‌ಐಆರ್‌ನಲ್ಲಿ ಎರಡು ಕಂಪನಿಗಳನ್ನು ಹೆಸರಿಸಿದೆ. ಆದರೆ, ಮನೀಶ್ ಸಿಸೋಡಿಯಾ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ, ಹಾಗೂ ಅವರ ವಿದೇಶ ಪ್ರವಾಸವನ್ನು ನಿರ್ಬಂಧಿಸಿರುವ ಆರೋಪಗಳನ್ನು ಸಿಬಿಐ ಮೂಲಗಳು ನಿರಾಕರಿಸಿವೆ.
ಕೇಂದ್ರದ ಸಿಬಿಐ - ಇಡಿ ಆಟ ಎಂದ ಕೇಜ್ರಿವಾಲ್
ಇನ್ನು, ದೆಹಲಿ ಉಪ ಮುಖ್ಯಮಂತ್ರಿ ವಿರುದ್ಧ ಕೇಸ್ ದಾಖಲಿಸಿರುವುದಕ್ಕೆ ಟೀಕೆ ಮಾಡಿದ ಅರವಿಂದ್ ಕೇಜ್ರಿವಾಲ್ ಅವರು ಪ್ರತಿದಿನ ಬೆಳಗ್ಗೆ, ಕೇಂದ್ರವು "ಸಿಬಿಐ-ಇಡಿ ಆಟ" ಪ್ರಾರಂಭಿಸುತ್ತದೆ. “ಸಾಮಾನ್ಯರು ಹಣದುಬ್ಬರದಿಂದ ಹೋರಾಡುತ್ತಿರುವ ಮತ್ತು ಕೋಟ್ಯಂತರ ಯುವಕರು ನಿರುದ್ಯೋಗಿಗಳಾಗಿರುವ ಈ ಸಮಯದಲ್ಲಿ, ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ ನಿರುದ್ಯೋಗ ಮತ್ತು ಹಣದುಬ್ಬರದ ವಿರುದ್ಧ ಹೋರಾಡಬೇಕು, ಬದಲಿಗೆ ಅವರು ಇಡೀ ದೇಶದೊಂದಿಗೆ ಹೋರಾಡುತ್ತಿದ್ದಾರೆ. "ಪ್ರತಿದಿನ ಬೆಳಗ್ಗೆ ಎದ್ದು ಸಿಬಿಐ-ಇಡಿ ಆಟವನ್ನು ಪ್ರಾರಂಭಿಸುತ್ತಾರೆ. ದೇಶವು ಈ ರೀತಿ ಹೇಗೆ ಪ್ರಗತಿ ಹೊಂದುತ್ತದೆ" ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ದೆಹಲಿ ಅಬಕಾರಿ ಹಗರಣ, 15 ಆರೋಪಿಗಳ ಪೈಕಿ ಉಪ ಮುಖ್ಯಮಂತ್ರಿ ಸಿಸೋಡಿಯಾ ನಂ.1!
ಕಳೆದ ವರ್ಷ ನವೆಂಬರ್ 17 ರಿಂದ ಜಾರಿಗೆ ಬಂದ ದೆಹಲಿ ಅಬಕಾರಿ ನೀತಿಯ ಅನುಷ್ಠಾನದಲ್ಲಿ ನಿಯಮಗಳ ಉಲ್ಲಂಘನೆ ಮತ್ತು ಕಾರ್ಯವಿಧಾನದ ಲೋಪಗಳ ಕುರಿತು ಕಳೆದ ತಿಂಗಳು ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಸಂಸ್ಥೆಯಿಂದ ತನಿಖೆಗೆ ಶಿಫಾರಸು ಮಾಡಿದ ನಂತರ ಶುಕ್ರವಾರ ಸಿಬಿಐ ದಾಳಿಗಳು ನಡೆದಿವೆ. ಅಲ್ಲದೆ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತನಿಖೆಗೆ ಶಿಫಾರಸು ಮಾಡಿದ ನಂತರ ದೆಹಲಿ ಸರ್ಕಾರ ಜುಲೈನಲ್ಲಿ ಹಳೆಯ ಅಬಕಾರಿ ನೀತಿಯನ್ನು ಹಿಂತೆಗೆದುಕೊಂಡಿದೆ.