ಒಡಿಶಾ ರೈಲು ದುರಂತ: ಸಿಬಿಐ ತನಿಖೆ ಶುರು
ತನ್ನದೇ ಆದ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭ, ಸ್ಥಳಕ್ಕೆ ಭೇಟಿ ನೀಡಿ ದಾಖಲೆ ಸಂಗ್ರಹಿಸಿದ ಸಿಬಿಐ ತಂಡ, ಕ್ರಿಮಿನಲ್ ಸಂಚು ನಡೆದಿದೆಯೇ ಎಂಬ ತನಿಖೆ

ಬಾಲಸೋರ್/ನವದೆಹಲಿ(ಜೂ.07): 278 ಮಂದಿಯ ಸಾವಿಗೆ ಕಾರಣವಾದ ಒಡಿಶಾದ ತ್ರಿವಳಿ ರೈಲು ದುರಂತ ಪ್ರಕರಣದ ತನಿಖೆಯನ್ನು ಸಿಬಿಐ ಮಂಗಳವಾರ ಆರಂಭಿಸಿದೆ. ಈ ಕುರಿತಾಗಿ ಸಿಬಿಐ ತನ್ನದೇ ಎಫ್‌ಐಆರ್ ದಾಖಲಿಸಿದ್ದು, ಬಳಿಕ ಸ್ಥಳಕ್ಕೆ ಭೇಟಿ ನೀಡಿದ ತನಿಖಾ ತಂಡ ದಾಖಲೆಗಳನ್ನು ಸಂಗ್ರಹಿಸಿದೆ. ಕೃತ್ಯದಲ್ಲಿ ಕ್ರಿಮಿನಲ್ ಸಂಚು ಏನಾದರೂನ ನಡೆದಿದೆಯೇ ಎಂಬುದನ್ನು ಸಿಬಿಐ ಪತ್ತೆ ಮಾಡಲಿದೆ.
ಈ ದುರಂತದ ಹಿಂದೆ ದುಷ್ಕೃತ್ಯದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ರೈಲ್ವೆ ಇಲಾಖೆ ಸಿಬಿಐಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಬಾಹಾನಗ ರೈಲು ನಿಲ್ದಾಣದಕ್ಕೆ ಭೇಟಿ 10 ಮಂದಿ ಸಿಬಿಐ ಅಧಿಕಾರಿಗಳ ತಂಡ, ರೈಲು ಹಳಿಗಳು, ಸಿಗ್ನಲ್ ರೂಂಗಳನ್ನು ಪರಿಶೀಲನೆ ನಡೆಸಿದ್ದು, ರೈಲ್ವೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ. ಸಿಬಿಐ ಅಧಿಕಾರಿಗಳ ಜೊತೆ ವಿಧಿವಿಜ್ಞಾನ ಪ್ರಯೋಗಾಲಯದ ತಂಡವೂ ಸಹ ಬಾಲಸೋರ್ ತಲುಪಿದ್ದು, ಮಾಹಿತಿಗಳನ್ನು ಸಂಗ್ರಹ ಮಾಡುತ್ತಿದೆ. ಈ ದುರಂತಕ್ಕೆ ಒಳಸಂಚು ಕಾರಣವಾಗಿರಬಹುದು ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿರುವ ಸಿಬಿಐ ಎಲ್ಲಾ ವಿಧಾನಗಳಲ್ಲೂ ತನಿಖೆ ನಡೆಸಲಿದೆ.
ರೈಲು ದುರಂತ ನಡೆದ ಬಹನಾಗಗೆ ಪ್ರಧಾನಿ ಭೇಟಿ, ಭೀಕರ ಅಪಘಾತ ಸ್ಥಳ ನೋಡಿ ಮರುಗಿದ ಮೋದಿ!
ಮಂಗಳವಾರ ಮಧ್ಯಾಹ್ನ 2.15ಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಿದ್ದು, ದಾಖಲೆಗಳ ಸಂಗ್ರಹ, ಸಾಕ್ಷಿಗಳ ವಿಚಾರಣೆ, ಹೇಳಿಕೆಗಳ ರೆಕಾರ್ಡ್ ಮತ್ತು ಶೋಧ ಕಾರ್ಯಗಳನ್ನು ಆರಂಭಿಸಿದೆ.
‘ರೈಲ್ವೆ ಸಚಿವಾಲಯದ ಮನವಿಯ ಆಧಾರದಲ್ಲಿ ಸಿಬಿಐ ಈ ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ಕೋರಮಂಡಲ್ ಎಕ್ಸ್‌ಪ್ರೆಸ್, ಯಶವಂತಪುರ ಎಕ್ಸ್‌ಪ್ರೆಸ್ ಮತ್ತು ಗೂಡ್‌್ಸ ರೈಲುಗಳ ನಡುವೆ ಸಂಭವಿಸಿದ ಅಫಘಾತದಲ್ಲಿ ಕ್ರಿಮಿನಲ್ ಸಂಚು ಇರುವ ಕುರಿತಾಗಿ ತನಿಖೆ ನಡೆಸುತ್ತಿದೆ’ ಸಿಬಿಐ ವಕ್ತಾರ ಹೇಳಿದ್ದಾರೆ.
ಜೂ.2ರಂದು ದುರಂತ ನಡೆದ ಬಳಿಕ ಒಡಿಶಾ ಪೊಲೀಸರು ಐಪಿಸಿ ಸೆಕ್ಷನ್ 337, 338, 304ಎ, 34, 153, 154 ಮತ್ತು 175ಗಳಡಿಯಲ್ಲಿ (ನಿರ್ಲಕ್ಷ್ಯದಿಂದ ಸಾವು, ದುರುದ್ದೇಶ, ಪ್ರಯಾಣಿಕರ ಪ್ರಾಣಕ್ಕೆ ಅಪಾಯ ತರುವ ಕೃತ್ಯ.. ಇತ್ಯಾದಿ) ಪ್ರಕರಣ ದಾಖಲಿಸಿತ್ತು. ಈ ಪ್ರಕರಣಗಳನ್ನೂ ಸಿಬಿಐ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಅದರಲ್ಲಿ ಅಲ್ಪ ಬದಲಾವಣೆ ಮಾಡಿ ತನಿಖೆ ಮಾಡಲಿದೆ. ಸಿಬಿಐಗೆ ರೈಲ್ವೆ ಕುರಿತ ತನಿಖೆಯಲ್ಲಿ ಅಷ್ಟುಅನುಭವ ಇಲ್ಲದ ಕಾರಣ ರೈಲ್ವೆ ತಜ್ಞರ ಸಹಾಯ ಪಡೆಯಲಿದೆ ಎಂದು ಮೂಲಗಳು ಹೇಳಿವೆ.