ನವದೆಹಲಿ(ಫೆ.16): ಪ್ರಕರಣ ಮುಚ್ಚಿಹಾಕಲು 2 ಕೋಟಿ ಲಂಚ ಕೇಳಿದ್ದ ಬೆಂಗಳೂರಿನ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯ ಸಿಬ್ಬಂದಿ ಚನ್ನಕೇಶವಲು ಎಂಬಾತನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ತಾನು ಇಡಿ ಅಧಿಕಾರಿ ಎಂದು ಹೇಳಿಕೊಂಡಿದ್ದ ಚನ್ನಕೇಶವಲು ಲಂಚ ಕೇಳಿದ್ದ. ಈ ಪೈಕಿ ಮೊದಲ ಕಂತಿನಲ್ಲಿ 6 ಲಕ್ಷ ಸ್ವೀಕರಿಸಿ, 2ನೇ ಕಂತಿನ ಹಣ ಸ್ವೀಕರಿಸಲು ಯತ್ನಿಸಿದ್ದ ವೇಳೆ ಸಿಬಿಐ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಪ್ರಕರಣ ಸಂಬಂಧ ಈತನ ಆಪ್ತ ವಿರೇಶ್‌ ಎಂಬಾತನನ್ನು ಕೂಡಾ ಸಿಬಿಐ ವಶಕ್ಕೆ ಪಡೆದಿದೆ.

ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ್ದ ಚನ್ನಕೇಶವಲು, ನಿಮ್ಮ ಮೇಲೆ ಇಡಿಗೆ ಹಲವು ದೂರುಗಳು ಬಂದಿವೆ. ಈ ಸಂಬಂಧ ದಾಳಿ ಮಾಡುವುದಾಗಿ ಬೆದರಿಸಿದ್ದ. ಬಳಿಕ ಆತನ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆಯನ್ನೂ ನಡೆಸಿದ್ದ. ಈ ವೇಳೆ 2 ಕೋಟಿ ಕೊಟ್ಟರೆ ಪ್ರಕರಣ ಮುಚ್ಚಿ ಹಾಕುವುದಾಗಿ ಹೇಳಿದ್ದ.

ಅದರಂತೆ ದೂರುದಾರ ವ್ಯಕ್ತಿ ಆದಿಕೇಶವಲುನ ಆಪ್ತ ವೀರೇಶ್‌ಗೆ 6 ಲಕ್ಷ ನೀಡಿದ್ದರು. ಉಳಿದ ಹಣವನ್ನು ಮಾರನೇ ದಿನ ನೀಡುವಂತೆ ಸೂಚಿಸಲಾಗಿತ್ತು. ಈ ವೇಳೆ ಹಣ ಸ್ವೀಕರಿಸಲು ಸ್ವತಃ ಆದಿಕೇಶವಲು ಬರಬೇಕೆಂದು ಒತ್ತಾಯಿಸಿದ್ದ ದೂರುದಾರ, ಈ ವೇಳೆ ಸಿಬಿಐ ಅಧಿಕಾರಿಗಳಿಗೆ ಮೊದಲೇ ಮಾಹಿತಿ ನೀಡಿ ಆತನನ್ನು ಖೆಡ್ಡಾಗೆ ಕೆಡವಿದ್ದಾರೆ. ಬಳಿಕ ಆದಿಕೇಶವಲುನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನನ್ನು 5 ದಿನಗಳ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.