ಪುರುಷ ಸದಸ್ಯರಿಲ್ಲದೆ ಏಕಾಂಗಿಯಾಗಿ ಹಜ್‌ಗೆ ತೆರಳುತ್ತಿರುವ ಮಹಿಳೆಯರ ಈವರೆಗಿನ ಅತಿ ದೊಡ್ಡ ತಂಡ ಇದಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಹೊಸದಿಲ್ಲಿ (ಏಪ್ರಿಲ್ 4, 2023): ಭಾರತದಿಂದ ಹಜ್ ಯಾತ್ರಿಕರ ಸಂಖ್ಯೆಯು ಈ ವರ್ಷ 1.4 ಲಕ್ಷ ದಾಟಿದ್ದು, ಕೇಂದ್ರ ಸರ್ಕಾರವು "ನಗದು ರಹಿತ" ತೀರ್ಥಯಾತ್ರೆಗೆ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಮೆಹ್ರಮ್ (ಪುರುಷ ಸಹಚರ) ಇಲ್ಲದೆ ಪ್ರಯಾಣಿಸಲಿರುವ 45 ವರ್ಷಕ್ಕಿಂತ ಮೇಲ್ಪಟ್ಟ 4,300 ಕ್ಕೂ ಹೆಚ್ಚು ಮಹಿಳೆಯರನ್ನು ಒಳಗೊಂಡಿರುವ ಅತಿದೊಡ್ಡ ತಂಡ ಈ ವರ್ಷ ಹಜ್ ಪ್ರವಾಸ ಮಾಡಲಿದೆ ಎಂದೂ ಕೆಂದ್ರ ಅಲ್ಪಸಂಖ್ಯಾತ ಸಚಿವಾಲಯ ಮಾಹಿತಿ ನೀಡಿದೆ.
ಪ್ರಯಾಣಿಕರ ವಿದೇಶಿ ವಿನಿಮಯದ ಅವಶ್ಯಕತೆಗಳನ್ನು ಪೂರೈಸಲು ಎಲ್ಲಾ ಹಜ್ ಯಾತ್ರಾರ್ಥಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಒಂದು ಫಾರೆಕ್ಸ್ ಕಾರ್ಡ್ ಅನ್ನು ಒದಗಿಸುತ್ತದೆ ಎಂದು ತಿಳಿದುಬಂದಿದೆ. ಈ ವರ್ಷ ಹಜ್‌ಗೆ ಅರ್ಜಿ ಮತ್ತು ಆಯ್ಕೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗಿದೆ. ಈ ಪೈಕಿ, ಆಯ್ಕೆಯಾದ 1.4 ಲಕ್ಷ ಯಾತ್ರಾರ್ಥಿಗಳಲ್ಲಿ 10,621 ಮಂದಿ 70+ ವಯೋಮಾನದವರು ಎಂದು ತಿಳಿದುಬಂದಿದೆ ಮತ್ತು 45 ವರ್ಷ ಮೇಲ್ಪಟ್ಟ 4,314 ಮಹಿಳೆಯರು ಮೆಹ್ರಮ್ (ಪುರುಷ ಸಂಗಾತಿ) ಇಲ್ಲದೆ ಪ್ರಯಾಣಿಸುತ್ತಿದ್ದಾರೆ.
ಇದನ್ನು ಓದಿ: ವಿಐಪಿ ಹಜ್ ಕೋಟಾ ಸಂಸ್ಕೃತಿಗೆ ಕೇಂದ್ರ ಸರ್ಕಾರ ಬ್ರೇಕ್: ಶೀಘ್ರದಲ್ಲೇ ಹೊಸ ನೀತಿ..!
ಪುರುಷ ಸದಸ್ಯರಿಲ್ಲದೆ ಏಕಾಂಗಿಯಾಗಿ ಹಜ್‌ಗೆ ತೆರಳುತ್ತಿರುವ ಮಹಿಳೆಯರ ಈವರೆಗಿನ ಅತಿ ದೊಡ್ಡ ತಂಡ ಇದಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಹಜ್‌ಗೆ ಪ್ರಯಾಣ ಮಾಡಲು 1.8 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. “ಹಜ್‌ಗೆ ಆಯ್ಕೆಯಾಗಿರುವ ಎಲ್ಲಾ 1.4 ಲಕ್ಷ ಅರ್ಜಿದಾರರಿಗೆ SMS ಮೂಲಕ ತಿಳಿಸಲಾಗಿದೆ. ವೇಯ್ಟ್ ಲಿಸ್ಟ್‌ನಲ್ಲಿರುವವರಿಗೆ ಅವರ ವೇಯ್ಟ್-ಲಿಸ್ಟ್ ಸಂಖ್ಯೆಗಳೊಂದಿಗೆ ಪಠ್ಯ ಸಂದೇಶದ ಮೂಲಕ ತಿಳಿಸಲಾಗಿದೆ’’ ಎಂದು ಹಿರಿಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತಕ್ಕೆ ಈ ವರ್ಷ 1.75 ಲಕ್ಷ ಹಜ್ ಯಾತ್ರಿಗಳ ಕೋಟಾವನ್ನು ನಿಗದಿಪಡಿಸಲಾಗಿದೆ. ಹಜ್ ನೀತಿ 2023 ರ ಪ್ರಕಾರ ಒಟ್ಟು ಕೋಟಾದಲ್ಲಿ, 80% ಅನ್ನು ಭಾರತದ ಹಜ್ ಸಮಿತಿಗೆ ಮತ್ತು ಉಳಿದವನ್ನು ಖಾಸಗಿ ಹಜ್ ಗುಂಪು ನಿರ್ವಾಹಕರಿಗೆ ಹಂಚಲಾಗಿದೆ. ಇನ್ನು, ಈ ತೀರ್ಥಯಾತ್ರೆಯ ಮೊದಲ ವಿಮಾನವು ಮೇ 21 ರಂದು ಭಾರತದಿಂದ ಹೊರಡಲಿದೆ.
ಇದನ್ನೂ ಓದಿ: ಹಿಜಾಬ್ ವಿರೋಧಿ ಪ್ರತಿಭಟನೆ ಎಫೆಕ್ಟ್: 5000 ಮಕ್ಕಳ ಮೇಲೆ ವಿಷಾನಿಲ ದಾಳಿ, ಇಸ್ಲಾಮಿಕ್ ಸಂಘಟನೆ ಕೃತ್ಯ..!
ಯಾತ್ರಾರ್ಥಿಗಳಿಗೆ ವಿದೇಶಿ ವಿನಿಮಯ ಸೌಲಭ್ಯಗಳನ್ನು "ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ" ಒದಗಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಲು SBI ಯೊಂದಿಗೆ ಸಚಿವಾಲಯವು ಪಾಲುದಾರಿಕೆ ಹೊಂದಿದೆ ಎಂದು ಹೇಳಿಕೆ ತಿಳಿಸಿದೆ. ಈ ಮಧ್ಯೆ, ಪ್ರತಿ ಯಾತ್ರಿಕರಿಗೆ 2100 ರಿಯಾಲ್ ಲಭ್ಯವಾಗುವಂತೆ ಹಜ್ ಸಮಿತಿ ಈ ಹಿಂದೆ ಮಾಡುತ್ತಿತ್ತು. ಆದರೆ, ಅದಕ್ಕೂ ಭಿನ್ನವಾಗಿ ಹಜ್ ನೀತಿ 2023 ಯಾತ್ರಾರ್ಥಿಗಳಿಗೆ ಅವರ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ತಮ್ಮದೇ ಆದ ವಿದೇಶಿ ಕರೆನ್ಸಿಯನ್ನು ವ್ಯವಸ್ಥೆಗೊಳಿಸುವ ಆಯ್ಕೆಯನ್ನು ನೀಡುತ್ತದೆ ಎಂದೂ ಅದು ಹೇಳಿದೆ.
ಅಲ್ಲದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ 25 ಎಂಬಾರ್ಕೇಶನ್ ಪಾಯಿಂಟ್‌ಗಳಲ್ಲಿ ಸ್ಟಾಲ್‌ಗಳನ್ನು ಏರ್ಪಡಿಸುತ್ತದೆ. ಈ ಸ್ಟಾಲ್‌ಗಳಲ್ಲಿ ನೋಡಲ್ ಅಧಿಕಾರಿಗಳು ಯಾತ್ರಾರ್ಥಿಗಳಿಗೆ ನಗದು ಅಥವಾ ಕಾರ್ಡ್ ಮೂಲಕ ಫಾರೆಕ್ಸ್ ಸಂಗ್ರಹಿಸಲು ಅನುಕೂಲ ಮಾಡಿಕೊಡುತ್ತಾರೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಸುಪ್ರೀಂಕೋರ್ಟ್‌ನಲ್ಲಿ ಶೀಘ್ರದಲ್ಲೇ ಹಿಜಾಬ್ ಕೇಸ್ ವಿಚಾರಣೆ..? ಮಧ್ಯಂತರ ಪರಿಹಾರ ಕೋರಿ ಅರ್ಜಿ
