ಪ್ರಿಯ ಅರವಿಂದ್‌,

ನೀವು ಇತ್ತೀಚೆಗೆ ಸಿಎಎ ಹಾಗೂ ಎನ್‌ಆರ್‌ಸಿ ಕಸರತ್ತನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ ವಿಡಿಯೋ ನೋಡಿ ಇದನ್ನು ಬರೆಯಬೇಕೆನ್ನಿಸಿತು. ಆ ವಿಡಿಯೋದಲ್ಲಿ ನೀವು ಜನರಿಗೆ ಸಿಎಎ ಹಾಗೂ ಎನ್‌ಆರ್‌ಸಿ ಹೇಗೆ ಹಿಂದು, ಮುಸ್ಲಿಮರಿಬ್ಬರನ್ನೂ ಸಂಕಷ್ಟಕ್ಕೆ ದೂಡಲಿದೆ ಮತ್ತು ಸಾಮಾಜಿಕ ಸಾಮರಸ್ಯ ಕದಡಲಿದೆ ಎಂಬುದನ್ನು ಅತ್ಯಂತ ಸರಳವಾಗಿ, ಸ್ಪಷ್ಟವಾಗಿ ವಿವರಿಸುತ್ತಿದ್ದಿರಿ. ಉದ್ಯೋಗ ಸೃಷ್ಟಿಹಾಗೂ ಆರ್ಥಿಕತೆಯ ದುರಸ್ತಿಯಿಂದ ಸರ್ಕಾರದ ಗಮನವನ್ನು ಇದು ಹೇಗೆ ಬೇರೆಡೆ ಸೆಳೆಯುತ್ತಿದೆ ಮತ್ತು ಹೇಗೆ ಇದು ಇನ್ನಷ್ಟುಸಮಸ್ಯೆಗಳನ್ನು ಸೃಷ್ಟಿಸುವ ವ್ಯರ್ಥ ಹಾಗೂ ಖರ್ಚಿನ ಬಾಬ್ತಾಗಲಿದೆ ಎಂಬುದನ್ನು ಜನಸಾಮಾನ್ಯನ ದೃಷ್ಟಿಯಿಂದ ನೀವು ಅದ್ಭುತವಾಗಿ ಅರ್ಥ ಮಾಡಿಕೊಂಡಿದ್ದೀರಿ.

ಮತ್ತು ಅಷ್ಟೇ ಚೆನ್ನಾಗಿ ಜನರಿಗೆ ತಿಳಿಸುವ ಕಲೆ ನಿಮ್ಮಲ್ಲಿದೆ. ನಿಮ್ಮ ಮಾತು ನೇರವಾಗಿ ಜನರ ಹೃದಯಕ್ಕೆ ತಟ್ಟುವಂತಿತ್ತು. ಇಡೀ ದೇಶವನ್ನು ಕಾಡುತ್ತಿರುವ ಶಿಕ್ಷಣ, ಆರೋಗ್ಯ ಸೇವೆ, ಸ್ವಚ್ಛತೆ, ಕುಡಿಯುವ ನೀರು, ಕೃಷಿ, ವಿದ್ಯುತ್‌ ಕೊರತೆ, ಮೂಲಸೌಕರ್ಯ, ಉದ್ಯೋಗ ಸೃಷ್ಟಿ, ಹಸಿವು, ಅಪೌಷ್ಟಿಕತೆ ಹಾಗೂ ಬಡತನದಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲು ಇಂಥವುಗಳತ್ತ ಗಮನ ಹರಿಸುವುದು ಮೂರ್ಖತನ ಎಂದು ಹೇಳಿದಿರಿ.

ಎಲ್ಲಕ್ಕಿಂತ ಮುಖ್ಯವಾಗಿ, ‘ಒರಟು ಚಪ್ಪಲಿ ಧರಿಸಿ ಓಡುತ್ತಿರುವ ಸರ್ಕಾರ ತನ್ನ ಸರ್ವಾಧಿಕಾರಿ ಧೋರಣೆ ಬಿಟ್ಟು ಜನರ ಜೊತೆ ಮಾತುಕತೆ ನಡೆಸಬೇಕು’ ಎಂಬ ಸಂದೇಶವನ್ನು ರವಾನಿಸಿದಿರಿ. ಬಹಳ ಬೇಸರದಿಂದ ಇಲ್ಲಿ ನಿಮಗೊಂದು ಸಂಗತಿ ನೆನಪಿಸಬೇಕು.

ದೇಶದಲ್ಲಿ ನಾವೆಲ್ಲರೂ ಕೂಡ ವಲಸಿಗರೇ!: ಕಾಯ್ದೆ ಹಿಂಪಡೆದು ಒಮ್ಮತದಿಂದ ಮತ್ತೆ ಮಂಡಿಸಿ

ನೀವು ಈ ದೇಶದ ಬಡವರು ಹಾಗೂ ಯುವಕರನ್ನು ನಿರಾಸೆಗೊಳಿಸಿದ್ದೀರಿ. ದೆಹಲಿಯಲ್ಲಿನ ನಿಮ್ಮ ಆಡಳಿತದ ಬಗ್ಗೆ ನಾನು ಹೇಳುತ್ತಿಲ್ಲ. ಮುಂದಿನ ಚುನಾವಣೆಯಲ್ಲೂ ನೀವೇ ಗೆಲ್ಲುತ್ತೀರಿ ಎಂದು ಕೆಲ ಸಮೀಕ್ಷೆಗಳು ಹೇಳುತ್ತಿವೆ. ಅಭಿನಂದನೆಗಳು. ನಾನು ಹೇಳುತ್ತಿರುವುದು ದೇಶಾದ್ಯಂತ ನಿಮ್ಮ ಆಮ್‌ ಆದ್ಮಿ ಪಕ್ಷ ಎಬ್ಬಿಸಿದ್ದ ನಿರೀಕ್ಷೆಯ ಅಲೆಗಳ ಬಗ್ಗೆ ಹಾಗೂ ಅದನ್ನು ಈಡೇರಿಸುವಲ್ಲಿ ನೀವು ವಿಫಲರಾದ ನಂತರ ಹುಟ್ಟಿದ ಅಸಮಾಧಾನದ ಬಗ್ಗೆ.

ಜನರನ್ನು ಬಡಿದೆಬ್ಬಿಸಿದ್ದು ನೀವು, ಅಣ್ಣಾ

ಸ್ವಲ್ಪ ಹಿಂದಕ್ಕೆ ಹೋಗೋಣ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನಡೆಸಿದ ಚಳವಳಿ ಈ ದೇಶದ ಜನರ ಮನದಲ್ಲಿ ಕಿಚ್ಚು ಹೊತ್ತಿಸಿತ್ತು. ನೀವು ಆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಿರಿ. ಅಣ್ಣಾ ಅವರ ಚರಿಷ್ಮಾ ಹಾಗೂ ನಿಸ್ವಾರ್ಥ ಉತ್ಸಾಹದ ಜೊತೆಗೆ ನಿಮ್ಮ ಅಪರಿಮಿತ ಶಕ್ತಿ, ತಾಳ್ಮೆ ಮತ್ತು ಪ್ರಾಮಾಣಿಕತೆಯು ಜನರನ್ನು ತಟ್ಟಿತ್ತು. ಹೀಗಾಗಿ ಜನರೆಲ್ಲ ಒಂದಾಗಿ ನಿಮ್ಮ ಜೊತೆ ನಿಂತಿದ್ದರು. ಒಂದು ಹಂತದಲ್ಲಿ ನೀವು ನಮ್ಮ ದೇಶದ ರಾಜಕಾರಣಿಗಳಷ್ಟೇ ಅಲ್ಲ, ಸಮಾಜ ಕೂಡ ರೂಪಾಂತರಗೊಳ್ಳಬೇಕು ಎಂದು ಕರೆ ಕೊಟ್ಟಿರಿ.

ರಾಜಕಾರಣಿಗಳು ನಮ್ಮದೇ ಪ್ರತಿಬಿಂಬ. ಶ್ರೀಮಂತ ಹಾಗೂ ಮಧ್ಯಮ ವರ್ಗದ ನಾವು ಸ್ವಾರ್ಥಿಗಳು. ನಮ್ಮೊಳಗೆ ಪಾಪಪ್ರಜ್ಞೆಯಿದೆ. ವ್ಯವಸ್ಥೆಯ ಜೊತೆ ಸೇರಿಕೊಂಡು ನಾವೂ ನಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸುತ್ತೇವೆ. ‘ಜನರು ಭ್ರಷ್ಟರಾಗಿದ್ದರೆ ಸ್ವಾತಂತ್ರ್ಯ ಉಳಿಯುವುದಿಲ್ಲ’ ಎನ್ನುತ್ತಾನೆ ಎಡ್ಮಂಡ್‌ ಬರ್ಕೆ. ನೀವು ನಮ್ಮನ್ನು ಎಚ್ಚರಿಸಿದ್ದಿರಿ.

ಅಸಹಾಯಕರಾಗಿದ್ದ ಯುವಕರಲ್ಲಿ ನೀವು ಮತ್ತು ಅಣ್ಣಾ ಆಶಾಭಾವನೆ ತುಂಬಿದಿರಿ. ಜಾತಿ, ಮತ, ವರ್ಗಭೇದವಿಲ್ಲದೆ ಅವರೆಲ್ಲ ಒಗ್ಗೂಡುವಂತೆ ಮಾಡಿದಿರಿ. ಪ್ರಜಾಪ್ರಭುತ್ವದ ನಿರ್ಮಾಣದಲ್ಲಿ ತಾವೆಲ್ಲ ಪಾಲ್ಗೊಳ್ಳಬೇಕೆಂದು ಅವರಿಗೆ ಅನ್ನಿಸುವಂತೆ ಮಾಡಿದಿರಿ. ಎಲ್ಲಕ್ಕಿಂತ ಮುಖ್ಯವಾಗಿ, ರಾಜಕಾರಣಿಗಳನ್ನು ಪ್ರಶ್ನಿಸುವ ಧೈರ್ಯವನ್ನು ನೀವು ಮತ್ತು ಅಣ್ಣಾ ತುಂಬಿದಿರಿ. ಬಹುಶಃ ಅದು ನಿಮ್ಮ ಬಹುದೊಡ್ಡ ಕೊಡುಗೆ.

ಬಹಳ ಬೇಗ ನಿಮ್ಮ ‘ಇಂಡಿಯಾ ಅಗೇನಸ್ಟ್‌ ಕರಪ್ಷನ್‌ (ಐಎಸಿ)’ ಸಂಸ್ಥೆ ಆಪ್‌ಗೆ ಜನ್ಮ ನೀಡಿತು. ನೀವು ಅಣ್ಣಾ ಹಜಾರೆಯಿಂದ ಬೇರೆಯಾಗಿದ್ದು ನನ್ನನ್ನೂ ಸೇರಿದಂತೆ ಬಹಳ ಜನರಿಗೆ ದುಃಖ ಉಂಟುಮಾಡಿತು. ಈ ಒಡಕಿನಿಂದಾಗಿಯೇ ಅಣ್ಣಾ ಹಜಾರೆಯ ಐಎಸಿ ಹಾಗೂ ನಿಮ್ಮ ಆಪ್‌ ಬಹಳ ದಿನ ಬಾಳಿಕೆ ಬರುವುದಿಲ್ಲ ಎಂಬ ಅನುಮಾನಗಳಿದ್ದವು. ಆಪ್‌, ಐಎಸಿಯ ವಿಸ್ತರಿತ ಭಾಗವಾಗಿತ್ತು. ನಮ್ರ, ಪಾರದರ್ಶಕ, ಪ್ರಾಮಾಣಿಕ, ಉತ್ತಮ ಆಡಳಿತ ನೀಡುವ ಹಾಗೂ ಆಂತರಿಕ ಪ್ರಜಾಪ್ರಭುತ್ವ ಹೊಂದಿರುವ ರಾಜಕೀಯ ಪಕ್ಷಕ್ಕಾಗಿ ಆರಂಭಿಸಿದ ಚಳವಳಿ ಆಪ್‌. ಅದರ ಡಿಎನ್‌ಎ ಅಣ್ಣಾ ಅವರದು. ಅಣ್ಣಾ ತಮ್ಮ ಚಳವಳಿ ಮೂಲಕ ಆಶಾಭಾವನೆ ತುಂಬಿದರೆ, ನೀವು ಆ ಚಳವಳಿಯನ್ನು ರಾಜಕೀಯಕ್ಕೆ ಪರಿವರ್ತಿಸಲು ಬೇಕಾದ ಸೈದ್ಧಾಂತಿಕತೆಯನ್ನು ನೀಡಿದಿರಿ.

ಮಹಾರಾಷ್ಟ್ರ ಸರ್ಕಾರ: ಶತ್ರುವಿನ ಜೊತೆ ನಡೆಸುವ ಸಂಸಾರ

ಹೊಸ ಮಾದರಿಯ ರಾಜಕಾರಣ ‘ಆಪ್‌’

ಅಣ್ಣಾ ಅವರಿಂದ ಬೇರ್ಪಟ್ಟರೂ ಆಪ್‌ ಈ ದೇಶಕ್ಕೊಂದು ಹೊಸ ಮಾದರಿಯ ರಾಜಕಾರಣ ನೀಡಿ ಜನರ ಎದೆಯಲ್ಲಿ ದೀಪ ಹಚ್ಚಿತು. ಹಣ, ತೋಳ್ಬಲ, ಜಾತಿ ಹಾಗೂ ಧರ್ಮವನ್ನು ಮೀರಿದ ರಾಜಕಾರಣ ಈ ದೇಶದಲ್ಲಿ ಸಾಧ್ಯವೆಂಬ ನಿರೀಕ್ಷೆ ಹುಟ್ಟುಹಾಕಿತು. ಹಲವು ಹೋರಾಟಗಾರರು ಆಪ್‌ ಸೇರಿದರು. ಪ್ರಶಾಂತ್‌ ಭೂಷಣ್‌, ಶಾಂತಿ ಭೂಷಣ್‌, ಯೋಗೇಂದ್ರ ಯಾದವ್‌, ಅಡ್ಮಿರಲ್‌ ರಾಮದಾಸ್‌, ರಾಜಮೋಹನ್‌ ಗಾಂಧಿ, ಸಿಸೋಡಿಯಾ, ಮಾಜಿ ರಾಯಭಾರಿಗಳು, ಪ್ರಸಿದ್ಧ ಪತ್ರಕರ್ತರು, ನಾಗರಿಕ ಸೇವೆಯ ಅಧಿಕಾರಿಗಳು, ಟೆಕ್ನೋಕ್ರಾಟ್‌ಗಳು ಹಾಗೂ ಯುವ ವೃತ್ತಿಪರರು ನಿಮ್ಮೊಂದಿಗೆ ಕೈಜೋಡಿಸಿದರು.

ಹೊಸಬರಾದರೂ ನೀವು ಮೊದಲ ಪ್ರಯತ್ನದಲ್ಲೇ ದೆಹಲಿಯಲ್ಲಿ ಚುನಾವಣೆ ಗೆದ್ದು ಮುಖ್ಯಮಂತ್ರಿಯಾದಿರಿ. ಅದು ನಿಮ್ಮ ಗೆಲುವಾಗಿರಲಿಲ್ಲ, ನೀವು ಪ್ರತಿಪಾದಿಸಿದ ಮೌಲ್ಯಗಳ ಗೆಲುವಾಗಿತ್ತು. ಕೆಲವೇ ತಿಂಗಳಲ್ಲಿ ನೀವು ರಾಜೀನಾಮೆ ಕೊಡಬೇಕಾಯಿತು. ಮತ್ತೆ ಸ್ಪರ್ಧಿಸಿ ಅಭೂತ ಗೆಲುವು ಸಾಧಿಸಿದಿರಿ. ವಿರೋಧ ಪಕ್ಷಗಳು ಕೊಚ್ಚಿಹೋದವು. ಕಾಂಗ್ರೆಸ್‌ ಶೂನ್ಯ ಸಂಪಾದಿಸಿತು. ಬಿಜೆಪಿ ಕೇವಲ ಮೂರು ಸೀಟು ಗೆದ್ದಿತು. ನೀವು 70ರಲ್ಲಿ 67 ಸೀಟು ಗೆದ್ದಿರಿ. ಅದೊಂದು ದಾಖಲೆ.

ಆದರೆ, ಆ ಗೆಲುವಿನ ನಂತರ ಬಹಳ ಬೇಗ ನೀವು ನಿಮ್ಮ ತತ್ವಾದರ್ಶಗಳನ್ನು ಬಿಟ್ಟುಬಿಟ್ಟಿರಿ. ಪಾರದರ್ಶಕತೆ, ನಮ್ರತೆ ಹಾಗೂ ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವ ಮಾಯವಾದವು. ನೀವು ಶ್ರೇಷ್ಠತೆಯ ವ್ಯಸನಿಯಂತೆ ಆಡತೊಡಗಿದಿರಿ. ದೊಡ್ಡದೊಡ್ಡವರೆಲ್ಲ ಆಘಾತಕ್ಕೊಳಗಾಗಿ ಆಪ್‌ ತೊರೆದರು. ಸಾಮಾನ್ಯ ರಾಜಕಾರಣಿಗೂ ನಿಮಗೂ ಯಾವುದೇ ವ್ಯತ್ಯಾಸ ಕಾಣಿಸದಂತಾಯಿತು. ಆಪ್‌ಗೆ ಬೇಕಾದ ಆಳ-ಅಗಲ ಹಾಗೂ ಶಕ್ತಿ ನೀಡಿದ ಪ್ರಶಾಂತ್‌ ಭೂಷಣ್‌ರಂಥವರನ್ನೇ ನೀವು ನಿರ್ದಾಕ್ಷಿಣ್ಯವಾಗಿ ಉಚ್ಚಾಟನೆ ಮಾಡಿದಿರಿ.

ನೀವೇ ಟೀಕಿಸುತ್ತಿದ್ದ ವಿರೋಧ ಪಕ್ಷಗಳ ಸರ್ವಾಧಿಕಾರಿಗಳನ್ನೂ ಮೀರಿಸುವಂತೆ ವರ್ತಿಸತೊಡಗಿದಿರಿ. ದೆಹಲಿಯಲ್ಲಿ ನಿಮ್ಮ ಅದ್ಭುತ ಗೆಲುವಿನ ನಂತರ ಕೆಲವೇ ಸಮಯದಲ್ಲಿ ನಡೆದ 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ನಿಮ್ಮನ್ನು ನೆಲಕ್ಕಪ್ಪಳಿಸಿ ಹತ್ತಕ್ಕೆ ಹತ್ತೂ ಸೀಟುಗಳನ್ನು ಗೆದ್ದಿದ್ದರಲ್ಲಿ ಆಶ್ಚರ್ಯವಿದೆಯೇ. ಅಬ್ಬಾ, ಎಂಥಾ ಪತನ!

ದೇಶಕ್ಕೆ ಆರ್ಥಿಕ ಸಂಕಷ್ಟವಿದೆ ಎಂಬುದನ್ನು ಮೊದಲು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲಿ

ಮೋದಿಗೆ ನಿಮ್ಮ ಜಾಗ ಬಿಟ್ಟುಕೊಟ್ಟಿದ್ದೇಕೆ?

ನೀವು ಹೊಸ ರೀತಿಯ ರಾಜಕಾರಣದ ಭರವಸೆ ಹುಟ್ಟಿಸಿದ್ದರಿಂದ ದೇಶದ ಯುವಕರೆಲ್ಲ ಒಕ್ಕೊರಲಿನಿಂದ ಎದ್ದುನಿಂತಿದ್ದರು ಎಂಬುದು ನಿಮಗೆ ನೆನಪಿರಬೇಕು. ಅದೇ ಯುವಕರು ನೀವು ಮುಖ್ಯಮಂತ್ರಿಯಾದ ನಂತರ ನಿಮ್ಮ ಹುಚ್ಚಾಟ ಹಾಗೂ ಆಪ್‌ನ ಹಿರಿಯರಿಗೆ ನೀವು ತೋರಿದ ಅಗೌರವ ನೋಡಿ ಭ್ರಮನಿರಸನಗೊಂಡರು. ಪರಿಣಾಮ, ಮೋದಿ ಒಂದೇ ಎಳೆತಕ್ಕೆ ನಿಮ್ಮ ಕಾಲ್ಕೆಳಗಿನ ಜಮಖಾನವನ್ನು ಸರಕ್ಕನೆ ಎಳೆದು ಯುವಕರನ್ನೆಲ್ಲ ತಮ್ಮತ್ತ ಸೆಳೆದುಕೊಂಡುಬಿಟ್ಟರು.

ಅಣ್ಣಾ ಜೊತೆಗಿದ್ದಾಗ ನಿಮ್ಮ ಹೋರಾಟ ಕಾಂಗ್ರೆಸ್‌ ಪಕ್ಷದ ವಂಶರಾಜಕಾರಣದ ವಿರುದ್ಧವಿತ್ತೇ ಹೊರತು ಬಿಜೆಪಿಯ ವಿರುದ್ಧವಿರಲಿಲ್ಲ. ಅದನ್ನು ನೀವು ಮರೆತುಬಿಟ್ಟಿರಿ. ಮೋದಿ ಆಗಿನ್ನೂ ರಂಗದಲ್ಲಿರಲಿಲ್ಲ. ಲೋಕಪಾಲ ಸ್ಥಾಪಿಸುವುದು ಹಾಗೂ ಪಂಜರದ ಗಿಳಿಯಾಗಿದ್ದ ಸಿಬಿಐನಂತಹ ಕೇಂದ್ರೀಯ ಸಂಸ್ಥೆಗಳನ್ನು ಆಡಳಿತಾರೂಢ ಪಕ್ಷದ ಕಪಿಮುಷ್ಟಿಯಿಂದ ಬಿಡಿಸುವುದು ನಿಮ್ಮ ಗುರಿಯಾಗಿತ್ತು. ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ಇನ್ನೆಲ್ಲ ಭ್ರಷ್ಟರಾಜಕಾರಣಕ್ಕೆ ಉತ್ತಮ ಪರ್ಯಾಯದ ಕನಸನ್ನು ನೀವು ಆಪ್‌ ಮೂಲಕ ಬಿತ್ತಿದ್ದಿರಿ. ಆದರೆ, ಅಧಿಕಾರಕ್ಕೆ ಬಂದ ನಂತರ ನಿಮ್ಮ ಜಾಗವನ್ನು ಮೋದಿ ಆಕ್ರಮಿಸಿಕೊಳ್ಳಲು ಬಿಟ್ಟಿರಿ.

ದೇಶಕ್ಕೀಗ ಹಳೆಯ ಕೇಜ್ರಿವಾಲ್‌ ಬೇಕು

ಭಾರತವನ್ನು ಬದಲಿಸುವ ಗುರಿ ನಿಮಗೀಗ ಮರೆತುಹೋಗಿದೆ. ಜನರು ನಿಮ್ಮನ್ನು ದೆಹಲಿ ಆಳುವುದಕ್ಕಾಗಿ ಬೆಳೆಸಿಲ್ಲ, ಬದಲಿಗೆ ದೇಶ ಮುನ್ನಡೆಸುವುದಕ್ಕಾಗಿ ಬೆಂಬಲಿಸಿದ್ದರು. ಧರ್ಮಾಧಾರಿತವಾಗಿ ದೇಶ ಧ್ರುವೀಕರಣಗೊಳ್ಳುತ್ತಿರುವ ಹಾಗೂ ಸರ್ಕಾರದ ಇತ್ತೀಚಿನ ನೀತಿಗಳ ವಿರುದ್ಧ ಯುವಕರೆಲ್ಲ ತೋಳೇರಿಸಿ ನಿಂತಿರುವ ಈ ಹೊತ್ತಿನಲ್ಲಿ ನಿಮ್ಮ ಅಗತ್ಯ ಯಾವತ್ತಿಗಿಂತ ಹೆಚ್ಚಿದೆ. ನೀವು ಮತ್ತು ಅಣ್ಣಾ ಹೋರಾಡುತ್ತಿದ್ದಾಗ ಕೇಂದ್ರದಲ್ಲಿ ಯಾವ ಸನ್ನಿವೇಶವಿತ್ತೋ ಅದೇ ಸನ್ನಿವೇಶ ಈಗ ಮರುಕಳಿಸಿದೆ.

ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇತ್ತ ಕಾಂಗ್ರೆಸ್‌ ಪಕ್ಷ ನಾಯಕತ್ವಕ್ಕಾಗಿ ಪರದಾಡುತ್ತಿದೆ. ಪ್ರಾದೇಶಿಕ ಪಕ್ಷಗಳಲ್ಲಿ ಇಡೀ ದೇಶಕ್ಕೆ ಸ್ಫೂರ್ತಿ ತುಂಬಬಲ್ಲ ನಾಯಕರಿಲ್ಲ. ಜವಾಬ್ದಾರಿಯುತ ವಿರೋಧ ಪಕ್ಷಕ್ಕೂ ಗತಿಯಿಲ್ಲ. ಎಡಕ್ಕೂ ಇಲ್ಲದ, ಬಲಕ್ಕೂ ಇಲ್ಲದ, ಅಲ್ಪಸಂಖ್ಯಾತರನ್ನು ಓಲೈಸದ, ಬಹುಸಂಖ್ಯಾತರ ಕಿಸೆಯಲ್ಲಿರುವಂತೆ ವರ್ತಿಸದ, ಸಮತೋಲಿತ, ಎಲ್ಲರನ್ನೂ ಒಳಗೊಳ್ಳುವ ಹಾಗೂ ಎಲ್ಲರನ್ನೂ ಗೌರವಿಸುವ, ಮಾತುಕತೆಯನ್ನು ಪ್ರೋತ್ಸಾಹಿಸುವ, ಯಾವುದೇ ಸಿದ್ಧಾಂತದ ಅಡಿಯಾಳಾಗಿ ವರ್ತಿಸದ, ಸಂವಿಧಾನಕ್ಕೆ ನಿಷ್ಠವಾಗಿ ದೇಶ ಆಳುವ ರಾಜಕಾರಣ ನಮಗೆ ಬೇಕಾಗಿದೆ.

ನೀವು ಅಹಂ ಬಿಟ್ಟು ಬನ್ನಿ. ತೊರೆದುಹೋದ ಎಲ್ಲರನ್ನೂ ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ನಿಮ್ಮ ಹಳೆಯ ಖದರಿಗೆ ಮರಳಿಬನ್ನಿ. ದೇಶಾದ್ಯಂತ ಪಕ್ಷ ಕಟ್ಟುವಂತೆ ಯುವಕರಲ್ಲಿ ಸ್ಫೂರ್ತಿ ತುಂಬಿ. ಇದಕ್ಕಾಗಿ ಒಬ್ಬ ಸಮರ್ಥ ಉತ್ತರಾಧಿಕಾರಿಗೆ ದೆಹಲಿಯ ಆಡಳಿತ ಒಪ್ಪಿಸಿ. ನೀವು ಎಲ್ಲ ರಾಜ್ಯಗಳಲ್ಲಿ ಒಂದೊಂದೇ ಇಟ್ಟಿಗೆಯಾಗಿ ಎಲ್ಲ ರಾಜ್ಯಗಳಲ್ಲಿ ಪಕ್ಷ ಕಟ್ಟಲು ನಾಯಕತ್ವ ಒದಗಿಸಿ. ಇದೊಂದು ಸುದೀರ್ಘ ಕಸರತ್ತು. ಇದಕ್ಕೆ ತಾಳ್ಮೆ ಹಾಗೂ ಬದ್ಧತೆ ಬೇಕು.

ನೀವಿನ್ನೂ ಯುವಕರು. ಭರವಸೆಗಳನ್ನು ಈಡೇರಿಸುವ ಶಕ್ತಿ ನಿಮಗಿದೆ. ಜನರು ಕಾಯುತ್ತಿದ್ದಾರೆ. ಇದು ಸುವರ್ಣಾವಕಾಶ. ಇಬ್ಬರು ಸಂಸದರಿಂದ ಮುನ್ನೂರು ಸಂಸದರವರೆಗೆ ಬಿಜೆಪಿ ಹೇಗೆ ಬೆಳೆಯಿತು ಗೊತ್ತಲ್ಲ. ಅವರಿಗೆ ನಲವತ್ತು ವರ್ಷ ಬೇಕಾಯಿತು. ನಿಮಗೆ ಅಷ್ಟುಸಮಯ ಬೇಕಾಗಲಾರದು. ಹಾಗಂತ ಇದು ಸುಲಭವಲ್ಲ. ಆದರೆ ಯೋಗ್ಯವಾದ ಸವಾಲು, ಉದಾತ್ತ ಜವಾಬ್ದಾರಿ. ನೀವು ಕೊಟ್ಟಮಾತನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸಿ, ದೇಶವನ್ನು ಒಗ್ಗೂಡಿಸಿ ಮುನ್ನಡೆಸುವ ಜವಾಬ್ದಾರಿ ಹೊರಲೇಬೇಕು.

- ಕ್ಯಾ. ಜಿ ಆರ್‌ ಗೋಪಿನಾಥ್‌

ಉದ್ಯಮಿ, ಲೇಖಕ