Asianet Suvarna News Asianet Suvarna News

ದೇಶದಲ್ಲಿ ನಾವೆಲ್ಲರೂ ಕೂಡ ವಲಸಿಗರೇ!: ಕಾಯ್ದೆ ಹಿಂಪಡೆದು ಒಮ್ಮತದಿಂದ ಮತ್ತೆ ಮಂಡಿಸಿ

ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆದು, ಇನ್ನಷ್ಟುಸುಧಾರಿಸಿ, ಒಮ್ಮತದಿಂದ ಮತ್ತೆ ಮಂಡಿಸಿ| ದೇಶದಲ್ಲಿ ನಾವೆಲ್ಲರೂ ಕೂಡ ವಲಸಿಗರೇ!

We are all descendants of immigrants A Article By Businessman Captain Gopinath
Author
Bangalore, First Published Dec 18, 2019, 4:57 PM IST

ಕ್ಯಾಪ್ಟನ್‌ ಗೋಪಿನಾಥ್‌, ಖ್ಯಾತ ಉದ್ಯಮಿ

ಇತ್ತೀಚೆಗೆ ಪತ್ರಿಕೆಯಲ್ಲೊಂದು ವರದಿಯಿತ್ತು. ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತೋಟಗಳಲ್ಲಿ ಸುಮಾರು ಎರಡು ಲಕ್ಷ ಮುಸ್ಲಿಂ ವಲಸಿಗರು ಕೆಲಸ ಮಾಡುತ್ತಿದ್ದಾರೆಂದೂ (ಅಧಿಕೃತ ಸಮೀಕ್ಷೆ ನಡೆದಿಲ್ಲ), ಇತ್ತೀಚೆಗೆ ಪ್ರಕಟವಾದ ಎನ್‌ಆರ್‌ಸಿ ಪಟ್ಟಿಯಲ್ಲಿ ಅವರ ಹೆಸರಿಲ್ಲ ಎಂದೂ ಅದರಲ್ಲಿ ಹೇಳಲಾಗಿತ್ತು. ನಂತರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆರಂಭವಾದ ಹಿಂಸಾಚಾರದಲ್ಲಿ ಈ ಸುದ್ದಿ ಕಳೆದುಹೋಯಿತು. ಅವರ ಬಗ್ಗೆ ಯೋಚಿಸುವಾಗ ನನ್ನ ಹಾಗೂ ಕೆಲ ಸ್ನೇಹಿತರ ತೋಟದಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಒಂದಷ್ಟುಬಂಗಾಳಿ-ಅಸ್ಸಾಮಿಗಳ ನೆನಪಾಯಿತು. ಹಳ್ಳಿಗರೆಲ್ಲ ನಗರಕ್ಕೆ ವಲಸೆ ಹೋಗುತ್ತಿರುವುದರಿಂದ ನಮ್ಮ ರಾಜ್ಯದಲ್ಲುಂಟಾದ ಕೃಷಿ ಕಾರ್ಮಿಕರ ಕೊರತೆಯನ್ನು ಅವರು ತುಂಬುತ್ತಿದ್ದರು. ಅವರೆಲ್ಲ ಅಸ್ಸಾಂನಲ್ಲಿ ಮೂಲನಿವಾಸಿಗಳು ನಡೆಸಿದ ಹಿಂಸಾಚಾರದಿಂದ ತಪ್ಪಿಸಿಕೊಂಡು ಬಂದ ವಲಸಿಗ ಮುಸ್ಲಿಮರೆಂದು ನನಗಾಗ ಗೊತ್ತಿರಲಿಲ್ಲ. ಅವರು ಬಂಗಾಳಿ ಮಾತನಾಡುತ್ತಿದ್ದರು. ಹಾಗಾಗಿ ಭಾರತೀಯರು ಹೌದೋ ಅಲ್ಲವೋ ತಿಳಿಯುತ್ತಿರಲಿಲ್ಲ.

ಆಗ ಬಂದವರೆಲ್ಲ ಮರಳಿ ಹೋಗಿದ್ದರು

ಅಸ್ಸಾಂನಲ್ಲೀಗ ಲಕ್ಷಾಂತರ ಜನರ ಭವಿಷ್ಯ ರಾಜಕೀಯದ ಕೆಸರಿನಲ್ಲಿ ಹೂತುಹೋಗುತ್ತಿರುವಾಗ ನನಗೆ ಬಾಂಗ್ಲಾ ಯುದ್ಧದ ನೆನಪಾಗುತ್ತದೆ. ನಾನಾಗ ಸೇನೆಯಲ್ಲಿದ್ದೆ. 1971ರ ಡಿಸೆಂಬರ್‌ 3ರಿಂದ ಎರಡು ವಾರ ನಡೆದ ಆ ಯುದ್ಧಕ್ಕಾಗಿ ಮೂರು ತಿಂಗಳು ಬಾಂಗ್ಲಾದೇಶಕ್ಕೆ ಹೋಗಿದ್ದೆ. ಭಾರತ ಆ ಯುದ್ಧದಲ್ಲಿ ಗೆದ್ದಿತ್ತು. ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ನಾನು ತರಬೇತಿ ಪಡೆಯುತ್ತಿದ್ದಾಗ ಬಾಂಗ್ಲಾ ಯುದ್ಧ ಶುರುವಾಗಿತ್ತು. ಹೀಗಾಗಿ ತರಬೇತಿ ಮೊಟಕುಗೊಳಿಸಿ ನಮ್ಮ ರೆಜಿಮೆಂಟ್‌ ಜೊತೆಗೆ ಯುದ್ಧಕ್ಕೆ ಧುಮುಕಿದ್ದೆ. ಆಗ ಪೂರ್ವ ಪಾಕಿಸ್ತಾನವೆಂದು ಕರೆಸಿಕೊಳ್ಳುತ್ತಿದ್ದ ಈಗಿನ ಬಾಂಗ್ಲಾದೇಶದ ಒಳಗೊಳಗೆ ನಾವು ಹೋಗುತ್ತಿದ್ದಂತೆ ಆ ಕಡೆಯಿಂದ ಭಾರತದ ಕಡೆಗೆ ನಿರಾಶ್ರಿತರು ಸಾಗರೋಪಾದಿಯಲ್ಲಿ ಬರುತ್ತಿದ್ದರು. ಪಾಕಿಸ್ತಾನಿ ಸೇನೆಯ ದೌರ್ಜನ್ಯಕ್ಕೆ ಹೆದರಿ ಕಡಿಮೆಯೆಂದರೂ ಒಂದು ಕೋಟಿ ಜನ ಭಾರತಕ್ಕೆ ವಲಸೆ ಬಂದಿದ್ದನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಅವರಲ್ಲಿ ಹೆಚ್ಚಿನವರು ಮನೆ-ಮಠದ ಜೊತೆಗೆ ಹೆಂಡತಿ ಮಕ್ಕಳನ್ನೂ ತೊರೆದು ಬಂದಿದ್ದರು. ಏಕೆಂದರೆ ಹೆಂಡತಿ ಮಕ್ಕಳನ್ನು ಪಾಕ್‌ ಸೇನೆ ಹಿಡಿದಿಟ್ಟುಕೊಂಡಿತ್ತು.

ಕಾಯ್ದೆ ವಿರೋಧಿಸುವ ಪೌರರು: ಆಂಬುಲೆನ್ಸ್‌ಗೆ ದಾರಿಬಿಟ್ಟ ಜಾಮಿಯಾ ಪ್ರತಿಭಟನಾಕಾರರು!

ಬಹುಶಃ ಅದು 6ರಿಂದ 12 ತಿಂಗಳಿನಷ್ಟುಕಡಿಮೆ ಅವಧಿಯಲ್ಲಿ ನಡೆದ ಜಗತ್ತಿನ ಅತಿದೊಡ್ಡ ವಲಸೆಗಳಲ್ಲೊಂದು. ಆಗ ಇಂದಿರಾ ಗಾಂಧಿ ಪ್ರಧಾನಿ. ಅವರು ಪೂರ್ವ ಪಾಕಿಸ್ತಾನೀಯರನ್ನು ಪಾಕಿಸ್ತಾನದ ಮಿಲಿಟರಿ ಸರ್ವಾಧಿಕಾರಿಗಳ ಹಿಡಿತದಿಂದ ಬಿಡಿಸಲು ಪಾಕ್‌ ಮೇಲೆ ಯುದ್ಧ ಸಾರಿದ್ದರು. ಪರಿಣಾಮವಾಗಿ ಬಾಂಗ್ಲಾದೇಶ ರಚನೆಯಾಯಿತು. ಆ ವೇಳೆ ಬಾಂಗ್ಲಾದೇಶದ ಗಡಿಯಲ್ಲಿ ಭಾರತದೊಳಗೆ ಸಾವಿರಾರು ನಿರಾಶ್ರಿತರ ಕ್ಯಾಂಪ್‌ಗಳಿದ್ದವು. ಅಲ್ಲಿದ್ದವರಿಗೆಲ್ಲ ಭಾರತ ಸರ್ಕಾರ ಆಹಾರ, ಆಶ್ರಯ ನೀಡಿತ್ತು. ಪಾಶ್ಚಾತ್ಯ ದೇಶಗಳ ನೆರವು ಇಲ್ಲದೆ, ತನ್ನದೇ ಆರ್ಥಿಕತೆ ಸಂಕಷ್ಟದಲ್ಲಿದ್ದರೂ ಭಾರತ ಆ ನಿರಾಶ್ರಿತರಿಗೆ ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಮೇಘಾಲಯ ಹಾಗೂ ತ್ರಿಪುರಾದಲ್ಲಿ ನೆಲೆ ಕರುಣಿಸಿತ್ತು. ಆ ರಾಜ್ಯಗಳ ಸ್ಥಳೀಯರು ಕೂಡ ವಲಸಿಗರಿಗೆ ನೆರವಾಗಿದ್ದರು. ಯುದ್ಧ ಮುಗಿದ ನಂತರ ಹೆಚ್ಚುಕಮ್ಮಿ ಅಷ್ಟೂವಲಸಿಗರು ಬಾಂಗ್ಲಾದೇಶಕ್ಕೆ ಮರಳಿಹೋದರು.

ವಲಸೆ ಅಸ್ಸಾಂಗೆ ಸೀಮಿತ ವಿವಾದವಲ್ಲ

ಅಸ್ಸಾಂನ ವಲಸಿಗರ ವಿವಾದ ಅತ್ಯಂತ ಸಂಕೀರ್ಣ ಹಾಗೂ ದಶಕಗಳಷ್ಟುಹಳೆಯ ವಿವಾದ. 1979ರಿಂದ 1985ರವರೆಗೆ ಅಲ್ಲಿ ಅಕ್ರಮ ವಲಸಿಗರನ್ನೆಲ್ಲ ಧರ್ಮಾತೀತವಾಗಿ ಗಡೀಪಾರು ಮಾಡಬೇಕೆಂದು ದೊಡ್ಡ ಹೋರಾಟ ನಡೆದಿತ್ತು. ಹಾಗಂತ ಇದು ಅಸ್ಸಾಂಗೆ ಸೀಮಿತ ವಿಚಾರವೂ ಅಲ್ಲ. ಮಹಾರಾಷ್ಟ್ರದಲ್ಲಿ ಶಿವಸೇನೆಯವರು ಬಿಹಾರ ಮತ್ತು ಉತ್ತರ ಪ್ರದೇಶದ ಕಾರ್ಮಿಕರನ್ನು ಹೊರಹಾಕಬೇಕೆಂದು ದಶಕಗಳ ಹಿಂದೆ ಹೋರಾಟ ನಡೆಸಿದ್ದರು. ಮರಾಠ ರಾಜರು ಕೊಡಗು ಹಾಗೂ ತಮಿಳುನಾಡನ್ನು ಶತಮಾನಗಳ ಹಿಂದೆ ಆಳಿದ್ದರಿಂದ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಮರಾಠಿಗರಿದ್ದಾರೆಂಬುದು ಅವರಿಗೆ ಬಹುಶಃ ನೆನಪಿರಲಿಲ್ಲ. ಬೆಂಗಳೂರಿನಲ್ಲೂ ಕನ್ನಡಿಗರಿಗಿಂತ ಹೊರರಾಜ್ಯದವರೇ ಹೆಚ್ಚಿದ್ದಾರೆಂದು ಆಗಾಗ ಕೂಗೇಳುತ್ತದೆ.

ಪೌರತ್ವ ಕಾಯ್ದೆ ತೀವ್ರ ವಿರೋಧ: ಬೆಳಗಾವಿಯಲ್ಲಿ ಕಲ್ಲು ತೂರಾಟ, ಪ್ರಕ್ಷುಬ್ಧ ವಾತಾವರಣ

ಮಾನವನ ನೈಸರ್ಗಿಕ ಗುಣ ವಲಸೆ!

ಮಾನವಶಾಸ್ತ್ರಜ್ಞರು ಹಾಗೂ ವಿಜ್ಞಾನಿಗಳ ಪ್ರಕಾರ ಮೊದಲ ಮನುಷ್ಯ ಹುಟ್ಟಿದ್ದು ಆಫ್ರಿಕಾದಲ್ಲಿ. ಅಲ್ಲಿಂದ ಮಾನವ ಸಂತಾನ ಬೆಳೆಯುತ್ತಾ ಬೇರೆ ಬೇರೆ ದಿಕ್ಕಿಗೆ ಚದುರಿತು. ಹೀಗಾಗಿ ಇಂದು ಜಗತ್ತಿನಲ್ಲಿರುವ ಎಲ್ಲರೂ ವಲಸಿಗರೇ. ಹಕ್ಕಿಗಳು ವಲಸೆ ಹೋಗುತ್ತವೆ. ಮೀನುಗಳು, ಆಮೆಗಳು ಖಂಡಾಂತರ ವಲಸೆ ಹೋಗುತ್ತವೆ. ಚಿಟ್ಟೆಗಳು ಕೆನಡಾ ಹಾಗೂ ಅಮೆರಿಕದಿಂದ ಮೆಕ್ಸಿಕೋಗೆ 3000ಕ್ಕೂ ಹೆಚ್ಚು ಮೈಲು ವಲಸೆ ಹೋಗುತ್ತವೆ. ಮನುಷ್ಯ ಕೂಡ ಮೂಲತಃ ಅಲೆಮಾರಿ. ಲಭ್ಯ ದಾಖಲೆಗಳ ಪ್ರಕಾರ 50 ಸಾವಿರ ವರ್ಷಗಳಷ್ಟುಹಿಂದೆಯೇ ಮನುಷ್ಯ ಹೊಸ ಹೊಸ ಭೂಖಂಡ ಹಾಗೂ ಮೇವು ಹುಡುಕಿಕೊಂಡು ವಲಸೆ ಹೋಗುತ್ತಿದ್ದ. ಹೀಗಿರುವಾಗ ಯಾರು ವಲಸಿಗರು ಮತ್ತು ಯಾರು ಮೂಲನಿವಾಸಿಗಳು ಎಂಬುದನ್ನು ಕಂಡುಹಿಡಿಯಲು ನೀವು ಎಷ್ಟುಹಿಂದಕ್ಕೆ ಹೋಗುತ್ತೀರಿ? ಈ ಪ್ರಶ್ನೆಯನ್ನು ಯಾರಿಗೆ ಕೇಳುತ್ತೀರಿ ಎಂಬುದು ಮುಖ್ಯ.

ಡೊನಾಲ್ಡ್‌ ಟ್ರಂಪ್‌ಗೆ ಕೇಳಿದರೆ ತಮ್ಮ ಈಗಿನ (ಮೂರನೇ) ಹೆಂಡತಿ ಪೂರ್ವ ಯುರೋಪ್‌ನಿಂದ ಅಮೆರಿಕಕ್ಕೆ ವಲಸೆ ಬಂದ ನಂತರ ಬಂದವರೆಲ್ಲರೂ ಅಕ್ರಮ ವಲಸಿಗರು ಎನ್ನಬಹುದು. ರೆಡ್‌ ಇಂಡಿಯನ್‌ಗಳಿಗೆ ಕೇಳಿದರೆ ಟ್ರಂಪ್‌ ಹಾಗೂ ಅವರ ಪೂರ್ವಜರು ನಮ್ಮ ಭೂಮಿಯನ್ನು ಕಿತ್ತುಕೊಂಡ ವಲಸಿಗರು ಎನ್ನುತ್ತಾರೆ. ಅಮೆರಿಕ ಮತ್ತು ಆಸ್ಪ್ರೇಲಿಯಾದಲ್ಲಿರುವ ಬಿಳಿಯರೆಲ್ಲರೂ ಅಲ್ಲಿನ ರೆಡ್‌ ಇಂಡಿಯನ್‌ಗಳು ಮತ್ತು ಎಸ್ಕಿಮೋ ಮೂಲನಿವಾಸಿಗಳಿಂದ ಭೂಮಿ ಕಿತ್ತುಕೊಂಡ ವಲಸಿಗರೇ. ಭಾರತ ಕೂಡ ಮೂಲನಿವಾಸಿಗಳಿಗೆ ಸೇರಿದ್ದು. ಕರ್ನಾಟಕದಲ್ಲಿ ದಲಿತರನ್ನು ಆದಿ ಕರ್ನಾಟಕ ಜನಾಂಗ ಎನ್ನುತ್ತಾರೆ. ತಮಿಳುನಾಡು ಹಾಗೂ ಇತರ ರಾಜ್ಯಗಳ ಮೂಲನಿವಾಸಿಗಳನ್ನು ಆದಿವಾಸಿಗಳು ಎನ್ನುತ್ತಾರೆ. ಯಾವ ಧರ್ಮಕ್ಕೂ ಸೇರದ ಬುಡಕಟ್ಟು ಪಂಗಡಗಳು ನಮ್ಮಲ್ಲಿ ಸಾಕಷ್ಟಿವೆ. ಅವರನ್ನು ಬಿಟ್ಟು ಇನ್ನುಳಿದ ನಾವೆಲ್ಲ - ಗೌಡರು, ಬ್ರಾಹ್ಮಣರು, ಲಿಂಗಾಯತರು, ಮರಾಠಿಗರು, ಮಾರ್ವಾಡಿಗಳು, ಜೈನರು, ಬನಿಯಾಗಳು, ಜಾಟರು, ಗುಜ್ಜರ್‌ಗಳು, ವೈಷ್ಣವರು, ಕ್ಷತ್ರಿಯರು - ಹೊರಗಿನಿಂದ ಬಂದ ಆರ್ಯನ್ನರು. ನಮಗಿಂತ ಮೊದಲೇ ಇಲ್ಲಿದ್ದ ದ್ರಾವಿಡರು ಹಾಗೂ ಆದಿವಾಸಿಗಳ ಕಣ್ಣಿನಲ್ಲಿ ನಾವೆಲ್ಲರೂ ವಲಸಿಗರು.

ಪ್ರತಿಭಟನೆ ಕಾವಿನಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಿದ ಜಾಮಿಯಾ ವಿದ್ಯಾರ್ಥಿಗಳು!

ವಲಸಿಗರಿಂದ ಪ್ರಯೋಜನವೂ ಇದೆ

ವಲಸಿಗರನ್ನು ಸ್ವಾಗತಿಸುವ ಎಲ್ಲ ದೇಶಗಳೂ ಮುಕ್ತ ಸಮಾಜವನ್ನೂ, ಹೊಸ ಐಡಿಯಾಗಳನ್ನೂ ಪಡೆದುಕೊಳ್ಳುವ ಮೂಲಕ ಶ್ರೀಮಂತವಾಗಿವೆ. ವಲಸಿಗರು ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಅವರು ಧೈರ್ಯವಂತರು ಮತ್ತು ಸಾಹಸಿಗರು. ಆರ್ಥಿಕತೆಗೆ ಅವರ ಕೊಡುಗೆ ದೊಡ್ಡದು. ಅಮೆರಿಕ ಅಷ್ಟೊಂದು ಅಭಿವೃದ್ಧಿ ಹೊಂದಲು ಕಾರಣ ವಲಸಿಗರು. ‘ವಲಸಿಗರು ಕಟ್ಟಿದ ದೇಶ ಅಮೆರಿಕ’ ಎಂದು ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಹೇಳಿದ್ದರು.

ಭಾರತದ ನಾಗರಿಕತೆ ಬಹಳ ಶ್ರೇಷ್ಠ ಎನ್ನುವುದೇಕೆ ಗೊತ್ತಾ? ನಾವು ಆರ್ಯನ್ನರಿಂದ ಹಿಡಿದು ಗ್ರೀಕರವರೆಗೆ, ನಂತರ ಮೊಘಲರು, ಬ್ರಿಟಿಷರು, ಫ್ರೆಂಚರು, ಡಚ್ಚರು, ಪೋರ್ಚುಗೀಸರು ಹೀಗೆ ಎಲ್ಲರ ದಾಳಿಯನ್ನೂ ಜೀರ್ಣಿಸಿಕೊಂಡು, ಕೊನೆಗೆ ನಮ್ಮ ಮೂಲಸತ್ವವನ್ನು ಉಳಿಸಿಕೊಂಡು ಬೆಳೆದಿದ್ದೇವೆ.

ತುಷ್ಟೀಕರಣದ ಬಗ್ಗೆ ಜನರಿಗೆ ಹೆದರಿಕೆ

ಮತ್ತೆ ಅಸ್ಸಾಂ, ತ್ರಿಪುರಾ, ಮೇಘಾಲಯದ ವಿಷಯಕ್ಕೆ ಬಂದರೆ, ಹಿಂದೆ ಯುದ್ಧದ ವೇಳೆ ಲಕ್ಷಾಂತರ ಬಾಂಗ್ಲಾ ವಲಸಿಗರಿಗೆ ಆಶ್ರಯ ನೀಡಿದ್ದ ರಾಜ್ಯಗಳಿಗೆ ಈಗ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮತ್ತು ವಲಸಿಗರ ಬಗ್ಗೆ ಏಕೆ ಇದ್ದಕ್ಕಿದ್ದಂತೆ ಹೆದರಿಕೆ ಹುಟ್ಟಿದೆ? ರಾಜಕಾರಣಿಗಳು ಮತಬ್ಯಾಂಕ್‌ ರಾಜಕೀಯಕ್ಕೆ ಇದನ್ನು ಬಳಸಿಕೊಳ್ಳುತ್ತಿದ್ದಾರೆಂದೇ? ಏಕೆಂದರೆ ಮನುಷ್ಯನ ಪ್ರಕೃತಿ ಅಷ್ಟುಬೇಗ ಬದಲಾಗಿರಲಿಕ್ಕೆ ಸಾಧ್ಯವಿಲ್ಲ.

ದಶಕದ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌, ಎಡಪಕ್ಷಗಳೂ ಸೇರಿದಂತೆ ಇನ್ನಿತರ ಕೆಲ ಪ್ರಾದೇಶಿಕ ಪಕ್ಷಗಳು ಮತಬ್ಯಾಂಕ್‌ಗಾಗಿ ಮುಸ್ಲಿಮರ ತುಷ್ಟೀಕರಣ ನಡೆಸಿದ್ದರಿಂದ ಸ್ಥಳೀಯರಲ್ಲಿ ಅಭದ್ರತೆ ಕಾಡತೊಡಗಿತ್ತು. ಈಗ ಬಿಜೆಪಿಯ ಅಧಿಕಾರದಲ್ಲಿ ಹಿಂದೂಗಳ ತುಷ್ಟೀಕರಣಕ್ಕಾಗಿ ಅದರ ವಿರುದ್ಧ ಪ್ರಕ್ರಿಯೆ ನಡೆಯುತ್ತಿರುವ ಶಂಕೆ ಜನರಲ್ಲಿ ಮೂಡುತ್ತಿದೆ. ಶೇ.70ರಷ್ಟುರಾಜ್ಯಗಳು ಪ್ರಾದೇಶಿಕ ಪಕ್ಷಗಳ ಹಿಡಿತದಲ್ಲಿರುವಾಗ ಅವುಗಳ ಸಹಕಾರವಿಲ್ಲದೆ ಕೇಂದ್ರ ಸರ್ಕಾರ ವಲಸಿಗರನ್ನು ಹೊರಹಾಕುವ ಈ ಅಗಾಧ ಕಸರತ್ತಿನಲ್ಲಿ ಹೇಗೆ ಯಶಸ್ವಿಯಾಗುತ್ತದೆ?

‘ಕೈ’ಗೆ ಮೋದಿ ಸವಾಲ್‌!: ಎರಡು ಪಂಥಾಹ್ವಾನ ನೀಡಿದ ಪ್ರಧಾನಿ!

ವಿದೇಶದಲ್ಲಿ ಭಾರತೀಯರಿಗೂ ಹೀಗಾದರೆ?!

ದೇಶದಲ್ಲಿ ಪ್ರಜೆಗಳ ಪಟ್ಟಿಇರಬಾರದು ಅಥವಾ ವಲಸಿಗರ ಗಣತಿ ನಡೆಸಬಾರದು ಎಂಬುದು ಇದರರ್ಥವಲ್ಲ. ಈಗ ನಡೆಸುತ್ತಿರುವ ಕಸರತ್ತಿನ ಬದಲು, ಪ್ರತ್ಯೇಕ ಕಾಯ್ದೆಯ ಮೂಲಕ, ಅಪರಾಧ ಎಸಗುವ ವಲಸಿಗರನ್ನು ಪ್ರತ್ಯೇಕಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಒಳಿತು.ಪೌರತ್ವ ರದ್ದುಪಡಿಸುವುದು ನೋಟು ರದ್ದುಪಡಿಸಿದಷ್ಟು ಸುಲಭವಲ್ಲ. ಅದು ಬಹಳ ಸಂಕೀರ್ಣ ಹಾಗೂ ಗೋಜಲಿನ ಕೆಲಸ. ಹೀಗಾಗಿ ಸರ್ಕಾರ ಕೂಡಲೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಈಗಿರುವ ರೂಪದಲ್ಲಿ ಹಿಂಪಡೆದು, ಎಲ್ಲಾ ಸಮುದಾಯಗಳ ಹಿತ ರಕ್ಷಿಸುವ ರೀತಿಯಲ್ಲಿ ಮತ್ತು ಈಗಾಗಲೇ ದೇಶದಲ್ಲಿ ನೆಲೆಸಿರುವ ಯಾರನ್ನೂ ಹೊರಹಾಕುವುದಿಲ್ಲ ಎಂಬ ಭರವಸೆಯೊಂದಿಗೆ ಹೊಸ ಮಸೂದೆ ತರಬೇಕು. ಅದಕ್ಕೂ ಮುನ್ನ ಪ್ರತಿಪಕ್ಷಗಳು, ಎಲ್ಲ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಹಾಗೂ ಎಲ್ಲ ಪ್ರಮುಖ ಜನಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆಗ ಕಾಯ್ದೆಯನ್ನು ಸುಲಭವಾಗಿ ಹಾಗೂ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯ. ಯಾವ ದೇಶವೂ ವಲಸಿಗರನ್ನು ವಾಪಸ್‌ ಪಡೆಯಲು ಸಿದ್ಧವಿಲ್ಲದೆ ಇರುವಾಗ ಎಲ್ಲಿಗೆ ತಾನೆ ಯಾರನ್ನಾದರೂ ಗಡೀಪಾರು ಮಾಡಲು ಸಾಧ್ಯ? ಟ್ರಿನಿಡಾಡ್‌, ಟೊಬಾಗೋ, ಫಿಜಿ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ಶೇ.40ರಷ್ಟುಭಾರತೀಯರಿದ್ದಾರೆ. ಶ್ರೀಲಂಕಾದಲ್ಲಿ ತಮಿಳರಿದ್ದಾರೆ. ಮಲೇಷ್ಯಾ, ಸಿಂಗಾಪುರ, ಆಫ್ರಿಕಾ, ಬ್ರಿಟನ್‌, ಅಮೆರಿಕ, ಕೆನಡಾಗಳಲ್ಲಿ ಶೇ.2ರಿಂದ ಶೇ.20ರಷ್ಟುಭಾರತೀಯರಿದ್ದಾರೆ. ಆ ದೇಶಗಳು ನಮ್ಮವರನ್ನೂ ಹೀಗೇ ನಡೆಸಿಕೊಳ್ಳಬೇಕೆ?

ಸಂಸತ್ತಿನ ಪ್ರವೇಶದ್ವಾರದ ಮೇಲೆ ಕೆತ್ತಿರುವ ಸಂಸ್ಕೃತದ ಮಹಾ ಉಪನಿಷತ್‌ನ ‘ವಸುಧೈವ ಕುಟುಂಬಕಂ’ ವಾಕ್ಯವನ್ನು ಸರ್ಕಾರ ಹಾಗೂ ಎಲ್ಲಾ ರಾಜಕಾರಣಿಗಳಿಗೆ ಮತ್ತೊಮ್ಮೆ ನೆನಪಿಸಬೇಕಿದೆ. ಜಗತ್ತೇ ಒಂದು ಕುಟುಂಬ ಎಂಬುದು ಹಿಂದೂ ಧರ್ಮದ ಸಾರ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರು ಆಗಾಗ ಹೇಳುವ ವಾಕ್ಯವೂ ಇದೇ ಅಲ್ಲವೇ? ಈಗ ಈ ಸಿದ್ಧಾಂತವನ್ನು ಹೇಗೆ ಮರೆಯೋಣ? ಮರೆತರೆ ಹಾನಿ ಮತ್ತು ಅಪಾಯವಿರುವುದು ನಮಗೇ.

ಕೋಲ್ಕತ್ತಾ ಬೀದಿಯಲ್ಲಿ ಸಾವಿರಾರು ಜನರ ಮಧ್ಯೆ ದೀದಿ: CAA ವಿರುದ್ಧ ಪ್ರತಿಭಟನೆ!

Follow Us:
Download App:
  • android
  • ios