ನವದೆಹಲಿ(ಡಿ.13): ದೇಶದಲ್ಲಿ ಬಲವಂತದ ಕುಟುಂಬ ಯೋಜನೆ ಜಾರಿಗೆ ತರುವುದಿಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ, ಒಂದು ದಂಪತಿಗೆ ಇಂತಿಷ್ಟೇ ಮಗು ಇರಬೇಕು ಎಂಬ ಬಲವಂತದ ನೀತಿಯನ್ನು ತಂದರೆ ಅದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ದೇಶದಲ್ಲಿ ಜನಸಂಖ್ಯೆ ಮಿತಿಮೀರುತ್ತಿದ್ದು, ಕುಟುಂಬಕ್ಕೆ ಎರಡೇ ಮಗು ಎಂಬ ಕಡ್ಡಾಯ ನೀತಿ ಜಾರಿಗೆ ತರಬೇಕೆಂದು ಕೋರಿ ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿಕುಮಾರ್‌ ಉಪಾಧ್ಯಾಯ ಎಂಬುವರು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ವೇಳೆ ಅಫಿಡವಿಟ್‌ ಸಲ್ಲಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಕುಟುಂಬ ಯೋಜನೆಯೆಂಬುದು ಸ್ವಯಂಪ್ರೇರಣೆಯ ಯೋಜನೆಯಾಗಿದ್ದು, ದಂಪತಿಗೆ ತಮ್ಮಿಷ್ಟದಂತೆ ಕುಟುಂಬದ ಗಾತ್ರ, ಮಕ್ಕಳ ಸಂಖ್ಯೆ, ಕುಟುಂಬ ಯೋಜನೆ ಮುಂತಾದವುಗಳನ್ನು ನಿರ್ಧರಿಸುವ ಸ್ವಾತಂತ್ರ್ಯ ನೀಡಲಾಗಿದೆ. ಅದರಲ್ಲಿ ಯಾವುದೇ ರೀತಿಯ ಬಲವಂತ ಇರುವುದಿಲ್ಲ. ಕಡ್ಡಾಯ ಕುಟುಂಬ ಯೋಜನೆಯ ನೀತಿ ಜಾರಿಯಾಗಿದ್ದ ದೇಶಗಳಲ್ಲೆಲ್ಲ ಅದು ಪ್ರಯೋಜನಕ್ಕಿಂತ ಹೆಚ್ಚು ನಷ್ಟವನ್ನೇ ಉಂಟುಮಾಡಿದೆ. ಹೀಗೆ ಮಾಡುವುದರಿಂದ ದೇಶದ ಜನಲಕ್ಷಣದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ತಿಳಿಸಿದೆ.

ದೇಶದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೀತಿ 2000ರಿಂದ ಹಾಗೂ ರಾಷ್ಟ್ರೀಯ ಆರೋಗ್ಯ ನೀತಿ 2017ರಿಂದ ಜಾರಿಯಲ್ಲಿದೆ. ಇವುಗಳಡಿ ಒಟ್ಟು ಫಲವಂತಿಕೆಯ ದರ (ಟಿಎಫ್‌ಆರ್‌)ವನ್ನು 3.2ರಿಂದ 2.1ಕ್ಕೆ ಇಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಅದರಂತೆ 2018ರಲ್ಲೇ ಟಿಎಫ್‌ಆರ್‌ ದರ 2.2ಕ್ಕೆ ಇಳಿಕೆಯಾಗಿದೆ. ಹೀಗಾಗಿ ಕಡ್ಡಾಯ ಜನಸಂಖ್ಯಾ ನಿಯಂತ್ರಣ ನೀತಿ ಅಗತ್ಯವಿಲ್ಲ. ಮೇಲಾಗಿ, ಆರೋಗ್ಯಕ್ಕೆ ಸಂಬಂಧಿಸಿದ ನೀತಿಗಳನ್ನು ರೂಪಿಸುವ ಅಧಿಕಾರ ರಾಜ್ಯಗಳ ಬಳಿಯಿದ್ದು, ಕೇಂದ್ರ ಸರ್ಕಾರ ಕೇವಲ ಪ್ರೋತ್ಸಾಹವನ್ನಷ್ಟೇ ನೀಡುತ್ತದೆ ಎಂದೂ ಅಫಿಡವಿಟ್‌ನಲ್ಲಿ ಹೇಳಲಾಗಿದೆ.