ವಿಜಯವಾಡ[ಡಿ.29]: ಅಮರಾವತಿಯನ್ನು ಆಂಧ್ರಪ್ರದೇಶ ರಾಜಧಾನಿ ಎಂದು ಘೋಷಣೆ ಮಾಡುವ ಮೊದಲೇ ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಆ ಪಕ್ಷದ ಮಾಜಿ ಸಚಿವರು ಹಾಗೂ ಮುಖಂಡರು ಅಲ್ಲಿ ಭಾರಿ ಪ್ರಮಾಣದ ಭೂಮಿಯನ್ನು ಖರೀದಿಸಿದ್ದರು ಎಂಬ ರೋಚಕ ಮಾಹಿತಿ ಬೆಳಕಿಗೆ ಬಂದಿದೆ. ಸಚಿವ ಸಂಪುಟ ಉಪಸಮಿತಿ ತನಿಖೆಯಲ್ಲಿ ಈ ಅಂಶ ಗೊತ್ತಾಗುತ್ತಿದ್ದಂತೆ, ಸಿಬಿಐ ತನಿಖೆಗೆ ಜಗನ್ಮೋಹನ ರೆಡ್ಡಿ ನೇತೃತ್ವದ ಸರ್ಕಾರ ಒಲವು ತೋರಿದೆ.

ಈ ಅಕ್ರಮದ ಕುರಿತು ಕಾನೂನು ಅಭಿಪ್ರಾಯ ಪಡೆದ ಬಳಿಕ ಲೋಕಾಯುಕ್ತರಿಂದ ತನಿಖೆ ಮಾಡಿಸಬೇಕೆ ಅಥವಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆ ಎಂಬ ಕುರಿತು ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರಿಂದಾಗಿ ಈಗಾಗಲೇ ಅಧಿಕಾರ ಕಳೆದುಕೊಂಡು ಹಿನ್ನಡೆ ಅನುಭವಿಸಿರುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಬಹುದೊಡ್ಡ ಭೂಕಂಟಕ ಎದುರಾಗುವ ಸಾಧ್ಯತೆ ಇದೆ.

2014ರ ಡಿಸೆಂಬರ್‌ನಲ್ಲಿ ಅಮರಾವತಿಯನ್ನು ಆಂಧ್ರಪ್ರದೇಶ ರಾಜಧಾನಿ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಅದಕ್ಕೂ 5 ತಿಂಗಳು ಮೊದಲೇ ಅಂದರೆ ಜುಲೈನಲ್ಲಿ ಚಂದ್ರಬಾಬು ನಾಯ್ಡು ಅವರ ಕುಟುಂಬ ಸದಸ್ಯರ ಒಡೆತನದ ಕಂಪನಿಗಳು, ತೆಲುಗುದೇಶಂ ನಾಯಕರು ಭಾರಿ ಪ್ರಮಾಣದಲ್ಲಿ ಭೂಮಿಯನ್ನು ಖರೀದಿಸಿಟ್ಟುಕೊಂಡಿದ್ದರು. ಈ ಕುರಿತಾದ ನೋಂದಣಿ ದಾಖಲೆಗಳು ಲಭಿಸಿವೆ ಎಂದು ಸಚಿವ ಸಂಪುಟ ಉಪಸಮಿತಿ ಶುಕ್ರವಾರ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

ಅಮರಾವತಿ ರಾಜಧಾನಿ ಘೋಷಣೆ ವೇಳೆ ಭಾರಿ ಪ್ರಮಾಣದ ‘ಒಳ ವ್ಯವಹಾರ’ (ಇನ್‌ಸೈಡರ್‌ ಟ್ರೇಡಿಂಗ್‌) ನಡೆದಿದೆ ಎಂಬ ಆರೋಪ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯನ್ನು ಜಗನ್‌ ರಚಿಸಿದ್ದರು. ತೆಲುಗುದೇಶಂ ನಾಯಕರು ತಮ್ಮ ಚಾಲಕರು, ಕೆಲಸಗಾರರ ಹೆಸರಿನಲ್ಲೂ ಭೂಮಿ ಖರೀದಿಸಿದ್ದಾರೆ ಎಂದು ಈ ಸಮಿತಿ ವರದಿಯಲ್ಲಿ ವಿವರಿಸಿದೆ.