ಆಟೋಮೊಬೈಲ್ ಕ್ಷೇತ್ರಕ್ಕೆ 26 ಸಾವಿರ ಕೋಟಿ ನೆರವು!
* ಟೆಲಿಕಾಂ, ವಾಹನ ಕ್ಷೇತ್ರಕ್ಕೆ ಕೇಂದ್ರದ ಬೂಸ್ಟರ್ ಡೋಸ್
* ಆಟೋಮೊಬೈಲ್ ಕ್ಷೇತ್ರಕ್ಕೆ 26 ಸಾವಿರ ಕೋಟಿ ನೆರವು
ನವದೆಹಲಿ(ಸೆ.16): ವಾಹನ, ವಾಹನ ಬಿಡಿಭಾಗಗಳು ಹಾಗೂ ಡ್ರೋನ್ ಉದ್ಯಮಗಳು ಭಾರತದಲ್ಲೇ ಉತ್ಪಾದನೆ ಹೆಚ್ಚಿಸಲು ನೆರವಾಗುವ ಉತ್ಪಾದನೆ ಆಧರಿತ ಪ್ರೋತ್ಸಾಹಧನ (ಪಿಎಲ್‌ಐ) ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಇದರ ಅನ್ವಯ ವಾಹನ ಹಾಗೂ ಡ್ರೋನ್ ಉದ್ಯಮಕ್ಕೆ 26,058 ಕೋಟಿ ರು. ನೆರವು ಲಭಿಸಲಿದೆ.
ಈ ನೆರವಿನಿಂದ ಭಾರತವು ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ವಾಹನ ಉತ್ಪಾದನೆ ಹಾಗೂ ಪೂರೈಕೆಯ ತಾಣವಾಗಿ ಹೊರಹೊಮ್ಮಲಿದೆ ಎಂದು ಸರ್ಕಾರ ತಿಳಿಸಿದೆ.
ಈ ಪ್ರೋತ್ಸಾಹಧನವನ್ನು ಮುಂದಿನ 5 ವರ್ಷದ ಮಟ್ಟಿಗೆ ನೀಡಲಾಗುವುದು. ಇದರಿಂದ ಆಟೋ ಉದ್ಯಮಕ್ಕೆ 42,500 ಕೋಟಿ ರು. ಹೊಸ ಬಂಡವಾಳ ಹರಿದುಬರಲಿದೆ. 2.3 ಲಕ್ಷ ಕೋಟಿ ರು.ಗೂ ಹೆಚ್ಚು ಮೊತ್ತದ ಉತ್ಪಾದನೆ ಆಗಲಿದೆ. 7.5 ಲಕ್ಷ ಹೆಚ್ಚುವರಿ ಉದ್ಯೋಗಾವಕಾಶ ಸೃಷ್ಟಿಆಗಲಿದೆ ಎಂದು ಸಂಪುಟ ಸಭೆಯ ಬಳಿಕ ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದರು. ಪ್ರೋತ್ಸಾಹಧನ ಹೋಜನೆಯು ಹೊಸ ಆಟೋಮೊಬೈಲ್ ಕಂಪನಿಗಳು ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ವಾಹನ ಉತ್ಪಾದನಾ ಕಂಪನಿಗಳಿಗೆ ಅನ್ವಯಿಸಲಿದೆ.
ಎರಡು ಬಗೆಯ ಯೋಜನೆ:
ಯೋಜನೆಯಲ್ಲಿ ಎರಡು ಬಗೆಗಳಿವೆ. ಮೊದಲನೆಯ ಬಗೆಯಾದ ‘ಒಇಎಂ’ ಪ್ರೋತ್ಸಾಹಧನ ಯೋಜನೆಯಲ್ಲಿ ಬ್ಯಾಟರಿ ಎಲೆಕ್ಟ್ರಿಕ್ ವಾಹನ ಹಾಗೂ ಹೈಡ್ರೋಜನ್ ಇಂಧನದ ವಾಹನಗಳ ಉತ್ಪಾದನೆಗೆ ನೆರವು ನೀಡಲಾಗುತ್ತದೆ. ಇದರಿಂದ ಸ್ವಚ್ಛ ಇಂಧನದ ಆಟೋಮೊಬೈಲ್ ಉದ್ದಿಮೆಗೆ ಉತ್ತೇಜನ ನೀಡಿದಂತಾಗುತ್ತದೆ.
ಎರಡನೆಯ ಬಗೆಯಾದ ಕಾಂಪೋನೆಂಟ್ ಚಾಂಪಿಯನ್ ಪ್ರೋತ್ಸಾಹಧನ ಯೋಜನೆಯಲ್ಲಿ ಸುಧಾರಿತ ಆಟೋಮೋಟಿವ್ ತಂತ್ರಜ್ಞಾನದ ವಾಹನ ಬಿಡಿಭಾಗ ಉತ್ಪಾದಕ ಕಂಪನಿಗಳಿಗೆ ನೆರವು ನೀಡಲಾಗುತ್ತದೆ. ಇವುಗಳಲ್ಲಿ ದ್ವಿಚಕ್ರ, ತ್ರಿಚಕ್ರ, ಪ್ರಯಾಣಿಕ ವಾಹನ ಹಾಗೂ ಟ್ರಾಕ್ಟರ್‌ಗಳು ಸೇರಿವೆ.
ಡ್ರೋನ್‌ಗೂ ನೆರವು:
ಡ್ರೋನ್ ಉದ್ಯಮಕ್ಕೆ ಪ್ರತ್ಯೇಕ ಪ್ರೋತ್ಸಾಹಧನ ಯೋಜನೆ ರೂಪಿಸಲಾಗಿದ್ದು, ಭವಿಷ್ಯದಲ್ಲಿ ಇವುಗಳ ಬಳಕೆ ಅಧಿಕವಾಗುವುದನ್ನು ಗಮನದಲ್ಲಿ ಇರಿಸಿಕೊಂಡು ಉತ್ತೇಜನ ನೀಡಲಾಗುತ್ತದೆ. ಇದರಿಂದ 5 ಸಾವಿರ ಕೋಟಿ ರು. ಬಂಡವಾಳ ಹರಿದುಬರಲಿದೆ. 1500 ಕೋಟಿ ರು.ನಷ್ಟುಮಾರಾಟ ಹೆಚ್ಚಲಿದೆ. 10 ಸಾವಿರ ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗಲಿವೆ.
ಯಾವ ವಲಯಕ್ಕೆ ಅನ್ವಯ?
ಎಲೆಕ್ಟ್ರಿಕ್, ಹೈಡ್ರೋಜನ್ ಚಾಲಿತ ವಾಹನ ಉತ್ಪಾದನೆ, ಸುಧಾರಿತ ವಾಹನ ಬಿಡಿಭಾಗ ಉತ್ಪಾದನೆ
ಯೋಜನೆಯ ಲಾಭಗಳು
* ಭಾರತದ ಉತ್ಪಾದನಾ ಸಾಮರ್ಥ್ಯ ಹೆಚ್ಚಳ
* ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಉತ್ತೇಜನ
* ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಹಕಾರಿ
* ಬಂಡವಾಳ ಹೂಡಿಕೆ, ಹೆಚ್ಚುವರಿ ಉದ್ಯೋಗ ಸೃಷ್ಟಿ
* 47,000 ಕೋಟಿ: ಹೆಚ್ಚುವರಿ ಬಂಡವಾಳ ಹೂಡಿಕೆ
* 7.5 ಲಕ್ಷ : ಒಟ್ಟಾರೆ 7.5 ಲಕ್ಷ ಉದ್ಯೋಗ ಸೃಷ್ಟಿ
* 2.3 ಲಕ್ಷ ಕೋಟಿ: ಮೊತ್ತದ ವಸ್ತುಗಳ ಉತ್ಪಾದನೆ