ಸಿಎಎ ಅನುಷ್ಠಾನಕ್ಕೆ ಪಾಕ್ ನಿರಾಶ್ರಿತ ಹಿಂದೂಗಳು ಹರ್ಷ: ಕೇರಳದಲ್ಲಿ ಜಾರಿ ಮಾಡಲ್ಲ ಎಂದ ಸಿಎಂ ಪಿಣರಾಯಿ
ದೆಹಲಿಯಲ್ಲಿ ನೆಲೆಸಿರುವ ಪಾಕಿಸ್ತಾನದ ನಿರಾಶ್ರಿತ ಹಿಂದೂಗಳು ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ಬಗ್ಗೆ ಸೋಮವಾರ ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ ಇದನ್ನು ಕೇರಳದಲ್ಲಿ ಜಾರಿ ಮಾಡಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ನವದೆಹಲಿ/ಕೋಲ್ಕತಾ: ದೆಹಲಿಯಲ್ಲಿ ನೆಲೆಸಿರುವ ಪಾಕಿಸ್ತಾನದ ನಿರಾಶ್ರಿತ ಹಿಂದೂಗಳು ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ಬಗ್ಗೆ ಸೋಮವಾರ ಹರ್ಷ ವ್ಯಕ್ತಪಡಿಸಿದ್ದಾರೆ. ನಾವು ಕೊನೆಗೂ ಭಾರತೀಯರು ಎಂದು ಕರೆಯಲ್ಪಡುತ್ತೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪಶ್ಚಿಮ ಬಂಗಾಳದ ಮತುವಾ ಸಮುದಾಯವು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಆದ ನಂತರ ಸಂಜೆ ಸಂಭ್ರಮಾಚರಣೆ ನಡೆಸಿತು. ಇದು ತಮ್ಮ ಎರಡನೇ ಸ್ವಾತಂತ್ರ್ಯ ದಿನ ಎಂದು ಬಾಂಗ್ಲಾ ಮೂಲದ ಮತುವಾ ಸಮುದಾಯ ಹೇಳಿಕೊಂಡಿದೆ.
ಸಿಎಎ ಜಾರಿಗೆ ಕಾಂಗ್ರೆಸ್, ಸಿಪಿಎಂ ತೀವ್ರ ವಿರೋಧ
ಪೌರತ್ವ ತಿದ್ದುಪಡಿ ಕಾಯ್ದೆ-2019 (ಸಿಎಎ) ಜಾರಿ ತಂದಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಹಾಗೂ ಸಿಪಿಎಂ ವಿರೋಧಿಸಿದ್ದು, ಕೇಂದ್ರ ಸರ್ಕಾರ ಚುನಾವಣೇಯನ್ನು ಧ್ರುವೀಕರಣ ಮಾಡುವ ಹುನ್ನಾರದಿಂದಲೇ ಚುನಾವಣೆ ಅವಧಿಯಲ್ಲಿ ಜಾರಿಗೆ ತಂದಿದೆ ಎಂದು ಆಕ್ರೋಶ ಹೊರಹಾಕಿವೆ. ಕೇರಳದಲ್ಲಿ ಇದನ್ನು ಜಾರಿ ಮಾಡಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಈ ಕುರಿತು ಟ್ವೀಟ್‌ನಲ್ಲಿ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್,ಕೇಂದ್ರ ಸರ್ಕಾರ ತಮಗೆ ಬೇಕಂತೆ ಕಾನೂನು ಜಾರಿ ಮಾಡಿದೆ. 2019ರಲ್ಲಿ ತಿದ್ದುಪಡಿ ತಂದ ಬಳಿಕ ಸುಖಾಸುಮ್ಮನೇ ತನ್ನ ಬಳಿ ಇರಿಸಿಕೊಂಡು, ಈಗ ಚುನಾವಣಾ ಹೊಸ್ತಿಲಿನಲ್ಲಿ ಜಾರಿಗೆ ತಂದು ಚುನಾವಣೆ ಧ್ರುವೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ವಿಶೇಷವಾಗಿ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಇದರ ಹುನ್ನಾರಕ್ಕೆ ಕೇಂದ್ರ ಸಿದ್ಧವಾಗಿದೆ ಎಂದು ರಮೇಶ್ ಕಿಡಿಕಾರಿದರು.
ಸಿಎಎ ಕೇರಳದಲ್ಲಿ ಜಾರಿ ಇಲ್ಲ- ಸಿಎಂ ಪಿಣರಾಯಿ
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಸಿದ್ಧವಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಣ್ಣೀರು ಸುರಿದಿದ್ದಾರೆ. ಸಿಎಎ ಜನರನ್ನು ಜಾತಿ ಧರ್ಮ ಆಧಾರದ ಮೇಲೆ ಭಾಗ ಮಾಡುತ್ತದೆ. ಅದನ್ನು ನಾವು ಕೇರಳದಲ್ಲಿ ಜಾರಿ ಮಾಡುವುದಿಲ್ಲ. ಇದರ ವಿರುದ್ಧ ಇಡೀ ಕೇರಳ ಒಗ್ಗಟ್ಟಾಗಿರುತ್ತದೆ ಎಂದು ವಿಜಯನ್ ಹೇಳಿದ್ದಾರೆ.