* ಪ್ರಯಾಗರಾಜ್‌ ಹಿಂಸೆ ಮಾಸ್ಟರ್‌ಮೈಂಡ್‌ ಮನೆ ನೆಲಸಮ* ಧ್ವಂಸದ ವೇಳೆ ಜಾವೇದ್‌ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪತ್ತೆ* ಸಮಾಜಘಾತಕರ ಆಸ್ತಿಗಷ್ಟೆ ಜೆಸಿಬಿ, ಬಡವರ ಮೇಲಲ್ಲ

ಪ್ರಯಾಗ್‌ರಾಜ್‌(ಜೂ.13): ಪ್ರವಾದಿ ಮೊಹಮ್ಮದರಿಗೆ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಮಾಡಿದ ಅವಹೇಳನ ಖಂಡಿಸಿ ಉತ್ತರ ಪ್ರದೇಶದಲ್ಲಿ ಹಿಂಸಾಚಾರ ನಡೆಸಿದವರ ಆಸ್ತಿಪಾಸ್ತಿಗಳ ಮೇಲೆ ಸತತ 2ನೇ ದಿನವೂ ಬುಲ್ಡೋಜರ್‌ಗಳು ಗರ್ಜಿಸಿವೆ. ಪ್ರಯಾಗ್‌ರಾಜ್‌ನಲ್ಲಿ ಹಿಂಸೆಯ ‘ಮಾಸ್ಟರ್‌ಮೈಂಡ್‌’ ಎಂದು ಹೇಳಲಾದ ಜಾವೇದ್‌ ಅಹ್ಮದ್‌ ಅಲಿಯಾಸ್‌ ‘ಪಂಪ್‌’ ಎಂಬಾತನ ‘ಅಕ್ರಮ ಮನೆ’ಯನ್ನು ಜೆಸಿಬಿ ಬಳಸಿ ಧ್ವಂಸಗೊಳಿಸಲಾಗಿದೆ.

ಶನಿವಾರ ಕಾನ್ಪುರ ಹಾಗೂ ಸಹಾರನ್‌ಪುರದಲ್ಲಿ ಗಲಭೆಕೋರರ ಕೆಲವು ಅಕ್ರಮ ಆಸ್ತಿಪಾಸ್ತಿಗಳನ್ನು ಬುಲ್ಡೋಜರ್‌ ಬಳಸಿ ಧ್ವಂಸ ಮಾಡಲಾಗಿತ್ತು. ಅದರ ಮರುದಿನವೇ ಪ್ರಯಾಗ್‌ರಾಜ್‌ನಲ್ಲಿ ಕಾರ್ಯಾಚರಣೆ ನಡೆದಿದೆ. ಹಿಂಸೆಯ ಮುಖ್ಯ ಸೂತ್ರಧಾರ ಎಂದು ಹೇಳಲಾದ ಜಾವೇದ್‌ ಅಹ್ಮದ್‌ನ ‘ಜೆಕೆ ಆಶಿಯಾನಾ’ ಹೆಸರಿನ ಕರೇಲಿ ಪ್ರದೇಶದಲ್ಲಿನ ಮನೆಯನ್ನು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬುಲ್ಡೋಜರ್‌ ಬಳಸಿ ಧ್ವಂಸಗೊಳಿಸಲಾಗಿದೆ.

‘ಧ್ವಂಸದ ವೇಳೆ ಅಕ್ರಮ ಶಸ್ತ್ರಾಸ್ತ್ರಗಳು ಜಾವೇದ್‌ ಮನೆಯಲ್ಲಿ ಪತ್ತೆಯಾಗಿವೆ’ ಎಂದು ಪೊಲೀಸರು ಹೇಳಿದ್ದಾರೆ.

ಆದರೆ, ಇದು ರಾಜಕೀಯ ಸೇಡಿಗೆ ನಡೆದ ಕಾರಾರ‍ಯಚರಣೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಪ್ರಯಾಗ್‌ರಾಜ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ‘ಪ್ರಾಧಿಕಾರದ ನಕ್ಷೆಗೆ ಅನುಗುಣವಾಗಿ ಮನೆ ನಿರ್ಮಾಣ ಆಗಿರಲಿಲ್ಲ. ಮೇ 10ರಂದೇ ಅಕ್ರಮ ನಿರ್ಮಾಣ ಎಂಬ ನೋಟಿಸ್‌ ನೀಡಲಾಗಿತ್ತು. ಮೇ 24ರಂದು ಸ್ಪಷ್ಟನೆ ನೀಡಬೇಕು ಎಂದೂ ಸೂಚಿಸಲಾಗಿತ್ತು. ಆದರೆ ಅಂದು ಜಾವೇದ್‌ ಆಗಲಿ ಅಥವಾ ಅವರ ವಕೀಲರಾಗಲಿ ಸ್ಪಷ್ಟನೆ ನೀಡಲು ಹಾಜರಾಗಲಿಲ್ಲ. ಹೀಗಾಗಿ ಮೇ 25ರಂದೇ ಧ್ವಂಸ ಕಾರಾರ‍ಯಚರಣೆಗೆ ಆದೇಶ ನೀಡಲಾಗಿತ್ತು. ಆ ಪ್ರಕಾರ ಈಗ ಜೆಸಿಬಿ ಬಳಸಿ ಮನೆ ಧ್ವಂಸಗೊಳಿಸಲಾಗಿದೆ’ ಎಂದಿದ್ದಾರೆ.

ಈ ನಡುವೆ ಸುದ್ದಿಸಂಸ್ಥೆ ಜತೆ ಮಾತನಾಡಿದ ಎಸ್‌ಪಿ ದಿನೇಶ್‌ ಕುಮಾರ್‌ ಸಿಂಗ್‌, ‘ಬೆಳಗ್ಗೆಯೇ ಜಾವೇದ್‌ ಮನೆಯವರು ತಮ್ಮೆಲ್ಲ ಸರಕುಗಳನ್ನು ಮನೆಯಿಂದ ಒಯ್ದರು. ಈಗ ಮನೆಯಲ್ಲಿ ಯಾರೂ ಇಲ್ಲ’ ಎಂದರು. ಧ್ವಂಸದ ಕಾರಣ ಭಾರೀ ಭದ್ರತೆಯನ್ನು ಸ್ಥಳದಲ್ಲಿ ಏರ್ಪಡಿಸಲಾಗಿತ್ತು. ಜಾವೇದ್‌ ಅಹ್ಮದ್‌ನನ್ನು ಈಗಾಗಲೇ ಬಂಧಿಸಲಾಗಿದೆ.

304 ಮಂದಿ ಸೆರೆ:

ಈ ನಡುವೆ ಉತ್ತರಪ್ರದೇಶದ ವಿವಿಧ ಭಾಗಗಳಲ್ಲಿ ಶುಕ್ರವಾರ ಪ್ರವಾದಿ ಅವಹೇಳನ ವಿರೋಧಿಸಿ ಹಿಂಸಾಚಾರ ನಡೆಸಿದ 304 ಮಂದಿಯನ್ನು ಈವರೆಗೆ ಬಂಧಿಸಲಾಗಿದೆ. ಇವರಲ್ಲಿ ಪ್ರಯಾಗರಾಜ್‌ನ 91, ಸಹಾರನ್‌ಪುರದ 71, ಹಾಥ್ರಸ್‌ನ 51, ಅಂಬೇಡ್ಕರ್‌ನಗರ ಹಾಗೂ ಮೊರಾದಾಬಾದ್‌ನ ತಲಾ 34, ಫಿರೋಜಾಬಾದ್‌ನ 15, ಅಲಿಗಢದ 6 ಹಾಗೂ ಜಲೌನ್‌ನ ಇಬ್ಬರಿದ್ದಾರೆ.

ಸಮಾಜಘಾತಕರ ಆದಾಯದ ಮೂಲ ಹಾಗೂ ಅಕ್ರಮ ನಿಧಿಗಳ ಬಗ್ಗೆ ಮಾಹಿತಿ ಕಲೆಹಾಕಬೇಕು. ಮಾಫಿಯಾ ಹಾಗೂ ಹಿಸ್ಟರಿಶೀಟರ್‌ಗಳ ಅಕ್ರಮ ಆಸ್ತಿಪಾಸ್ತಿಗಳ ಮೇಲೆ ಬುಲ್ಡೋಜರ್‌ ಕಾರ್ಯಾಚರಣೆ ನಡೆಸಬೇಕು. ಅಮಾಯಕ ಬಡವರ ಆಸ್ತಿಗೆ ಕೈ ಹಚ್ಚಬಾರದು. ಒಂದು ವೇಳೆ ಬಡವರೇನಾದರೂ ಅಕ್ರಮ ಮನೆ ನಿರ್ಮಿಸಿಕೊಂಡಿದ್ದರೆ ಅವರ ವಾಸಕ್ಕೆ ಮೊದಲು ಪರ್ಯಾಯ ವ್ಯವಸ್ಥೆ ಮಾಡಬೇಕು. ನಂತರ ಅವರ ಮನೆಯನ್ನು ಧ್ವಂಸಗೊಳಿಸಬೇಕು.

- ಯೋಗಿ ಆದಿತ್ಯನಾಥ್‌, ಉತ್ತರ ಪ್ರದೇಶ ಮುಖ್ಯಮಂತ್ರಿ