Asianet Suvarna News Asianet Suvarna News

Bull Drives off lions: ದಾಳಿ ಮಾಡಲು ಬಂದ ಸಿಂಹಗಳ ಬೆನ್ನಟ್ಟಿದ ಎತ್ತು

  • ದಾಳಿ ಮಾಡಲು ಬಂದ ಸಿಂಹಗಳ ಬೆನ್ನಟ್ಟಿದ ಎತ್ತು
  • ಗುಜರಾತ್ ರಾಜ್ಯದ ಹಳ್ಳಿಯೊಂದರಲ್ಲಿ ಘಟನೆ
  • ರೋಚಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್
Bull drives off two lioness in Gujarat village watch video akb
Author
Bangalore, First Published Dec 24, 2021, 4:18 PM IST

ಅಹ್ಮದಾಬಾದ್‌(ಡಿ.24): ತನ್ನ ಮೇಲೆ ದಾಳಿ ಮಾಡಲು ಬಂದ ಎರಡು ಸಿಂಹಗಳನ್ನು ಎತ್ತೊಂದು ಬೆನ್ನಟ್ಟಿದ ಘಟನೆ ಗುಜರಾತ್‌ ರಾಜ್ಯದ ಹಳ್ಳಿಯೊಂದರಲ್ಲಿ ನಡೆದಿದ್ದು, ಇದರ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ರೋಚಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಜುನಗಡ (Junagad) ಜಿಲ್ಲೆಯ ವಿಶ್ವದರ ತಾಲೂಕಿನ ಹದಮತಿಯಾ (Hadmatiya) ಹಳ್ಳಿಗೆ ಎರಡು ಸಿಂಹಗಳು ಸುತ್ತಾಡುತ್ತಾ ಬಂದಿದ್ದು, ಅಲ್ಲೇ ಇದ್ದ ಎತ್ತೊಂದರ ಮೇಲೆ ದಾಳಿ ಮಾಡಲು ಯತ್ನಿಸಿವೆ. ಆರಂಭದಲ್ಲಿ ಸ್ವಲ್ಪ ಹಿಂಜರಿದ ಎತ್ತು ನಂತರ ಈ ಎರಡೂ ಸಿಂಹಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದೆ. ಸಿಂಹಗಳು ಮತ್ತೆ ಮತ್ತೆ ದಾಳಿಗೆ  ಯತ್ನಿಸುತ್ತಿದ್ದಂತೆ ಎತ್ತು ಅವುಗಳತ್ತ ಮುನ್ನುಗಿ ಅವುಗಳನ್ನು ಓಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ನೋಡಿದ ಅನೇಕರು ಎತ್ತಿನ ಸಾಹಸವನ್ನು ಕೊಂಡಾಡಿದ್ದಾರೆ. 

 

ಇತ್ತೀಚಿನ ವರ್ಷಗಳಲ್ಲಿ ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ನುಗ್ಗಿದರೆ ಯಾರಿಗೂ ಅಚ್ಚರಿ ಎನಿಸುವುದಿಲ್ಲ. ಏಕೆಂದರೆ ಕಾಡುಗಳ ನಾಶದ ಪರಿಣಾಮ ಕಾಡು ಪ್ರಾಣಿಗಳು ಕಾಡಿನಂಚಿನ ಗ್ರಾಮಗಳಿಗೆ ಬಂದು ದಾಳಿ ಮಾಡುವುದು ಸಾಮಾನ್ಯ ಎನಿಸಿದೆ. ಪ್ರಾಣಿ ಹಾಗೂ ಮನುಷ್ಯರ ಮುಖಾಮುಖಿಯೂ ಕಾಡು ಪ್ರಾಣಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನವನ್ನು ಹೇಗೆ ಕಳೆದುಕೊಳ್ಳುತ್ತಿವೆ ಎಂಬುದರ ಕುರಿತ ಚರ್ಚೆಯೊಂದಿಗೆ, ಪ್ರತಿ ವರ್ಷವೂ ಇಂತಹ ಮುಖಾಮುಖಿಗಳು ಹೆಚ್ಚಾಗುತ್ತಿವೆ. 

Road Block By Lions:ರಸ್ತೆ ಮಧ್ಯೆ ಸಿಂಹಗಳ ಆಟ.. ರೋಚಕ ದೃಶ್ಯ ಕಣ್ತುಂಬಿಸಿಕೊಂಡ ಪ್ರವಾಸಿಗರು

ಕೆಲ ದಿನಗಳ  ಹಿಂದೆ ಮಧ್ಯಪ್ರದೇಶದಲ್ಲಿ ಚಿರತೆಯೊಂದು ಮಗುವನ್ನು ಎತ್ತಿಕೊಂಡು ಹೋದ ಘಟನೆ ನಡೆದಿತ್ತು. ತಾಯಿಯೊಂದಿಗೆ ಚಳಿ ಕಾಯಿಸುತ್ತ ಕುಳಿತಿದ್ದ 8 ವರ್ಷದ ಬಾಲಕನನ್ನು ಚಿರತೆ ಹೊತ್ತೊಯ್ದಿತ್ತು. ಆದರೆ ಆ ಮಹಾತಾಯಿ ಚಿರತೆಯೊಂದಿಗೆ ಬರಿಗೈಲಿ ಹೋರಾಡಿ ತನ್ನ ಕಂದನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿರುವ ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನ(Sanjay Gandhi National Park)ದ ಸಮೀಪದಲ್ಲಿರುವ ಹಳ್ಳಿಯೊಂದರಲ್ಲಿ ಈ ಸಾಹಸಿ ಘಟನೆ ನಡೆದಿತ್ತು. 

ಬೈಗಾ ಆದಿವಾಸಿ( tribal) ಸಮುದಾಯದ ಕಿರಣ್‌ ಬೈಗಾ(Kiran Baiga) ಎಂಬಾಕೆ ಚಿರತೆಯನ್ನು ಕಿಲೋ ಮೀಟರ್‌ವರೆಗೆ ಹಿಂಬಾಲಿಸಿ ಮಗುವನ್ನು ರಕ್ಷಿಸಿದ್ದರು. ಭಾನುವಾರ ಸಂಜೆ ಇವರು ತಮ್ಮ  ಮೂವರು ಮಕ್ಕಳೊಂದಿಗೆ ಮನೆಯ ಮುಂಭಾಗದಲ್ಲಿ ಬೆಂಕಿ ಹಾಕಿ ಅದರ ಮುಂದೆ ಚಳಿ ಕಾಯಿಸುತ್ತ ಕುಳಿತಿದ್ದರು. ಈ ವೇಳೆ ಧುತ್ತನೇ ಬಂದ ಚಿರತೆಯೊಂದು ಇವರೊಂದಿಗೆ ಕುಳಿತಿದ್ದ ಕಿರಣ್‌ಳ 8 ವರ್ಷದ ಮಗು ರಾಹುಲ್‌(Rahul )ನನ್ನು ಬಾಯಿಯಲ್ಲಿ ಕಚ್ಚಿ ಹೊತ್ತೊಯ್ದಿತ್ತು. ಮಹಿಳೆಯ ಸಾಹಸಿ ಕಾರ್ಯದ ಬಗ್ಗೆ ನಂತರ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. 

Lions Escape At Singapore Airport: ವಿದೇಶಕ್ಕೆ ಸಾಗಿಸುತ್ತಿದ್ದಾಗ ವಿಮಾನ ನಿಲ್ದಾಣದಿಂದ ತಪ್ಪಿಸಿಕೊಂಡ ಸಿಂಹಗಳು!

ಇದೇ ರೀತಿ ಉತ್ತರ ಪ್ರದೇಶದ ಅಲಿಘರ್‌ನಲ್ಲಿ ಶಾಲೆಯೊಂದಕ್ಕೆ ನುಗ್ಗಿ ಚಿರತೆಯೊಂದು ಬಾಲಕನ ಮೇಲೆ ದಾಳಿ ಮಾಡಿತ್ತು. ಮುಂಜಾನೆ ವಿದ್ಯಾರ್ಥಿಗಳು ಕ್ಯಾಂಪಸ್‌ನತ್ತ ಬರುತ್ತಿದ್ದ ವೇಳೆ ಚಿರತೆಯೊಂದು ಶಾಲೆಯ ಆವರಣ ಪ್ರವೇಶಿಸಿದೆ. ಈ ವೇಳೆ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಂತರ ಶಾಲೆಯ ಕೊಠಡಿ ಸೇರಿದ ಚಿರತೆಯನ್ನು ಬಳಿಕ ಕೊಠಡಿಯೊಳಗೆ ಬಂದ್‌ ಮಾಡಲಾಯಿತು. ಅಲಿಘರ್‌ನ ಚೌಧರಿ ನಿಹಾಲ್‌ ಸಿಂಗ್‌  ಇಂಟರ್‌ ಕಾಲೇಜಿ(Chaudhary Nihal Singh Inter College)ನ ಆವರಣದಲ್ಲಿ ಈ ಘಟನೆ ನಡೆದಿತ್ತು. ಕೂಡಲೇ ಅರಣ್ಯಾಧಿಕಾರಿಗಳಿಗೆ ಚಿರತೆ ಇರುವ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಕಾಲೇಜಿನ ಸಿಬ್ಬಂದಿ ಅರಣ್ಯ ಇಲಾಖೆ ಅಧಿಕಾರಿಗಳ ಬರುವಿಕೆಗಾಗಿ ಕಾದು ಕುಳಿತರು. ವಿಷಯ ತಿಳಿದು ಶಾಲೆಯ ಹೊರಭಾಗದಲ್ಲೂ ಭಾರಿ ಜನಜಂಗುಳಿ ಸೇರಿ ಗದ್ದಲಕ್ಕೆ ಕಾರಣವಾಗಿತ್ತು.

Follow Us:
Download App:
  • android
  • ios