ಬೆಂಗಳೂರು(ಮಾ.04): ಕೊರೋನಾ ಹಾವಳಿಯಿಂದ ಸಂಕಷ್ಟದಲ್ಲಿರುವ ರಾಜ್ಯದ ಆರ್ಥಿಕ ಸ್ಥಿತಿಯನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಯಾವ ಕಸರತ್ತು ನಡೆಸಲಿದ್ದಾರೆಂಬ ಕುತೂಹಲದ ಜೊತೆಗೆ ಸಚಿವ ರಮೇಶ್‌ ಜಾರಕಿಹೊಳಿ ‘ಸೀಡಿ ಹಗರಣ’, ಅಕ್ರಮ ಗಣಿಗಾರಿಕೆ ತಾಣಗಳಲ್ಲಿ ನಡೆದ ಸ್ಫೋಟ, ಮೀಸಲಾತಿ ಹೋರಾಟ, ವಿವಿಧ ಪಕ್ಷಗಳಲ್ಲಿ ಇರುವ ಭಿನ್ನಮತದ ವಿಷಯಗಳು ಗುರುವಾರದಿಂದ ಆರಂಭವಾಗಲಿರುವ ವಿಧಾನಮಂಡಲದ ಬಜೆಟ್‌ ಅಧಿವೇಶನದಲ್ಲಿ ಸಾಕಷ್ಟುಕಾವು ಹುಟ್ಟಿಸಲಿವೆ.

ಈ ತಿಂಗಳ ಅಂತ್ಯದವರೆಗೆ ನಡೆಯಲಿರುವ ಅಧಿವೇಶನದಲ್ಲಿ ಬಜೆಟ್‌ ಮೇಲಿನ ಚರ್ಚೆಯ ಜೊತೆಗೆ ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿ ಅವರದ್ದು ಎನ್ನಲಾದ ‘ಸೀಡಿ ಪ್ರಕರಣ’ ಹಾಗೂ ಅದರಲ್ಲಿ ಭ್ರಷ್ಟಾಚಾರದ ಕುರಿತು ಆಡಿರುವ ಮಾತು, ಕಾವೇರಿ ನದಿಯ ಹೆಚ್ಚುವರಿ ನೀರು ಬಳಸಿಕೊಳ್ಳಲು ಮುಂದಾಗಿರುವ ನೆರೆಯ ತಮಿಳುನಾಡು ಸರ್ಕಾರದ ಕ್ರಮ, ಅಕ್ರಮ ಗಣಿಗಾರಿಕೆಗಳಲ್ಲಿ ನಡೆದ ಸ್ಫೋಟ ಪ್ರಕರಣ, ಮೀಸಲಾತಿ ನೀಡುವಂತೆ ವಿವಿಧ ಸಮುದಾಯಗಳು ನಡೆಸುತ್ತಿರುವ ಹೋರಾಟದ ವಿಷಯಗಳು ಸದನದಲ್ಲಿ ಸಾಕಷ್ಟುವಾಗ್ವಾದ, ಕೋಲಾಹಲ ಉಂಟು ಮಾಡುವ ಸಾಧ್ಯತೆಗಳಿವೆ.

‘ಒಂದು ದೇಶ ಒಂದು ಚುನಾವಣೆ’ ವಿಶೇಷ ಚರ್ಚೆ:

ಮೊದಲ ಎರಡು ದಿನಗಳ ಕಾಲ ಅಂದರೆ, ಗುರುವಾರ ಮತ್ತು ಶುಕ್ರವಾರ ‘ಒಂದು ದೇಶ, ಒಂದು ಚುನಾವಣೆ’ ಕುರಿತು ನಡೆಯುವ ಚರ್ಚೆ ನಡೆಯಲಿದೆ. ಸಹಜವಾಗಿ ಸದಸ್ಯರ ಪಕ್ಷಾಂತರ, ಚುನಾವಣೆ ವೆಚ್ಚ, ಮತದಾರರಿಗೆ ಒಡ್ಡುವ ಆಮಿಷ ಇತ್ಯಾದಿಗಳ ಬಗ್ಗೆ ಪ್ರಸ್ತಾಪವಾಗುವ ಸಂಭವವಿದೆ. ಇದಕ್ಕಿಂತ ಹೆಚ್ಚಾಗಿ ಇದೊಂದೇ ವಿಷಯವಾಗಿ ಎಲ್ಲ ಸದಸ್ಯರಿಗೆ ಹೆಚ್ಚಿನ ಕಾಲ ಮಾತನಾಡಲು ಅವಕಾಶ ಸಿಗುವುದು ವಿಶೇಷವಾಗಿದೆ. ಎರಡು ದಿನಗಳ ಕಾಲ ಚರ್ಚೆ ಮಾತ್ರ ನಡೆಸಲಾಗುತ್ತದೆ. ಯಾವುದೇ ನಿರ್ಣಯ ಕೈಗೊಳ್ಳುವುದಿಲ್ಲ. ಲೋಕಸಭೆಗೆ ಚರ್ಚೆಯ ವಿವರಗಳನ್ನು ರವಾನಿಸಲಾಗುತ್ತದೆ. ಅಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. ಇನ್ನುಳಿದಂತೆ ಪ್ರಶ್ನೋತ್ತರ ಅವಧಿ, ಶೂನ್ಯ ವೇಳೆ, ಗಮನ ಸೆಳೆಯುವುದು ಮತ್ತು ಬಜೆಟ್‌ ಮೇಲಿನ ಚರ್ಚೆ ನಡೆಯಲಿದೆ.

ಮಾ.8ರಂದು ರಾಜ್ಯ ಬಜೆಟ್‌ ಮಂಡನೆಯಾಗಲಿದೆ. ನಂತರ ಮಾ.31ರವರೆಗೆ ಪ್ರಶ್ನೋತ್ತರ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆ, ವಿವಿಧ ವಿಧೇಯಕಗಳ ಮಂಡನೆ ಇತ್ಯಾದಿ ಕಲಾಪ ನಡೆಯಲಿವೆ.

ಮೂರು ವಿಧೇಯಕ ಮಂಡನೆ:

ವಿಧಾನಸಭೆಯಲ್ಲಿ ಮೂರು ವಿಧೇಯಕಗಳು ಮಂಡನೆಯಾಗಲಿದ್ದು, ಕರ್ನಾಟಕ ಪುರಸಭೆ ತಿದ್ದುಪಡಿ ವಿಧೇಯಕ, ಸೊಸೈಟಿ ನೋಂದಣಿ ತಿದ್ದುಪಡಿ ವಿಧೇಯಕ ಮತ್ತು ಲೇವಾದೇವಿ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ.

ಮೊಬೈಲ್‌ಗೆ ನಿರ್ಬಂಧ:

ವಿಧಾನ ಪರಿಷತ್‌ನಲ್ಲಿ ಮೊಬೈಲ್‌ ಹಾವಳಿ ತಪ್ಪಿಸಲು ಮೊದಲ ಬಾರಿಗೆ ಸದಸ್ಯರು ಸೇರಿದಂತೆ ಎಲ್ಲರಿಗೂ ಸದನದೊಳಗೆ ಮೊಬೈಲ್‌ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿದೆ. ಮೊಬೈಲ್‌ ಇಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ವಿಧಾನಸಭೆಯಲ್ಲಿ ಈ ಹಿಂದಿನಂತೆ ಪತ್ರಕರ್ತರಿಗೆ ‘ಪತ್ರಕರ್ತರ ವೇದಿಕೆ’ಯಿಂದ ವರದಿ ಮಾಡಲು ಅವಕಾಶ ಮಾಡಲಾಗಿದೆ.

ಕೋವಿಡ್‌ ಸೋಂಕಿನ ಆತಂಕ ಇನ್ನೂ ದೂರವಾಗದ ಹಿನ್ನೆಲೆಯಲ್ಲಿ ಕೋವಿಡ್‌ ಮಾರ್ಗಸೂಚಿ ಅನ್ವಯ ಸದನ ಈ ಬಾರಿಯೂ ನಡೆಯಲಿದೆ. ಕಡ್ಡಾಯ ಇಲ್ಲದಿದ್ದರೂ ವಿಧಾನಸೌಧ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಆರ್‌ಟಿ-ಪಿಸಿಆರ್‌ ಪರೀಕ್ಷೆ ವ್ಯವಸ್ಥೆ ಮಾಡಲಾಗಿದೆ.

ಬಿಗಿ ಬಂದೋಬಸ್ತ್

ಕಲಾಪ ಸುಗಮವಾಗಿ ನಡೆಯಲು ಸಕಲ ಸಿದ್ಧತೆ ಮಾಡಲಾಗಿದ್ದು, ಉಭಯ ಸದನಗಳ ಪ್ರವೇಶ ದ್ವಾರದಲ್ಲಿ ಹೂವಿನಕುಂಡದಿಂದ ಅಲಂಕರಿಸಲಾಗಿದೆ. ಇದರ ಜೊತೆಗೆ ವಿವಿಧ ಸಂಘಟನೆಗಳು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲು ಮುಂದಾಗಿರುವ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತ ಎರಡು ಕಿ.ಮೀ. ವ್ಯಾಪ್ತಿಯಲ್ಲಿ 144ನೇ ವಿಧಿ ಜಾರಿಗೊಳಿಸಲಾಗಿದೆ. ಆಯಕಟ್ಟಿನ ಜಾಗದಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.