೪ಜಿ, ೫ಜಿ ಸೇವೆಗಳ ವಿಳಂಬ ಹಾಗೂ ಕಳಪೆ FTTH ಸೇವೆಯಿಂದ ಬೇಸತ್ತ ಬಿಎಸ್‌ಎನ್‌ಎಲ್ ಉದ್ಯೋಗಿಗಳು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ನಿಧಾನಗತಿಯ ನೆಟ್‌ವರ್ಕ್ ನಿಂದ ಬಳಕೆದಾರರು ಬಿಎಸ್‌ಎನ್‌ಎಲ್ ತೊರೆಯುತ್ತಿದ್ದು, ಭಾರತ್‌ನೆಟ್ ಯೋಜನೆಯೂ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಕಂಪನಿಯ ಈ ದುಸ್ಥಿತಿಗೆ ಸರ್ಕಾರದ ಬೆಂಬಲದ ಕೊರತೆಯೂ ಕಾರಣ ಎನ್ನಲಾಗಿದೆ.

ನವದೆಹಲಿ: ಕಳೆದ ಒಂದು ವರ್ಷದಿಂದ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿತಾ ಶೀಘ್ರದಲ್ಲಿಯೇ 4ಜಿ ನೆಟ್‌ವರ್ಕ್ ಅಳವಡಿಕೆ ಮಾಡಲಾಗುವುದು ಎಂದು ಹೇಳಿಕೊಂಡು ಬರುತ್ತಿದ್ದಾರೆ. ಸ್ಲೋ ನೆಟ್‌ವರ್ಕ್‌ನಿಂದಾಗಿ ಗ್ರಾಹಕರು ಬಿಎಸ್‌ಎನ್ಎಲ್ ತೊರೆಯುತ್ತಿದ್ದಾರೆ. ಜೂನ್ ಅಥವಾ ಜುಲೈಗೆ 4ಜಿ ಇಂಟರ್‌ನೆಟ್ ಆರಂಭವಾಗಲಿದೆ ಎಂದು ಬಿಎಸ್ಎನ್‌ಎಲ್ ಹೇಳಿದೆ. ಬಿಎಸ್‌ಎನ್ಎಲ್ ಉದ್ಯೋಗಿಗಳು ಸಹ 4G, 5G ಕಾದು ಸುಸ್ತಾಗಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲು ಸಿದ್ಧರಾಗುತ್ತಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. 4G, 5G ಸೇವೆಯಲ್ಲಿ ವಿಳಂಬ ಧೋರಣೆ ಮತ್ತು FTTH ಕಳಪೆ ಪ್ರದರ್ಶನ, ಭಾರತ್‌ನೆಟ್ ಪ್ರೊಜೆಕ್ಟ್‌ನಲ್ಲಿ ನಿಧಾನಗತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲು ಬಿಎಸ್‌ಎನ್‌ಎಲ್ ಉದ್ಯೋಗಿಗಳು ಮುಂದಾಗುತ್ತಿದ್ದಾರೆ. 

ಬಿಎಸ್‌ಎನ್‌ಎಲ್ ತೊರೆಯುತ್ತಿರುವ ಬಳಕೆದಾರರು
ಇದು ಸರ್ಕಾರಿ ಕಂಪನಿಯಾಗಿದ್ದು, ಕಡಿಮೆ ಬೆಲೆಗೆ ದೀರ್ಘಾವಧಿಯ ಪ್ಲಾನ್‌ಗಳನ್ನು ನೀಡುತ್ತಿದ್ದರು ಗ್ರಾಹಕರು ಖಾಸಗಿ ನೆಟ್‌ವರ್ಕ್‌ನತ್ತ ಹೋಗುತ್ತಿರೋದು ಬೇಸರದ ಸಂಗತಿಯಾಗಿದೆ. ಖಾಸಗಿ ಕಂಪನಿಗಳಿಗಿಂತ ಬಿಎಸ್‌ಎನ್‌ಎಲ್ ಉತ್ತಮ ಪ್ಲಾನ್‌ಗಳನ್ನು ನೀಡುತ್ತಿದೆ. ಆದ್ರೂ ನೆಟ್‌ವರ್ಕ್ ಸ್ಲೋ ಎಂಬ ಕಾರಣದಿಂದ ಗ್ರಾಹಕರನ್ನು ಕಳೆದುಕೊಳ್ಳುವಂತಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮೇ 16ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೆಸರು ಹೇಳಲು ಇಷ್ಟಪಡದ ಬಿಎಸ್‌ಎನ್‌ಎಲ್ ಉದ್ಯೋಗಿ ಹೇಳುತ್ತಾರೆ. 

ಬಿಎಸ್‌ಎನ್‌ಎನ್ ನೀಡುತ್ತಿರುವ FTTH ಸೇವೆ ಅಂದ್ರೆ ಫೈಬರ್ ಇಂಟರ್‌ನೆಟ್ ಸೇವೆಯಲ್ಲಿಯೂ ಪದೇ ಪದೇ ಅಡಚಣೆಯುಂಟಾಗುತ್ತಿದೆ. FTTH ಸೇವೆಯಲ್ಲಿ ಬೇರೆ ಬೇರೆ ಲೈವ್ ಟಿವಿ ಚಾನೆಲ್‌ಗಳನ್ನು ಸೇರಿಸುತ್ತಿದ್ದರೂ ಗ್ರಾಹಕರು ಖಾಸಗಿ ಫೈಬರ್ ಸೇವೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬಿಎಸ್‌ಎನ್ಎಲ್ ತೊರೆದು ಗ್ರಾಹಕರು ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಫೈಬರ್ ಸೇವೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸ್ಯಾಟ್‌ಲೈಟ್ ಇಂಟರ್‌ನೆಟ್ ಸೇವೆಗಳು ಆರಂಭವಾದ ನಂತರವೂ ಬಿಎಸ್ಎನ್ಎಲ್‌ ಇನ್ನು ಅನೇಕ ಸಮಸ್ಯೆಗಳ ಜಾಲದಲ್ಲಿ ಸಿಲುಕಿದೆ. ಈ ಸಮಸ್ಯೆಗಳ ಸುಳಿಯಿಂದ ಹೊರಬರಲು ಸಂಸ್ಥೆ ಪ್ರಯತ್ನಿಸುತ್ತಿಲ್ಲ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.

ಭಾರತ್‌ನೆಟ್ ಯೋಜನೆಯನ್ನು ಬಹುತೇಕ ಎಲ್ಲಾ ಸರ್ಕಾರಿ ಕಂಪನಿಗಳಿಗೆ ನೀಡಲಾಗಿದೆ. ಆದ್ರೆ ಈ ಯೋಜನೆಗೆ ಕ್ಷಿಪ್ರಗತಿಯಲ್ಲಿ ವೇಗ ಸಿಗುತ್ತಿಲ್ಲ. ಕೆಲ ವರದಿಗಳ ಪ್ರಕಾರ, ಬಿಎಸ್ಎನ್ಎಲ್ ಸಿಎಂಡಿ ರಾಬರ್ಟ್ ಜೆ ರವಿ ಅವರಿಗೆ ಭಾರತೀಯ ಟೆಲಿಕಾಂ ವೇದಿಕೆಯಿಂದ ಪತ್ರ ಬರೆಯಲಾಗಿದೆ. ಸರ್ಕಾರದ ಬೆಂಬಲದ ಹೊರತಾಗಿಯೂ, ಕಂಪನಿಯು ತನ್ನ 4G ಮತ್ತು 5G ಸೇವೆಗಳನ್ನು ನೀಡಲು ತೊಂದರೆ ಎದುರಿಸುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಇದನ್ನೂ ಓದಿ: BSNL ಬಳಕೆದಾರರಿಗೆ ಹೋಳಿ ಹಬ್ಬದ ಭರ್ಜರಿ ಗಿಫ್ಟ್! 425 ದಿನ ವ್ಯಾಲಿಡಿಟಿ, ಉಚಿತ ಡೇಟಾ!

ಕೊಟ್ಟ ಕುದುರೆ ಏರದ BSNL
2024 ಜುಲೈನಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್ ಬೆಲೆಗಳನ್ನು ಹೆಚ್ಚಿಸಿಕೊಂಡಿದ್ದವು. ಈ ಬೆಲೆ ಹೆಚ್ಚಳದ ಲಾಭವನ್ನು ಬಿಎಸ್ಎನ್‌ಎಲ್ ಪಡೆದುಕೊಂಡಿತ್ತು. ಈ ಸಮಯದಲ್ಲಿ ಕೋಟ್ಯಂತರ ಬಳಕೆದಾರರ ಸಂಖ್ಯೆಯನ್ನು ಬಿಎಸ್ಎನ್ಎಲ್‌ ಹೆಚ್ಚಿಸಿಕೊಂಡಿತ್ತು. ಆದ್ರೆ ಬಿಎಸ್‌ಎನ್‌ಎಲ್ ಒದಗಿಸುತ್ತಿರುವ ಕೆಟ್ಟ ಸೇವೆಗಳಿಂದ ಬೇಸತ್ತು ಡಿಸೆಂಬರ್ ನಿಂದಲೇ ಮತ್ತೆ ಬಿಎಸ್ಎನ್ಎಲ್ ತೊರೆದು ಇತರ ನೆಟ್ವರ್ಕ್ಗಳಿಗೆ ಹೋದರು.

ಖಾಸಗಿ ಟೆಲಿಕಾಂ ಕಂಪನಿಗಳು 5G ಸೇವೆ ನೀಡುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್ಎನ್‌ಎಲ್ ಇಂದಿಗೂ 4G ಸೇವೆಯನ್ನು ನೀಡಲು ಪರದಾಡುತ್ತಿದೆ. ಇನ್ನು ಎಷ್ಟೋ ಭಾಗದಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ನಿಂದ ಕರೆ ಮಾಡಲು ಸಹ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿ ಸಿಲುಕಿದೆ. ಕಳೆದ ವರ್ಷ ಸಿಕ್ಕ ಅದ್ಭುತ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಬಿಎಸ್‌ಎನ್‌ಎಲ್ ವಿಫಲವಾಗಿದೆ. ಇತ್ತೀಚಿನ ಟ್ರಾಯ್ ವರದಿ ಪ್ರಕಾರ, ಜನವರಿಯಲ್ಲಿ ಬಿಎಸ್‌ಎನ್‌ಎಲ್ 2 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಕಳೆದುಕೊಂಡಿದೆ.

ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ 6 ತಿಂಗಳ ಪ್ಲಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್; ಇಷ್ಟಕ್ಕೆ ಅಷ್ಟು ಡೇಟಾನಾ?