ಬೆಂಗಳೂರು [ಡಿ.28]:  ಜಾಗತಿಕ ಆರ್ಥಿಕ ಸಮ್ಮೇಳನದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ವಿಜರ್ಲೆಂಡ್‌ಗೆ ಪ್ರಯಾಣಿಸುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷದ ಜ.20ರಿಂದ ಆರಂಭವಾಗಬೇಕಾಗಿರುವ ವಿಧಾನಮಂಡಲದ ಜಂಟಿ ಅಧಿವೇಶನ ಮುಂದೂಡುವ ನಿರೀಕ್ಷೆಯಿದೆ.

ಈ ಬಗ್ಗೆ ಇದುವರೆಗೆ ನಿರ್ಧಾರ ಕೈಗೊಳ್ಳದೇ ಇದ್ದರೂ ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಸ್ಪಷ್ಟತೀರ್ಮಾನ ಹೊರಬೀಳಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಸಂಪುಟ ವಿಸ್ತರಣೆ ಕತೆ?:

ಅಧಿವೇಶನ ಮುಂದೂಡಿಕೆ ಆಗಿದ್ದೇ ಆದಲ್ಲಿ ಸಂಪುಟ ವಿಸ್ತರಣೆ ಮತ್ತಷ್ಟುಗೊಂದಲದ ಗೂಡಾಗುವ ಸಾಧ್ಯತೆ ಇದೆ. ಜ.20ರಿಂದ 10 ದಿನ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ಅದರ ನಂತರವಷ್ಟೇ ಸಂಪುಟ ವಿಸ್ತರಣೆ ನಡೆಯುವ ಬಗ್ಗೆ ಬಿಜೆಪಿ ರಾಜ್ಯ ನಾಯಕತ್ವ ಗಂಭೀರ ಚಿಂತನೆ ನಡೆಸಿದ್ದು, ಅಧಿವೇಶನ ಮುಂದೂಡಿಕೆಯಾದಲ್ಲಿ ಸಂಪುಟ ವಿಸ್ತರಣೆ ಕತೆ ಏನಾಗುತ್ತದೆ ಎಂಬುದು ಹೊಸ ಕುತೂಹಲಕ್ಕೆ ಕಾರಣವಾಗಿದೆ.

ಇದೀಗ ಬಂದ ಸುದ್ದಿ: BSY ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ..!..

ಸಿಎಂ ಸ್ವಿಜರ್ಲೆಂಡ್‌ಗೆ:  ಜ.20ರಿಂದ 24ರವರೆಗೆ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸ್ವಿಜರ್ಲೆಂಡ್‌ನಲ್ಲಿ ನಡೆಯುವ ಆರ್ಥಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳಲಿದ್ದಾರೆ. ಹೀಗಾಗಿ, ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಅಧಿವೇಶನ ನಡೆಸುವ ಬದಲು ಅಧಿವೇಶವನ್ನೇ ಕೆಲದಿನಗಳವರೆಗೆ ಮುಂದೂಡಲು ಸರ್ಕಾರದಲ್ಲಿ ಚಿಂತನೆ ನಡೆದಿದೆ. ವಿದೇಶ ಪ್ರವಾಸದಿಂದ ವಾಪಸಾದ ಬಳಿಕ ಜ.27ರಿಂದ ಜಂಟಿ ಅಧಿವೇಶನ ನಡೆಸುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.