ನವದೆಹಲಿ(ಜ.28): ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಹಾಗೂ ದೇಶದ ಒಳಿತಿಗಾಗಿ ಸಿಎಎ ಕಾಯ್ದೆಯನ್ನು  ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಪ್ರಧಾನ ಮಂತ್ರಿಗಳ ವಾರ್ಷಿಕ ಎನ್‌ಸಿಸಿ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ನೆರೆಯ ರಾಷ್ಟ್ರದ ನಮ್ಮ ಸಹೋದರರು ನಮ್ಮನ್ನು ಕೂಡಿಕೊಳ್ಳಲು ಈ ಕಾನೂನು ನೆರವಾಗಲಿದೆ ಎಂದು ಹೇಳಿದರು.

ದೇಶವನ್ನು ಬಾಧಿಸುತ್ತಿರುವ ದಶಕಗಳಷ್ಟು ಹಳೆಯದಾದ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಪ್ರಯತ್ನಿಸುತ್ತಿದ್ದು, ಸಿಎಎ ಜಾರಿ ಭಾರತದ ಕರ್ತವ್ಯ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಮುಸ್ಲಿಮರಿಗೆ ತೊಂದರೆ ಆದರೆ ಬಿಜೆಪಿ ಹೋರಾಟ: ರಕ್ಷಣಾ ಸಚಿವ ರಾಜನಾಥ್ ಅಭಯ!

ಇದೇ ವೇಳೆ ದೇಶದ ಏಕತೆ ಹಾಗೂ ಅಖಂಡತೆ ಕಾಪಾಡುವಲ್ಲಿ ಎನ್‌ಸಿಸಿ ಪಾತ್ರ ಅತ್ಯಂತ ಮುಖ್ಯ ಎಂದ ಪ್ರಧಾನಿ, ನಮ್ಮ ಗಡಿಗಳು ಎಂದೆಂದಿಗೂ ಸುರಕ್ಷಿತ ಎಂಬುದು ಈ ಯುವ ಸಮುದಾಯವನ್ನು ನೋಡಿದರೆ ಯಾರಿಗಾದರೂ ತಿಳಿಯುತ್ತದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ನೆರೆಯ ಪಾಕಿಸ್ತಾನ ದೇಶವು ಮೂರು ಯುದ್ಧಗಳಲ್ಲಿ ಸೋತಿದೆ.  ಆದರೆ ಭಾರತದ ವಿರುದ್ಧ ಶೀತಲ ಸಮರವನ್ನು ಮುಂದುವರೆಸಿದೆ ಎಂದ ಪ್ರಧಾನಿ, ಪಾಕಿಸ್ತಾನದ ಈ ಕುತಂತ್ರಕ್ಕೆ ಸರಿಯಾದ ಪ್ರತ್ಯುತ್ತರ ನೀಡಲು ನಾವು ಸಮರ್ಥರು ಎಂದು ಹೇಳಿದರು. 

ಈ ವೇಳೆ ದೇಶದ ಮೂಲೆ ಮೂಲೆಗಳಿಂದ ಬಂದಿದ್ದ ಎನ್‌ಸಿಸಿ ಕೆಡೆಟ್‌ಗಳು ಭರ್ಜರಿ ಪರೇಡ್ ನಡೆಸಿದರು. ಪ್ರತಿಭಾನ್ವಿತ ಕೆಡೆಟ್‌ಳಿಗೆ ಪ್ರಧಾನಿ ಮೋದಿ ಪ್ರಶಸ್ತಿ ಪದಕ ವಿತರಿಸಿದರು.