ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಐಫೋನ್‌ಗಾಗಿ ನಡೆದ ಜಗಳದ ಬಳಿಕ ಮಗ ಬೆಟ್ಟದಿಂದ ಧುಮುಕಿದ್ದು, ಆತನನ್ನು ರಕ್ಷಿಸಲು ಹೋದ ತಂದೆ-ತಾಯಿ ಇಬ್ಬರೂ ಬೆಟ್ಟದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಮೃತ ಸಹೋದರನ ಶವ ಕಂಡು ಕಣ್ಣೀರಿಟ್ಟ ತಂಗಿ, ಇನ್ನು ಹತ್ತು ದಿನದಲ್ಲಿ ರಾಖಿ ಇದೆ, ಈಗ ನಾನು ಯಾರಿಗೆ ಫೋನ್ ಮಾಡಲಿ? ಎಂದು ಕರುಣಾಜನಕವಾಗಿ ರೋದಿಸಿರುವುದು ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.

ಮಹಾರಾಷ್ಟ್ರ: ಅಣ್ಣಾ, ಇನ್ನು ಕೇವಲ ಹತ್ತು ದಿನಗಳಲ್ಲಿ ರಕ್ಷಾಬಂಧನ ಹಬ್ಬ ಇದೆ. ಈಗ ನಾನು ಯಾರಿಗೆ ಫೋನ್ ಮಾಡಲಿ? ಯಾರಿಗೆ ರಾಖಿ ಕಟ್ಟಲು ಕರೆಯಲಿ? ಇದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಸರ್ಕಾರಿ ಆಸ್ಪತ್ರೆಯಲ್ಲಿ ತಂಗಿಯೊಬ್ಬಳು ತನ್ನ ಸಹೋದರನ ಶವದ ಮುಂದೆ ನಿಂತು ಕಣ್ಣೀರು ಹಾಕುತ್ತಾ ಆಡಿದ ಕರುಣಾಜನಕ ಮಾತುಗಳು..

ಇತ್ತೀಚೆಗೆ ಇಲ್ಲಿನ ತಿಸ್‌ಗಾಂವ್ ಬಳಿಯ ಖವಡ್ಯಾ ಬೆಟ್ಟದಲ್ಲಿ ನಡೆದ ಭೀಕರ ಕೌಟುಂಬಿಕ ದುರಂತ ಇಡೀ ದೇಶವನ್ನೇ ನಡುಗಿಸಿದೆ. ಮೊಬೈಲ್ ಫೋನ್‌ಗಾಗಿ ನಡೆದ ಜಗಳದಲ್ಲಿ ಮಗ ಬೆಟ್ಟದಿಂದ ಧುಮುಕಿದಾಗ, ಆತನನ್ನು ರಕ್ಷಿಸಲು ಹೋದ ತಂದೆ ಮತ್ತು ಈ ದೃಶ್ಯವನ್ನು ಕಣ್ಣಾರೆ ಕಂಡು ಆಘಾತಕ್ಕೊಳಗಾದ ತಾಯಿ ಬೆಟ್ಟದಿಂದ ಬಿದ್ದು ಸಾವನ್ನಪ್ಪಿದ್ದರು. ಶನಿವಾರ ಮೃತರ ಮರಣೋತ್ತರ ಪರೀಕ್ಷೆ ಮುಗಿದ ನಂತರ ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ತಂದಾಗ ಇಡೀ ಆಸ್ಪತ್ರೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.

ಕೊನೆಯ ಭೇಟಿಯೂ ಆಸ್ಪತ್ರೆಯಲ್ಲೇ ಆಯಿತು!

ಮೃತ ಮುರಳಿಧರ್ ಚಂದ್ವಾಡೆ ಅವರಿಗೆ ಮೂವರು ಸಹೋದರಿಯರಿದ್ದಾರೆ. ಸುಮಾರು ಐದು ತಿಂಗಳ ಹಿಂದೆ ನಡೆದ ಸೋದರಳಿಯನ ಮದುವೆಗೆ ಮುರಳಿಧರ್ ಅವರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಸಹೋದರ-ಸಹೋದರಿಯರ ಭೇಟಿಯೇ ಆಗಿರಲಿಲ್ಲ. ಇತ್ತೀಚೆಗಷ್ಟೇ ಫೋನ್‌ನಲ್ಲಿ ಮಾತನಾಡಿದ್ದ ಮುರಳಿಧರ್, ಶೀಘ್ರದಲ್ಲೇ ಭೇಟಿಯಾಗುವುದಾಗಿ ತಂಗಿಗೆ ಭರವಸೆ ನೀಡಿದ್ದರು. ಮುಂದಿನ ಭೇಟಿ ಹೀಗೆ ಶವಗಾರದಲ್ಲಿ ಆಗುತ್ತದೆ ಎಂದು ಯಾರು ತಾನೇ ಊಹಿಸಿದ್ದರು? ರಕ್ಷಾಬಂಧನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಸಹೋದರನ ಅಗಲಿಕೆಯಿಂದ ಸೋದರಿಯರು ಕಣ್ಣೀರಿನ ಕಡಲಲ್ಲಿ ಮುಳುಗಿದ್ದಾರೆ.

ಐಫೋನ್‌ಗಾಗಿ ಹಠ ಹಿಡಿದಿದ್ದ ಮಗ

ವರದಿಗಳ ಪ್ರಕಾರ ಮೃತ ಮುರಳಿಧರ್ ಅವರು ಟ್ರಕ್ ಚಾಲಕರಾಗಿದ್ದು, ಕೆಲಸದ ನಿಮಿತ್ತ ಮನೆಯಿಂದ ದೂರ ಇರುತ್ತಿದ್ದರು. ಇವರ 18 ವರ್ಷದ ಮಗ ಕುಣಾಲ್ ಚಂದ್ವಾಡೆಗೆ ಈಗಾಗಲೇ ಐಫೋನ್ ಇದ್ದರೂ ಆತ ಇನ್ನೂ ಹೊಸ ಹಾಗೂ ಅಪ್‌ಡೇಟೆಡ್ ಐಫೋನ್ ಬೇಕೆಂದು ಹಠ ಹಿಡಿದಿದ್ದ. ಹಳೆಯ ಫೋನ್‌ನ ಕೆಲವು ಕಂತುಗಳು (EMIs) ಬಾಕಿ ಇದ್ದ ಕಾರಣ ತಂದೆ ಹೊಸ ಫೋನ್ ಕೊಡಿಸಲು ಒಪ್ಪಿರಲಿಲ್ಲ. ಇದೇ ವಿಚಾರವಾಗಿ ತಂದೆ-ಮಗನ ನಡುವೆ ಕಳೆದ ಎರಡು ದಿನಗಳಿಂದ ತೀವ್ರ ಜಗಳ ನಡೆದಿತ್ತು.

ರಕ್ಷಿಸಲು ಹೋದ ಹೆತ್ತವರೂ ಸಾವು

ಶುಕ್ರವಾರ ಬೆಳಗ್ಗೆ ತಂದೆಯೊಂದಿಗೆ ಜಗಳವಾಡಿದ ಕುಣಾಲ್ ಮನೆಯಿಂದ ಹೊರಟು ತಿಸ್‌ಗಾಂವ್‌ನ ಖವಡ್ಯಾ ಬೆಟ್ಟದ ತುದಿಗೆ ಹೋಗಿ ನಿಂತಿದ್ದ. ಮಾಹಿತಿ ತಿಳಿದು ಹೆತ್ತವರು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿದರು. ಸುಮಾರು ಮೂರು ಗಂಟೆಗಳ ಕಾಲ ಆತನಿಗೆ ಬೆಟ್ಟದಿಂದ ಇಳಿದು ಬರುವಂತೆ ಎಲ್ಲರೂ ಮನವಿ ಮಾಡಿದರು ಸ್ಥಳೀಯ ಪಂಚಾಯತ್ ಅಧ್ಯಕ್ಷರು ಆತನಿಗೆ ತಾನೇ ಹೊಸ ಐಫೋನ್ ಕೊಡಿಸುವುದಾಗಿ ಆಮಿಷ ಒಡ್ಡಿದರೂ ಕುಣಾಲ್ ಒಪ್ಪಲಿಲ್ಲ.

ನನಗೆ ತಂದೆಯೊಂದಿಗೆ ಇರಲು ತೊಂದರೆಯಿದ್ದರೆ ನಾನು ನಿನ್ನ ಜೊತೆಗೇ ಇರುತ್ತೇನೆ, ಬೇಕಿದ್ದರೆ ನನ್ನ ಮಾಂಗಲ್ಯ ಸರವನ್ನೂ ಎಸೆದುಬಿಡುತ್ತೇನೆ, ಬಂದುಬಿಡು ಮಗನೇ ಎಂದು ತಾಯಿ ಸಂಗೀತ ಕಣ್ಣೀರು ಹಾಕುತ್ತಾ ಕೈಮುಗಿದು ಬೇಡಿಕೊಂಡರು. ಆದರೆ ಯಾರ ಮಾತುಗಳಿಗೂ ಮಣಿಯದ ಕುಣಾಲ್ ಬೆಟ್ಟದಿಂದ ಧುಮುಕಿದನು. ಆತನನ್ನು ಹಿಡಿದು ರಕ್ಷಿಸಲು ಮುಂದಾದ ತಂದೆ ಮುರಳಿಧರ್ ಕೂಡ ಕಾಲು ಜಾರಿ ಆಳವಾದ ಕಂದಕಕ್ಕೆ ಬಿದ್ದರು. ತನ್ನ ಕಣ್ಣೆದುರೇ ಗಂಡ ಹಾಗೂ ಮಗ ಕಂದಕಕ್ಕೆ ಬಿದ್ದ ಭೀಕರ ದೃಶ್ಯವನ್ನು ಸಹಿಸಲಾಗದ ತಾಯಿ ಸಂಗೀತ ಕೂಡ ತಕ್ಷಣವೇ ಬೆಟ್ಟದಿಂದ ಕೆಳಗೆ ಧುಮುಕಿದರು. ಮೂವರೂ ಸ್ಥಳದಲ್ಲೇ ಮೃತಪಟ್ಟರು.

ಈ ಕುಟುಂಬದ ದುರಂತದ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಈ ದಂಪತಿ ಸುಮಾರು ಆರು ವರ್ಷಗಳ ಹಿಂದೆಯಷ್ಟೇ ತಮ್ಮ ಹಿರಿಯ ಮಗನನ್ನು ಕಳೆದುಕೊಂಡಿದ್ದರು. ಈಗ ಕಿರಿಯ ಮಗನ ಹಠ ಹಾಗೂ ಆತನನ್ನು ಉಳಿಸಲು ಹೋಗಿ ಹೆತ್ತವರೂ ಸಾವನ್ನಪ್ಪುವ ಮೂಲಕ ಇಡೀ ಕುಟುಂಬವೇ ಸರ್ವನಾಶವಾಗಿದೆ. ಈ ಭೀಕರ ಘಟನೆ ಇಡೀ ಗ್ರಾಮಸ್ಥರನ್ನು ಮತ್ತು ಸಂಬಂಧಿಕರನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ.