ಅಹಮ್ಮದಾಬಾದ್ ಏರ್ ಇಂಡಿಯಾ ವಿಮಾನ ದುರಂತಕ್ಕೂ ಕೆಲವೇ ಕ್ಷಣಗಳ ಮುನ್ನ ಬ್ರಿಟಿಷ್ ಪ್ರಯಾಣಿಕ ತೆಗೆದ ಕೊನೆಯ ವಿಡಿಯೋ ಪತ್ತೆಯಾಗಿದೆ. ಗುಡ್ ಬೈ ಟು ಇಂಡಿಯಾ ಎಂದಿರುವ ಈ ವಿಡಿಯೋ ಹಲವರ ಕಣ್ಣಾಲಿ ತೇವಗೊಳಿಸಿದೆ. 

ಅಹಮ್ಮದಾಬಾದ್(ಜೂ.12) ಅಹಮ್ಮದಾಬಾದ್ ಏರ್ ಇಂಡಿಯಾ ವಿಮಾನದಲ್ಲಿದ್ದ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ಎಲ್ಲಾ ಪ್ರಯಾಣಿಕರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ವಿಮಾನದಲ್ಲಿ 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸರು, ಒರ್ವ ಕೆನಡಾ ಪ್ರಜೆ ಹಾಗೂ 169 ಭಾರತೀಯರು ಪ್ರಯಾಣಿಸಿದ್ದರು. ಈ ಪೈಕಿ ಬ್ರಿಟಿಷ್‌ ಇಬ್ಬರು ಪ್ರಜೆಗಳು ಮಾಡಿದ ವಿಡಿಯೋ ಪತ್ತೆಯಾಗಿದೆ. ಕೊನೆಯದಾಗಿ ವಿಡಿಯೋ ತೆಗೆದು ಪೋಸ್ಟ್ ಮಾಡಿದ್ದಾರೆ. ಗುಡ್ ಬೈ ಟು ಇಂಡಿಯಾ ಎಂದು ಹೇಳಿ ವಿಮಾನ ಹತ್ತಿದ ಬ್ರಿಟಿಷ್ ಪ್ರಜೆಗಳಿಗೆ ಇದು ಕೊನೆಯ ಪ್ರಯಾಣ ಅನ್ನೋ ಸಣ್ಣ ಸುಳಿವು ಇರಲಿಲ್ಲ.

ಕೊನೆಯ ವಿಡಿಯೋ

ಬ್ರಿಟಿಷ್ ಪ್ರಜೆ ಜ್ಯಾಮಿ ರೇ ಮೀಕ್ ಹಾಗೂ ಆತನ ಸ್ನೇಹಿತ ಇಬ್ಬರು ಭಾರತಕ್ಕೆ ಪ್ರವಾಸಕ್ಕೆ ಆಗಮಿಸಿದ್ದರು. ಇಲ್ಲಿನ ಹಲವು ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಿದ್ದರು. ಜನಸಂದಣಿ ಪ್ರದೇಶ, ಮಾರುಕಟ್ಟೆ ಸೇರಿದಂತೆ ಹಲವು ಪ್ರದೇಶಗಳ ಸುತ್ತಾಡಿದ್ದಾರೆ. ಕೊನೆಗೆ ಅಹಮ್ಮದಾಬಾದ್ ಮೂಲಕ ಲಂಡನ್‌ಗೆ ಮರಳಲು ಏರ್ ಇಂಡಿಯಾ ವಿಮಾನ ಹತ್ತಿದ್ದಾರೆ.ಬೋರ್ಡಿಂಗ್‌ಗೂ ಮುನ್ನ ಲಾಂಜ್‌ನಲ್ಲಿ ಕುಳಿತಿದ್ದ ಜ್ಯಾಮಿ ರೇ ಮೀಕ್ ಹಾಗೂ ಆತನ ಸ್ನೇಹಿತ ವಿಡಿಯೋ ಮಾಡಿದ್ದಾರೆ. ಆದರೆ ಇದೇ ವಿಡಿಯೋ ಕೊನೆಯ ವಿಡಿಯೋ ಆಗಿದೆ.

ಗುಡ್ ಬೈ ಟು ಇಂಡಿಯಾ

ನಾವೀಗ ವಿಮಾನ ನಿಲ್ದಾಣದಲ್ಲಿದ್ದೇವೆ. ಇನ್ನೇನು ವಿಮಾನ ಬೋರ್ಡಿಂಗ್ ಆಗಬೇಕಿದೆ. ಗುಡ್ ಬೈ ಟು ಇಂಡಿಯಾ, ಸುದೀರ್ಘ 10 ಗಂಟೆಗಳ ಲಂಡನ್ ಪ್ರಯಾಣ ಇದು. ಸ್ನೇಹಿತ ಜೊತೆಗಿನ ಮಾತುಕತೆಯ ಈ ವಿಡಿಯೋದಲ್ಲಿ ಮೀಕ್, ಭಾರತ ಪ್ರಯಾಣದಲ್ಲಿನ ಅತೀ ದೊಡ್ಡ ಟೇಕ್ ಅವೇ ಎಂದರೆ ನಾನು ತಾಳ್ಮೆ ಕಳೆದುಕೊಂಡಿಲ್ಲ ಎಂದಿದ್ದಾರೆ. ಲಂಡನ್‌ಗೆ ಅತ್ಯಂತ ಸಂತೋಷದಿಂದ, ಖುಷಿ ಖುಷಿಯಾಗಿ ಮರಳುತ್ತಿದ್ದೇನೆ ಎಂದು ವಿಡಿಯೋ ಮಾಡಿದ್ದಾರೆ.

View post on Instagram

ಈ ವಿಡಿಯೋ ಮಾಡಿದ ಬಳಿಕ ವಿಮಾನ ಹತ್ತಿದ ಮೀಕ್ ಹಾಗೂ ಆತನ ಸ್ನೇಹಿತ ಇಬ್ಬರು ಪ್ರಯಾಣ ಬೆಳೆಸಿದ್ದಾರೆ. ಅಹಮ್ಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ 5 ನಿಮಿಷದಲ್ಲಿ ವಿಮಾನ ಪತನಗೊಂಡಿದೆ. ಗುಡ್ ಬೈ ಟು ಇಂಡಿಯಾ ಎಂದು ವಿಡಿಯೋ ಮಡಿದ್ದ ಇಬ್ಬರು ಬ್ರಿಟಿಷ್ ಪ್ರಜೆಗಳಿಗೆ ಈ ಜಗತ್ತಿಗೆ ವಿದಾಯ ಹೇಳಿರುವುದು ದುರಂತ. ನಗು ಮುಖದಿಂದ ಖುಷಿಯಾಗಿ ತವರಿಗೆ ಮರಳುವ ಸಂಭ್ರಮದಲ್ಲಿದ್ದ ಇಬ್ಬರು ದುರಂತ ಅಂತ್ಯಕಂಡಿದ್ದಾರೆ. ಇದೀಗ ಇವರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

241 ಮಂದಿ ಮೃತ

ಅಹಮ್ಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಕೆಲವೇ ದೂರದಲ್ಲಿರುವ ಮೆಘಾನಿನಗರದಲ್ಲಿರುವ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೇಲೆ ವಿಮಾನ ಪತನಗೊಂಡಿದೆ. ಈ ವಿಮಾನದಲ್ಲಿ ಪ್ರಯಾಣಿಸಿದ ಓರ್ವ ಹೊರತುಪಡಿಸಿ ಇನ್ನುಳಿದ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಹಮ್ಮದಾಬಾದ್ ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ. ವಿಮಾನದಲ್ಲಿ ಇಬ್ಬರು ಪೈಲೆಟ್ , ಕ್ಯಾಬಿನ ಕ್ರೂ ಸೇರಿದಂತೆ 242 ಮಂದಿ ಪ್ರಯಾಣ ಬೆಳೆಸಿದ್ದರು.